ಮೆಕ್ಕೆಜೋಳ ಇಳುವರಿ ಬೆಲೆ ಕುಸಿತದಿಂದಾಗಿ ಕಂಗಾಲಾಗಿರುವ ಹಿರೇಕೆರೂರು ತಾಲೂಕಿನ ರೈತರು ತೆನೆ ಮುರಿದು ಹೊಲಗಳಲ್ಲಿಯೇ ರಾಶಿ ಹಾಕಿರುವುದು ಸಾಮಾನ್ಯವಾಗಿದೆ.

ರವಿ ಮೇಗಳಮನಿಹಿರೇಕೆರೂರು:ತಾಲೂಕಿನಲ್ಲಿ ಈ ಬಾರಿ ಅತಿವೃಷ್ಟಿಯಿಂದ ಮೆಕ್ಕೆಜೋಳ ಇಳುವರಿ ಕುಸಿತಗೊಂಡಿದೆ. ಇದು ಸಾಲದೆಂಬಂತೆ ದಿಢೀರ್ ದರ ಕುಸಿತ ರೈತರನ್ನು ಚಿಂತೆಗೀಡು ಮಾಡಿದೆ. ಬೆಲೆ ಕುಸಿತದಿಂದಾಗಿ ಕಂಗಾಲಾಗಿರುವ ರೈತರು ತೆನೆ ಮುರಿದು ಹೊಲಗಳಲ್ಲಿಯೇ ರಾಶಿ ಹಾಕಿರುವುದು ಸಾಮಾನ್ಯವಾಗಿದೆ.ಮಳೆಯಿಂದಾಗಿ ಜಮೀನಿನಲ್ಲಿ ನೀರು ನಿಂತು ಮೆಕ್ಕೆಜೋಳ ಫಂಗಸ್ ಬರುವ ಮೂಲಕ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ರೈತರು ಮೆಕ್ಕೆಜೋಳ ಮುರಿದು ರಾಶಿ ಹಾಕಿ ಮಾರಾಟಕ್ಕೆ ಮುಂದಾಗುತ್ತಿದ್ದಾರೆ.

ಆದರೆ ದರ ಕುಸಿತ ರೈತರು ತಲೆಮೇಲೆ ಕೈಹೊತ್ತು ಕೂರುವಂತೆ ಮಾಡಿದೆ. ಈ ಬಾರಿ ಕ್ವಿಂಟಲ್‌ಗೆ ಕನಿಷ್ಠ 2000ದಿಂದ 2500 ರು. ವರೆಗೆ ಮೆಕ್ಕೆಜೋಳ ಮಾರಾಟವಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ಹಾಗಾಗಿ ಬಹುತೇಕರು ಜೋಳ ಮುರಿಸಿದ್ದರೂ ಒಕ್ಕಲು ಮಾಡಿಲ್ಲ. ತೆನೆ ಒಡೆಸದೆ ರಾಶಿ ಹಾಕಿದ್ದು ಉತ್ತಮ ದರದ ನಿರೀಕ್ಷೆಯಲ್ಲಿದ್ದಾರೆ.

ಈಗ ದರ ದಿನದಿಂದ ದಿನಕ್ಕೆ ಕುಸಿಯುತ್ತಿರುವ ಕಾರಣ ಆತಂಕಗೊಂಡಿರುವ ಹಲವರು ಜೋಳ ಮಾರಾಟ ಮಾಡಲು ಮುಂದಾಗಿದ್ದಾರೆ. ರೈತರ ಸಂದಿಗ್ಧ ಸ್ಥಿತಿ ಅರಿತ ವ್ಯಾಪಾರಸ್ಥರು ಕಡಿಮೆ ದರಕ್ಕೆ ಕೇಳುತ್ತಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ.ಜಮೀನು ಹಸನು, ಬಿತ್ತನೆ ಬೀಜ, ಗೊಬ್ಬರ, ಔಷಧ, ಕಳೆ ನಿವಾರಣೆ, ಕೊಯ್ಲಿನ ದರ ಗಗನಮುಖಿ ಆಗಿವೆ. ಕೂಲಿಗಳನ್ನು ಕಲೆ ಹಾಕಿ ನಿಗದಿತ ಸಮಯದಲ್ಲಿ ಕೃಷಿ ಕೆಲಸ ಮಾಡುವುದು ಉಸಿರುಗಟ್ಟಿಸಿದೆ. ಪ್ರಕೃತಿ ವಿಕೋಪ, ಗಿಳಿ ಹಾಗೂ ಪ್ರಾಣಿಗಳ ಕಾಟದಲ್ಲಿ ಬೆಳೆ ಉಳಿಸಿಕೊಳ್ಳಲು ಹೋರಾಟ ಮಾಡಬೇಕಾದ ಸ್ಥಿತಿ ರೈತರದ್ದಾಗಿದೆ. ಕಳೆದ ವರ್ಷ ಮೆಕ್ಕೆಜೋಳದ ದರ 2200ರಿಂದ 2300ರ ವರೆಗೆ ಇತ್ತು. ಈ ಬಾರಿ 1600ರಿಂದ 1900ರ ವರೆಗೆ ಖರೀದಿ ನಡೆಯುತ್ತಿದೆ.ಖರೀದಿ ಕೇಂದ್ರ ಯಾವಾಗ?: ಸರ್ಕಾರ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿಗೆ ಮುಂದಾಗಬೇಕು ಇಲ್ಲವಾದರೆ ಇದನ್ನೇ ನಂಬಿರುವ ರೈತರ ಬದುಕು ಅಯೋಮಯವಾಗುತ್ತದೆ. ರೈತರು ಸಹ ಖರೀದಿ ಕೇಂದ್ರ ತೆರೆಯಹುದು ಎಂಬ ಆಶಾಭಾವನೆ ಹೊಂದಿದ್ದು ಸರಕಾರ ಇದರ ಕಡೆ ಚಿತ್ತ ಹರಿಸಬೇಕಿದೆ. ಖರೀದಿ ಆರಂಭಿಸದಿದ್ದರೆ ಬೆಂಬಲ ಬೆಲೆ ಘೋಷಿಸಿಯೂ ಉಪಯೋಗ ಇಲ್ಲವಾಗುತ್ತದೆ.

ಮೆಕ್ಕೆಜೋಳ ಬೆಳೆದ ರೈತರು ಈ ಬಾರಿಯ ಅತಿವೃಷ್ಟಿಯಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರಕಾರ ಕೂಡಲೇ ಖರೀದಿ ಕೇಂದ್ರ ಆರಂಭಿಸಬೇಕು. ಕ್ವಿಂಟಲ್‌ಗೆ ಕನಿಷ್ಠ 2500 ರು. ಬೆಂಬಲ ಬೆಲೆ ನೀಡಬೇಕು. ಇಲ್ಲವಾದರೆ ರೈತರು ಬದುಕು ಬೀದಿಗೆ ಬರಲಿದೆ.ಒಂದು ಎಕರೆ ಮೆಕ್ಕೆಜೋಳ ಬೆಳೆಯಲು 25,000 ಖರ್ಚು ತಗುಲಲಿದೆ. ಪ್ರತಿ ಎಕರೆಗೆ 15ರಿಂದ 20 ಕ್ವಿಂಟಲ್ ಸರಾಸರಿ ಇಳುವರಿ ಇದೆ. ಮನೆ ಮಂದಿಯೆಲ್ಲ ಬೆಳೆ ನಿರ್ವಹಣೆಗೆ ಪಟ್ಟ ಶ್ರಮಕ್ಕೆ ಕಿಂಚಿತ್ತೂ ಪ್ರತಿಫಲ ಇಲ್ಲದಂತಾಗಿದೆ. ಸರ್ಕಾರ ಖರೀದಿ ಕೇಂದ್ರವನ್ನು ಪ್ರಾರಂಭಿಸಬೇಕು ಎಂದು ರೈತ ಮುಖಂಡ ರಾಜಶೇಖರ ದೂದಿಹಳ್ಳಿ ಹೇಳಿದರು.

ರೈತರು ತಮ್ಮ ಉತ್ಪನ್ನವನ್ನು ಮಾರಾಟ ಮಾಡಿದ ಮೊತ್ತಕ್ಕೆ ರಾಜ್ಯ ಸರ್ಕಾರದಿಂದ ವ್ಯತ್ಯಾಸದ ಮೊತ್ತವನ್ನು ಸರ್ಕಾರದ ಆದೇಶದ ಪ್ರಕಾರ ಭರಿಸಲಾಗುವುದು ಎಂದು ಎಪಿಎಂಸಿ ಕಾರ್ಯದರ್ಶಿ ಮನೋಹರ್ ಬಾರ್ಕಿ ಹೇಳಿದರು.