ಸಾರಾಂಶ
ಕ್ರಿಕೆಟರ್ ಅನಿಲ್ ಕುಂಬ್ಳೆ ಶಿಖರೋಪನ್ಯಾಸ, ದೇಶದ 45 ಸಂಸ್ಥೆಗಳ 400 ಪ್ರತಿನಿಧಿಗಳು ಭಾಗಿ
ಕನ್ನಡಪ್ರಭ ವಾರ್ತೆ ಮಣಿಪಾಲಇಲ್ಲಿನ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಕ್ಯಾಂಪಸ್‌ನಲ್ಲಿ ಮೂರು ದಿನಗಳ ಮಾಹೆ ಮಾದರಿ ವಿಶ್ವಸಂಸ್ಥೆ (ಮಾಹೆ-ಎಂಯುಎನ್)- 2025 ಆಯೋಜಿಸಿತ್ತು.ಈ ಸಮ್ಮೇಳನದಲ್ಲಿ ದೇಶಾದ್ಯಂತದಿಂದ 45ಕ್ಕೂ ಶಿಕ್ಷಣ ಸಂಸ್ಥೆಗಳಿಂದ 400ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಸಂಪೂರ್ಣವಾಗಿ ವಿದ್ಯಾರ್ಥಿಗಳ ನೇತೃತ್ವದ ಈ ಸಮ್ಮೇಳನವು ಕ್ರಿಕೆಟ್ ದಂತಕಥೆ ಅನಿಲ್ ಕುಂಬ್ಳೆ ಅವರ ಅಧ್ಯಕ್ಷತೆಯಲ್ಲಿ ಸಮಾರೋಪಗೊಂಡಿತು.ಅನಿಲ್ ಕುಂಬ್ಳೆ ಸಮ್ಮೇಳನದ ಶಿಖರೋಪನ್ಯಾಸ ನೀಡಿ, ಪ್ರತಿದಿನವೂ ಪರಿಪೂರ್ಣವಾಗಿರುವುದಿಲ್ಲ. ಆದರೆ ಪ್ರತಿ ದಿನವೂ ನಿಮಗೆ ಏನನ್ನಾದರೂ ಕಲಿಸುತ್ತದೆ. ತಾಳ್ಮೆ, ಸ್ಥಿತಿಸ್ಥಾಪಕತ್ವ ಮತ್ತು ತಂಡವನ್ನು ಮುನ್ನಡೆಸುವುದನ್ನು ನನಗೆ ಕ್ರಿಕೆಟ್ ಕಲಿಸಿದೆ. ಮಾದರಿ ವಿಶ್ವಸಂಸ್ಥೆ ಕೂಡ ಅದೇ ಉದ್ದೇಶವನ್ನು ಹೊಂದಿದ್ದು, ಅಲ್ಲಿ ಹೊಂದಿಕೊಳ್ಳುವಿಕೆ ಮತ್ತು ತಂಡವಾಗಿ ಕೆಲಸ ಮಾಡುವುದು ಮುಖ್ಯವಾಗಿರುತ್ತದೆ. ಮಾಹೆಯಲ್ಲಿ ಇಂತಹ ಸಮ್ಮೇಳನ ನಡೆಯುತ್ತಿರುವ ಶ್ಲಾಘನೀಯ ಎಂದರು.ಈ ಸಂದರ್ಭ ಮಾಹೆಯ ಉಪಕುಲಾಧಿಪತಿ ಲೆ.ಜ. ಡಾ. ಎಂ.ಡಿ. ವೆಂಕಟೇಶ್ ಉಪಸ್ಥಿತರಿದ್ದರು.‘ರಾಜತಾಂತ್ರಿಕತೆಯಲ್ಲಿ ಏಕತೆ, ವೈವಿಧ್ಯತೆಯಲ್ಲಿ ಶಕ್ತಿ’ ಎಂಬ ಧ್ಯೇಯವಾಕ್ಯದೊಂದಿಗೆ ನಡೆದ ಈ ಸಮ್ಮೇಳನದಲ್ಲಿ ಮಾಹೆಯ ಎಲ್ಲ ಅಂಗಸಂಸ್ಥೆಗಳ ಜೊತೆಗೆ ಗೋವಾದ ಬಿಐಟಿಎಸ್ ಪಿಲಾನಿ, ಎನ್‌ಐಟಿಕೆ ಸುರತ್ಕಲ್, ಎನ್‌ಎಂಎಎಂಐಟಿ ನಿಟ್ಟೆ, ದಯಾನಂದ ಸಾಗರ್ ವಿಶ್ವವಿದ್ಯಾಲಯ, ಪುಣೆಯ ಭಾರತಿ ವಿದ್ಯಾಪೀಠ ಕಾನೂನು ಕಾಲೇಜು, ಗೋವಾ ವಿಶ್ವವಿದ್ಯಾಲಯ, ಪಿಐಸಿಟಿ ಪುಣೆ, ಎಸ್‌ಡಿಎಂ ಕಾನೂನು ಕಾಲೇಜು ಮತ್ತು ಸೇಂಟ್ ಅಲೋಶಿಯಸ್ ಪರಿಗಣಿತ ವಿವಿ ಸೇರಿದಂತೆ ಪ್ರತಿಷ್ಠಿತ ಸಂಸ್ಥೆಗಳು ಭಾಗವಹಿಸಿ ವೈವಿಧ್ಯಮಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ, ರಾಜತಾಂತ್ರಿಕ ಉಪನ್ಯಾಸ, ವಿಚಾರ ವಿನಿಮಯಗಳಲ್ಲಿ ಭಾಗವಹಿಸಿದವು.