ಕನ್ನಡಪ್ರಭ ವಾರ್ತೆ ನಾಗಮಂಗಲ
ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಋತುಚಕ್ರ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ ಬದಲು ಮುಟ್ಟಿನ ಕಪ್ ಬಳಸುವುದರಿಂದ ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಪರಿಸರವನ್ನೂ ರಕ್ಷಣೆ ಮಾಡಬಹುದು ಎಂದು ಜಿ.ಬೊಮ್ಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಭಿಜ್ಞಾನ ತಿಳಿಸಿದರು.ಪಟ್ಟಣದ ಶಿಕ್ಷಕರ ಭವನದಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ವತಿಯಿಂದ ತಾಲೂಕಿನ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಎನ್‌ಆರ್‌ಎಲ್‌ಎಂ ಒಕ್ಕೂಟದ ಮಹಿಳಾ ಸಿಬ್ಬಂದಿಗೆ ಆಯೋಜಿಸಿದ್ದ ಮುಟ್ಟಿನ ಕಪ್ ಕುರಿತು ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಹಿಳೆಯರು ಋತುಚಕ್ರವಾದಾಗ ಈ ಹಿಂದೆ ಬಟ್ಟೆ ನಂತರದ ದಿನಗಳಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಿದ್ದರು. ಇದರಿಂದ ಬಳಸಿದ ಪ್ಯಾಡ್‌ಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ಕಾರಣ ಪರಿಸರ ಮಾಲಿನ್ಯ ಉಂಟಾಗುತ್ತಿತ್ತು. ಜೊತೆಗೆ ಸಾಕಷ್ಟು ಆರೋಗ್ಯ ಸಮಸ್ಯೆ ಎದುರಿಸುವಂತಾಗಿತ್ತು. ಆದ್ದರಿಂದ ಮಹಿಳೆಯರು ಆರೋಗ್ಯದಾಯಕ ಮತ್ತು ಪರಿಸರ ಸ್ನೇಹಿಯಾಗಿರುವ 5 ರಿಂದ 10 ವರ್ಷ ಕಾಲ ಮರುಬಳಕೆ ಮಾಡಬಹುದಾದ ಮುಟ್ಟಿನ ಕಪ್ ಬಳಕೆಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು.ತಾಪಂ ಇಒ ಬಿ.ಎಸ್.ಸತೀಶ್ ಮಾತನಾಡಿ, ಮಹಿಳೆಯರು ಆರೋಗ್ಯವಾಗಿದ್ದರೆ ಇಡೀ ಕುಟುಂಬವೇ ಆರೋಗ್ಯವಾಗಿರುತ್ತದೆ. ಆ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಪ್ಯಾಡ್‌ಗಳು ರಾಸಾಯನಿಕ ಮತ್ತು ಸಿಂಥೆಟಿಕ್ ವಸ್ತುಗಳನ್ನು ಹೊಂದಿರುತ್ತವೆ. ಇವುಗಳನ್ನು ಬಳಸುವುದರಿಂದ ಮಹಿಳೆಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ಉತ್ತಮ ಗುಣಮಟ್ಟದ ಮುಟ್ಟಿನ ಕಪ್‌ಗಳನ್ನು ವೈದ್ಯಕೀಯ ಮಟ್ಟದ ಸಿಲಿಕಾನ್‌ನಿಂದ ಮಾಡಲಾಗಿದೆ. ಇದರಿಂದ ಯಾವುದೇ ಆರೋಗ್ಯ ಸಮಸ್ಯೆ ಎದುರಾಗುವುದಿಲ್ಲ ಎಂದು ಹೇಳಿದರು.
ಬಿಇಒ ಎಸ್.ಆರ್.ಲೋಕೇಶ್ ಮಾತನಾಡಿ, ಮಹಿಳೆಯರು ಕೆಲಸ ಕಾರ್ಯಗಳ ಒತ್ತಡ ನಡುವೆ ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸುತ್ತಿಲ್ಲ. ಇದರಿಂದಾಗಿ ಅಧಿಕ ರಕ್ತದೊತ್ತಡ, ಸಕ್ಕರೆ ಖಾಯಿಲೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಪ್ರತಿನಿತ್ಯ ಕನಿಷ್ಠ 1 ಗಂಟೆ ಮಹಿಳೆಯರು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.
ನಂತರ ತಾಲೂಕಿನ ಎಲ್ಲಾ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಎನ್‌ಆರ್‌ಎಲ್‌ಎಂ ಒಕ್ಕೂಟದ ಮಹಿಳಾ ಸಿಬ್ಬಂದಿಗಳಿಗೆ ಉಚಿತವಾಗಿ ಮುಟ್ಟಿನ ಕಪ್‌ಗಳನ್ನು ವಿತರಿಸಲಾಯಿತು. ಬೇಸಿಗೆಯಲ್ಲಿ ಬಿಸಿಯಾದ ಗಾಳಿ ಶಾಖ ತರಂಗ ನಿಯಂತ್ರಿಸಿ ಆರೋಗ್ಯ ಸುರಕ್ಷತೆ ಕಾಪಾಡಿಕೊಳ್ಳುವ ಕುರಿತು ಜನಜಾಗೃತಿ ಮೂಡಿಸುವ ಕರಪತ್ರ ಬಿಡುಗಡೆ ಮಾಡಲಾಯಿತು.
ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ನಾರಾಯಣ, ಸಿಡಿಪಿಒ ಕೃಷ್ಣಮೂರ್ತಿ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕಿ ರಂಜಿತ, ತಾಪಂ ಸಹಾಯಕ ನಿರ್ದೇಶಕ ವಿ.ಕೃಷ್ಣಮೂರ್ತಿ, ಟಿಎಚ್‌ಒ ಕಚೇರಿಯ ಆರೋಗ್ಯ ನಿರೀಕ್ಷಕ ಸಿದ್ದಲಿಂಗಸ್ವಾಮಿ, ಆಂಕಣಕಾರ ಬಿ.ಚಂದ್ರೇಗೌಡ ಸೇರಿದಂತೆ ತಾಲೂಕಿನ ಎಲ್ಲಾ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಕೃಷಿ ಸಖಿಯರು, ಪಶು ಸಖಿಯರು, ಎನ್‌ಆರ್‌ಎಲ್‌ಎಂ ಒಕ್ಕೂಟದ ಸಿಬ್ಬಂದಿ ಇದ್ದರು.