ಮಾಹೆ: ಮಕ್ಕಳ ಕ್ಯಾನ್ಸರ್ ವಿರುದ್ಧ ‘ಶಿಶು ಭಾರತ್’ ಕಾರ್ಯಾಗಾರ

| Published : Sep 11 2025, 12:04 AM IST

ಸಾರಾಂಶ

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇದರ ಅಂಗಸಂಸ್ಥೆ ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಹಾಗೂ ಮಣಿಪಾಲ್ ಸ್ಕೂಲ್ ಆಫ್ ಕಾಮರ್ಸ್ ಆ್ಯಂಡ್ ಎಕನಾಮಿಕ್ಸ್ ವತಿಯಿಂದ ಬುಧವಾರ ಮಕ್ಕಳ ಕ್ಯಾನ್ಸರ್ ಮತ್ತು ಆರೈಕೆ ಬಗ್ಗೆ ‘ಶಿಶು ಭಾರತ್: ನರ್ಚರಿಂಗ್ ಬ್ರೇವ್ ಹಾರ್ಟ್ಸ್ ಆಫ್ ಇಂಡಿಯಾ’ ಎಂಬ ಕಾರ್ಯಾಗಾರವನ್ನು ಆಯೋಜಿಸಲಾಯಿತು.

ಕನ್ನಡಪ್ರಭ ವಾರ್ತೆ ಮಣಿಪಾಲಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇದರ ಅಂಗಸಂಸ್ಥೆ ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಹಾಗೂ ಮಣಿಪಾಲ್ ಸ್ಕೂಲ್ ಆಫ್ ಕಾಮರ್ಸ್ ಆ್ಯಂಡ್ ಎಕನಾಮಿಕ್ಸ್ ವತಿಯಿಂದ ಬುಧವಾರ ಮಕ್ಕಳ ಕ್ಯಾನ್ಸರ್ ಮತ್ತು ಆರೈಕೆ ಬಗ್ಗೆ ‘ಶಿಶು ಭಾರತ್: ನರ್ಚರಿಂಗ್ ಬ್ರೇವ್ ಹಾರ್ಟ್ಸ್ ಆಫ್ ಇಂಡಿಯಾ’ ಎಂಬ ಕಾರ್ಯಾಗಾರವನ್ನು ಆಯೋಜಿಸಲಾಯಿತು.ಮುಖ್ಯ ಅತಿಥಿಗಳಾಗಿ ಕ್ಯಾಲಿಫೋರ್ನಿಯಾದ ದಿ ಡಿಯೋಟ್ ಫೌಂಡೇಶನ್ ಸಂಸ್ಥಾಪಕಿ ಅನಘಾ ಜೋಶಿ, ಭೌಗೋಳಿಕ ಅಂತರಗಳ‍ನ್ನು ಮೀರಿ ಆರೋಗ್ಯ ಸೇವೆ, ಹಣಕಾಸಿನ ಸಹಾಯ ಮತ್ತು ಸಮುದಾಯ ಬೆಂಬಲ ಒಟ್ಟುಗೂಡಿಸಿ, ಮಕ್ಕಳ ಕ್ಯಾನ್ಸರ್ ವಿರುದ್ಧ ಸ್ಪಷ್ಟ ಪರಿಹಾರ ಮಾರ್ಗವೊಂದನ್ನು ಕಂಡುಕೊಳ್ಳುವುದು ಈ ಶಿಶು ಭಾರತ್ ಕಾರ್ಯಾಗಾರದ ಉದ್ದೇಶವಾಗಿದೆ ಎಂದು ಹೇಳಿದರು.ಧರ್ಮಂಬಳ ನಮಸಿವಾಯಂ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿ ಎ.ಡಿ. ಸೆಂದುರೇಸ್ವರನ್, ‘ದಿ ಪವರ್ ವಿತಿನ್’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ, ಕ್ಯಾನ್ಸರ್‌ನೊಂದಿಗೆ ಹೋರಾಡಿ ಬದುಕುಳಿದ ಮಕ್ಕಳ ಅದ್ಭುತ ಕತೆಗಳನ್ನು ಹಂಚಿಕೊಂಡರು. ಎಲುಬಿನ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದ ವೀನಾ ಟಿ.ಎನ್., ತಮ್ಮ ಮನಕಲಕುವ ಅನುಭವವನ್ನು ಹಂಚಿಕೊಂಡಿದ್ದು, ಪ್ರೇಕ್ಷಕರನ್ನು ಭಾವನಾತ್ಮಕಗೊಳಿಸಿತು.ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿರುವ ಯಾವುದೇ ಮಗುವು ತಾನು ಒಂಟಿಯಲ್ಲ, ಅಂತಹ ಪ್ರತಿಯೊಂದು ಕುಟುಂಬದೊಂದಿಗೆ ಮಾಹೆ ಇರುತ್ತದೆ. ಈ ಮಕ್ಕಳ ಧೈರ್ಯ, ಅವರ ಕುಟುಂಬಗಳ ಬೆಂಬಲ, ವೈದ್ಯಕೀಯ ತಜ್ಞರ ಸಹಕಾರವು ಕ್ರಿಯಾಶೀಲ ಪರಿಹಾರ ಕಂಡುಕೊಳ್ಳುವುದಕ್ಕೆ ಮಾಹೆಗೆ ಸ್ಫೂರ್ತಿಯಾಗಿದೆ ಎಂದರು.ಬಿಓಬಿ ಕಾರ್ಡ್ಸ್‌ನ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ರೈ, ಮಾಹೆ ಸಹಉಪಕುಲಪತಿ ಡಾ. ಶರತ್ ಕೆ. ರಾವ್, ಕೆಎಂಸಿಯ ಮಕ್ಕಳ ಕ್ಯಾನ್ಸರ್ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ವಾಸುದೇವ ಭಟ್ ಕೆ. ಉಪಸ್ಥಿತರಿದ್ದರು.ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿರುವ ಮಕ್ಕಳು ಪ್ರಸ್ತುತ ಪಡಿಸಿದ ನೃತ್ಯ ಪ್ರದರ್ಶನ ಕಾರ್ಯಾಗಾರದ ವಿಶೇಷವಾಗಿತ್ತು. ಹಿಲ್ಡಾ ಕರ್ನೆಲಿಯೋ ವಂದಿಸಿದರು.