ಹರಿಹರ:ಗ್ರಹಗತಿಗಿಂತಾ ಗುರುವೇ ಗತಿ ಎಂದಾಗ ಸಕಲ ಜ್ಞಾನ ಸಿಗಲು ಸಾಧ್ಯ ಎಂದು ಅವಧೂತ ಕವಿ ಗುರುರಾಜ ಗುರೂಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹರಿಹರ

ಹರಿಹರ:ಗ್ರಹಗತಿಗಿಂತಾ ಗುರುವೇ ಗತಿ ಎಂದಾಗ ಸಕಲ ಜ್ಞಾನ ಸಿಗಲು ಸಾಧ್ಯ ಎಂದು ಅವಧೂತ ಕವಿ ಗುರುರಾಜ ಗುರೂಜಿ ತಿಳಿಸಿದರು.

ನಗರದ ಜೆ. ಸಿ.ಬಡಾವಣೆಯಲ್ಲಿರುವ ಶ್ರೀ ಮಹಾ ತಪಸ್ಸಿ ಫೌಂಡೇಷನ್, ಶ್ರೀ ಮಹಾ ತಪಸ್ವಿ ಮಹಾ ಸಂಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಶ್ರೀ 1008 ಮಹಾ ತಪಸ್ವಿ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಧರ್ಮ ಸೂರ್ಯ ಲಿಂಗೈಕ್ಯ ಸಿದ್ಧಲಿಂಗ ಶ್ರೀ ಅವರ 90ನೇ ವರ್ಷದ ಪುಣ್ಯ ಸ್ಮರಣೋತ್ಸವ, ಉಚಿತ ಆಯುರ್ವೇದಿಕ್ ಆರೋಗ್ಯ ತಪಾಸಣಾ ಶಿಬಿರದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮನುಷ್ಯ ಜಾತಿಯಲ್ಲಿ ಎಲ್ಲರೂ ಗುರುಗಳಾಗಲು ಸಾಧ್ಯವಿಲ್ಲ, ಯಾರು ಲೋಕ ಕಲ್ಯಾಣಕ್ಕಾಗಿ ಜೀವನವನ್ನು ಮೀಸಲಿಡುತ್ತಾರೊ ಅವರು ಗುರುಗಳಾಗಲು ಸಾಧ್ಯ, ಅಂಥವರಲ್ಲಿ ಉಜ್ಜಯಿನಿಯ ಲಿಂಗೈಕ್ಯ ಸಿದ್ಧಲಿಂಗ ಶ್ರೀ ಅವರು ಒಬ್ಬರು. ರಂಭಾಪುರಿ ಪೀಠಕ್ಕೆ ಬಂದ ಆಪತ್ತು ನಿವಾರಣೆಗಾಗಿ ತಪಸ್ಸು ಆಚರಿಸಿ ಪರಶಿವನನ್ನೆ ಒಲಿಸಿಕೊಂಡು ಇಡೀ ವೀರಶೈವ ಧರ್ಮ ಹಾಗೂ ಸಮಾಜ ಕಾಪಾಡಿದ್ದರು ಎಂದರು.

ಗುರುಗಳ ಸೇವೆ ಮಾಡುವಾಗ ಸಣ್ಣ ಸೇವೆ ದೊಡ್ಡ ಸೇವೆ ಎಂದಿಲ್ಲ. ಕಾಯಾ, ವಾಚಾ, ಮನಸ್ಸಿನಿಂದ ಮಾಡುವ ಎಲ್ಲ ಸೇವೆಗಳೂ ಸನ್ನಿಧಿಗೆ ಸಲ್ಲುತ್ತವೆ. ಮನಸ್ಸು ಶುದ್ಧವಾಗಿದ್ದರೆ ಶುದ್ಧಫಲ ಸಿಗುತ್ತದೆ. ಹಾಗಾಗಿ ನಮ್ಮ ಸಂಸ್ಥೆಯು ಸೇವೆಯೇ ಸೌಭಾಗ್ಯ ಎಂಬ ಧ್ಯೇಯೊಕ್ತಿಯಡಿ ಕಾರ್ಯ ನಿರ್ವಹಿಸುತ್ತಾ ಬಂದಿದೆ ಹಾಗಾಗಿ ನಮ್ಮ ಸಂಸ್ಥೆಯು 250 ಕ್ಕೂ ಹೆಚ್ಚು ಸ್ಥಳಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಸಮಾಜ, ಪ್ರಕೃತಿ, ಧರ್ಮ ಪಾಲನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಮಾಡಿ, ಗುರುರಕ್ಷೆ ನೀಡಲಾಗಿದೆ ಎಂದರು.

ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ. ಡಿ.ಎಂ.ಮಂಜುನಾಥಸ್ವಾಮಿ ಮಾತನಾಡಿ, ಪರಮಾತ್ಮ ಎಲ್ಲಾ ಕಡೆಗೆ ತಾನು ಇರಲಾಗದೆಂದು ತನ್ನ ಭಕ್ತರ ಅಭೀಷ್ಟೆಗಳ ಈಡೇರಿಕೆಗಾಗಿ ತಾಯಿ ಮತ್ತು ಗುರುವನ್ನು ಸೃಷ್ಟಿಸಿದ್ದಾನೆ. ಪ್ರತಿಯೊಬ್ಬರೂ ಗುರುವಿನ ಗುಲಾಮರಾಗಬೇಕು. ಗುರುವಿನ ಗುಲಾಮರಾಗದ ತನಕ ಮುಕ್ತಿ ದೊರಕದು. ಗುರುವಿಗೆ ಸಂಪೂರ್ಣವಾಗಿ ಶರಣಾದಾಗ ಮಾತ್ರ ಗುರುವಿನ ಕೃಪೆ ದೊರೆಯುತ್ತದೆ ಎಂದರು.

ಫೌಂಡೇಷನ್ ಉಪಾಧ್ಯಕ್ಷ ಪ್ರೊ.ಸಿ.ವಿ.ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಅಂತಾರಾಷ್ಟ್ರೀಯ ಯೋಗಪಟು ಸೃಷ್ಟಿ ಕೆ.ವೈ.ಗೆ ಸನಾತನ ಯೋಗ ಸಂವರ್ಧಿನಿ ವರ್ಷದ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅವಧೂತ ಕವಿ ಗುರುರಾಜ ಗುರೂಜಿ ನೇತೃತ್ವದಲ್ಲಿ ದೇವಸ್ಥಾನ ಅಭಿವೃದ್ಧಿ, ಹಿಂದುಸ್ಥಾನ ಸಮೃದ್ಧಿ. ಹಾಗೂ ಮನೆ ಮನೆಗೆ ಮಹಾಸನ್ನಿಧಿ. ಅಭಿಯಾನದ ಪೊಸ್ಟರ್ ಬಿಡುಗಡೆ ಮಾಡಲಾಯಿತು

ಮುಖ್ಯ ಅತಿಥಿಗಳಾಗಿ ಬಿ.ಪಿ.ಹರೀಶ್ ಪುತ್ರ ಅರ್ಜುನ್ ಪಾಟೀಲ್, ವೀರಶೈವ ಮಹಾ ಸಭಾ ನಗರ ಘಟಕದ ಅಧ್ಯಕ್ಷ ಮುರುಗೇಶಪ್ಪ, ಟಿ. ಜೆ, ದಾವಣಗೆರೆಯ ಆಯುರ್ವೇದಿಕ್ ವೈದ್ಯ ಡಾ.ಎಲ್.ಎಂ.ಜ್ಞಾನೇಶ್ವರ, ವಕೀಲೆ ಪ್ರಿಯಾಂಕಾ ಸಿ.ಎಂ,, ವಿಎಫ್ ಒಎಕ್ಸ್ ವೆಂಚರ್ಸ್ ನಿರ್ದೇಶಕಿ ಗಾಯತ್ರಿ ಬಿ.ಎಂ., ಜೋತಿಷ್ಯ ವಿದ್ವಾನ್‌, ಜೋತಿಷ್ಯ ಹಂಸ ಪ್ರಶಸ್ತಿ ಪುರಸ್ಕೃತ ಡಾ.ನಾಗರಾಜ್ ಹುಬ್ಬಳ್ಳಿ, ಇತರರು ಭಾಗವಹಿಸಿದ್ದರು.