ಕ್ರಿಯಾಶೀಲ ಪೀಳಿಗೆಯ ನಿರ್ಮಾಣಕ್ಕೆ ಶಿಕ್ಷಕರು ಮಂದಾಗಿ: ಗಂಗಾಧರ ಗೌಡ

| Published : Sep 11 2025, 12:04 AM IST

ಕ್ರಿಯಾಶೀಲ ಪೀಳಿಗೆಯ ನಿರ್ಮಾಣಕ್ಕೆ ಶಿಕ್ಷಕರು ಮಂದಾಗಿ: ಗಂಗಾಧರ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಕ್ರಿಯಾಶೀಲ ಪೀಳಿಗೆಯ ನಿರ್ಮಾಣಕ್ಕೆ ಶಿಕ್ಷಕ ವೃಂದ ಕಾರಣವಾಗಬೇಕು ಎಂದು ಶಿಕ್ಷಕ ಗಂಗಾಧರ್‌ ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ವಿದ್ಯಾರ್ಥಿಗಳಲ್ಲಿ ಸೖಜನಶೀಲತೆ ಸೃಷ್ಟಿಸುವ ಮೂಲಕ ಕ್ರಿಯಾಶೀಲ ಪೀಳಿಗೆಯ ನಿರ್ಮಾಣಕ್ಕೆ ಶಿಕ್ಷಕ ವೃಂದ ಕಾರಣವಾಗಬೇಕು ಎಂದು ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಕೆ.ಆರ್. ಗಂಗಾಧರ ಗೌಡ ಕರೆ ನೀಡಿದ್ದಾರೆ.ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನೇಷನ್ ಬಿಲ್ಡರ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಗಂಗಾಧರ ಗೌಡ, ಜೀವನದ ಸೌಂದರ್ಯವೇ ಅದ್ಬುತವಾಗಿರುತ್ತದೆ. ನಾಳೆ ಎಂಬುದೇ ಜೀವನದ ಭರವಸೆಯಾಗಿರುವಾಗ ಮಕ್ಕಳ ಪಾಲಿಗೆ ಇಂಥ ನಾಳೆಗಳನ್ನು ಅತ್ಯಂತ ಸುಂದರವಾಗಿಸುವ ನಿಟ್ಟಿನಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸುತ್ತಾರೆ ಎಂದೂ ಅವರು ಅಭಿಪ್ರಾಯಪಟ್ಟರು.

ಓರ್ವ ಗುರು, ಬ್ರಹ್ಮ, ವಿಷ್ಮು, ಮಹೇಶ್ವರರು ನಿರ್ವಹಿಸಿದಂಥ ಸೃಜನಶೀಲತೆ, ತಂತ್ರಗಾರಿಕಾ ನಿಪುಣ, ಲಯಕರ್ತನ ಪಾತ್ರ ವಹಿಸುತ್ತಾರೆ. ಹೀಗಾಗಿಯೇ ಇಂದಿಗೂ ಸಮಾಜದಲ್ಲಿ ಗುರುವಿನ ಸ್ಥಾನಕ್ಕೆ ಪರ್ಯಾಯ ಎಂಬುದೇ ಇಲ್ಲ ಎಂದು ಹೆಮ್ಮೆಯಿಂದ ನುಡಿದ ಗಂಗಾಧರ ಗೌಡ, ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಿದರೆ ಅದಕ್ಕಿಂತ ಸಾರ್ಥಕತೆ ಶಿಕ್ಷಕನೋರ್ವನಿಗೆ ಬೇಕಾಗಿಲ್ಲಿ ಎಂದೂ ಅನಿಸಿಕೆ ವ್ಯಕ್ತಪಡಿಸಿದರು.

ರೋಟರಿ ವಲಯ 6 ರ ಸಹಾಯಕ ಗವರ್ನರ್ ಧಿಲನ್ ಚಂಗಪ್ಪ ಮಾತನಾಡಿ, ಭಾರತದಂಥ ದೇಶವು ಕೇವಲ ಮೂಲಸೌಲಭ್ಯದಿಂದಾಗಿ ಮಾತ್ರ ಅಭಿವೃದ್ಧಿಯಾಗದೇ ಸೇವಾನಿರತ ಶಿಕ್ಷಕರ ಗರಡಿಯಲ್ಲಿ ಪಳಗಿ ಉತ್ತಮ ಪ್ರಜೆಗಳಾದವರಿಂದಾಗಿಯೂ ಪ್ರಗತಿಯಾಗಿದೆ ಎಂದರು. ಪ್ರತೀ ವರ್ಷವೂ ಸಾಮಾಜಿಕ ಸೇವಾ ಸಂಸ್ಥೆಯಾದ ರೋಟರಿಯು ತನ್ನ ಕಾರ್ಯವ್ಯಾಪ್ತಿಯಲ್ಲಿನ ಅತ್ಯುತ್ತಮ ಶಿಕ್ಷಕರನ್ನು ಗುರುತಿಸಿ ಅವರಿಗೆ ನೇಷನ್ ಬಿಲ್ಡರ್ ಪ್ರಶಸ್ತಿಯನ್ನು ಪ್ರದಾನ ಮಾಡುವ ಮೂಲಕ ಸಮಾಜದ ಪರವಾಗಿ ಶಿಕ್ಷಕ ವರ್ಗವನ್ನು ಗೌರವಿಸುತ್ತಾ ಬಂದಿದೆ. ಆ ಮೂಲಕ ಪ್ರಶಸ್ತಿಗೆ ಭಾಜನರಾಗುವ ಶಿಕ್ಷಕರ ಸೇವೆಗೆ ಪ್ರೋತ್ಸಾಹ ನೀಡುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಮಾತನಾಡಿ, ಕಳೆದ 9 ವರ್ಷಗಳಿಂದ ರೋಟರಿ ಮಿಸ್ಟಿ ಹಿಲ್ಸ್ ಸಮಾಜದಲ್ಲಿನ ಸಾಧಕ ಶಿಕ್ಷಕರಿಗೆ ಗೌರವ ಸಲ್ಲಿಸುತಾ ಬಂದಿದೆ. ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ನೆರವು ಸೇರಿದಂತೆ ಶೈಕ್ಷಣಿಕ ಕ್ಷೇತ್ರಕ್ಕೆ ಮಿಸ್ಟಿ ಹಿಲ್ಸ್ ಅನೇಕ ರೀತಿಯಲ್ಲಿ ಕೊಡುಗೆ ನೀಡಿದೆ ಎಂದು ಮಾಹಿತಿ ನೀಡಿದರು.

ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಬಿ.ಕೆ. ಕಾರ್ಯಪ್ಪ ವಂದಿಸಿದ ಕಾರ್ಯಕ್ರಮದಲ್ಲಿ ಮಿಸ್ಟಿ ಹಿಲ್ಸ್ ವೋಕೇಷನಲ್ ಸರ್ವೀಸ್ ನಿರ್ದೇಶಕ ಡಾ.ಸಿ.ಆರ್.ಪ್ರಶಾಂತ್ ಹಾಜರಿದ್ದರು. ಮಿಸ್ಟಿ ಹಿಲ್ಸ್ ನಿರ್ದೇಶಕ ಅನಿಲ್ ಹೆಚ್.ಟಿ. ನಿರೂಪಿಸಿ, ಅಂಬೆಕಲ್ ವಿನೋದ್, ಬಿ.ಜಿ. ಅನಂತಶಯನ, ದೇವಣಿರ ತಿಲಕ್, ಲೀನಾ ಪೂವಯ್ಯ, ಸ್ನೇಹಿತ್, ಶುಭಾ ವಿಶ್ವನಾಥ್, ಸನ್ಮಾನಿತರ ಪರಿಚಯ ಮಾಡಿದರು.

ಸೆ.30 ರಂದು ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಮಕ್ಕಳ ದಸರಾ ಪ್ರಚಾರದ ರೀಲ್ಸ್ ನ್ನು ಇದೇ ಸಂದರ್ಭ ಬಿಡುಗಡೆಗೊಳಿಸಲಾಯಿತು.

ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆರು ಮಂದಿಗೆ ನೇಷನ್ ಬಿಲ್ಡರ್ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಮದೆ ಮಹೇಶ್ವರ ಶಿಕ್ಷಣ ಸಂಸ್ಥೆಯ ನಿವೖತ್ತ ಪ್ರಾಂಶುವಾಲ ಬಾರಿಯಂಡ ಜೋಯಪ್ಪ, ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲಾ ಪ್ರಾಂಶುಪಾಲೆ ಬಾಳೆಯಡ ಸವಿತಾ ಪೂವಯ್ಯ, ಕೊಡಗು ವಿದ್ಯಾಲಯದ ಶಿಕ್ಷಕಿ ಅಲೆಮಾಡ ಚಿತ್ರಾನಂಜಪ್ಪ, ಮೂರ್ನಾಡು ಪ.ಪೂ.ಕಾಲೇಜಿನ ಉಪಪ್ರಾಂಶುಪಾಲೆ ಪಳಂಗಂಡ ದೇವಕ, ಸುಂಟಿಕೊಪ್ಪದ ಸ್ವಸ್ಥ ವಿಶೇಷ ಮಕ್ಕಳ ಕಲಿಕಾ ಶಾಲೆಯ ಕೆ.ಲೀಲಾವತಿ, ನಾಪೋಕ್ಲುವಿನ ಶ್ರೀರಾಮಟ್ರಸ್ಟ್ ಶಿಕ್ಷಕಿ ಶ್ವೇತಾ ಲೀಲಾವತಿ ಅವರಿಗೆ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಅರಂತೋಡಿನ ಗಂಗಾಧರ ಗೌಡ ಅವರು ನೇಷನ್ ಬಿಲ್ಡರ್ ಪ್ರಶಸ್ತಿ ಪ್ರದಾನ ಮಾಡಿದರು.