ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಐಎಎಸ್, ಐಪಿಎಸ್, ಐಎಫ್‌ಎಸ್, ಕೆಎಎಸ್ ಆಗಬೇಕೆಂಬ ಕನಸು ಹೊತ್ತಿರುವ ಪೋಷಕರಿಗೆ ವಿದ್ಯಾರ್ಥಿಗಳಾದ ನೀವು ನಿಮ್ಮ ಪೋಷಕರ ಕನಸನ್ನು ನನಸು ಮಾಡುವತ್ತ ಗುರಿ ಹೊಂದಬೇಕು ಎಂದು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು.ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಾಲಪ್ಪ ಪ್ರತಿಷ್ಠಾನದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕೌಶಲ್ಯ ಅಭಿಯಾನ ಯುವ ಸಬಲೀಕರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತುಮಕೂರು ಜಿಲ್ಲಾಧಿಕಾರಿಯಾಗಿ ಬಂದಿರುವ ಶುಭಕಲ್ಯಾಣ್, ತುಮಕೂರು ಮಹಾನಗರಪಾಲಿಕೆಗೆ ಆಯುಕ್ತರಾಗಿ ಬಂದಿರುವ ಅಶ್ವಿಜ ಮತ್ತು ಎಸ್ಪಿ ಅಶೋಕ್ ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ನಿಮ್ಮ ಗುರಿಯನ್ನು ತಲುಪಬೇಕು ಎಂದು ಹೇಳಿದರು.ಸ್ವಉದ್ಯೋಗ ಕೈಗೊಳ್ಳುವ ಅಭ್ಯರ್ಥಿಗಳು ಪ್ರಾಜೆಕ್ಟ್ ವರದಿ ಹೇಗೆ ಸಿದ್ಧಪಡಿಸಬೇಕು, ಹಣಕಾಸು ಹೇಗೆ ಒದಗಿಸಬೇಕು, ಆಮದು ರಫ್ತು ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಬಗ್ಗೆ ನಿಮಗೆ ಉದ್ಯೋಗ ಅಧಿಕಾರಿಗಳು ಈ ಕಾರ್ಯಾಗಾರದಲ್ಲಿ ತಿಳಿಸಿಕೊಡಲಿದ್ದು, ಇದರ ಸದುಪಯೋಗ ಪಡಿಸಿಕೊಂಡು ನಿಮ್ಮ ಭವಿಷ್ಯ ಉಜ್ವಲವಾಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಇಂದು ಅನೇಕ ಉನ್ನತ ಹುದ್ದೆಯಲ್ಲಿರುವವರು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲೇ ಓದಿರುವಂತಹದ್ದು, ನೀವೂ ಕೂಡ ಸರ್ಕಾರಿ ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡಿರುವ ಹಿನ್ನೆಲೆಯಲ್ಲಿ ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ. ಸುರೇಶ್ ಬಾಬು ಮಾತನಾಡಿ, ವಿದ್ಯಾರ್ಥಿಗಳು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಈ ಕಾರ್ಯಾಗಾರ ಅತ್ಯವಶ್ಯಕವಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಕರೆ ನೀಡಿದರು.
ನಿಮಗೆ ಯಾವ ಕ್ಷೇತ್ರದಲ್ಲಿ ಆಸಕ್ತಿಯಿದೆಯೋ ಆ ಕ್ಷೇತ್ರದಲ್ಲಿ ತೊಡಗಿಕೊಂಡು ಭವಿಷ್ಯವನ್ನು ಉತ್ತಮ ಪಡಿಸಿಕೊಳ್ಳಬಹುದು. ಇಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಾವ ರೀತಿ ಎದುರಿಸಬೇಕು ಎಂಬುದರ ಬಗ್ಗೆ ನಿಮಗೆ ಇಂತಹ ಕಾರ್ಯಾಗಾರಗಳಲ್ಲಿ ತಿಳಿಸಿಕೊಡಲಾಗುತ್ತದೆ. ಜೊತೆಗೆ ನಿಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.ಸ್ಪರ್ಧಾತ್ಮಕ ಪರೀಕ್ಷೆ ತರಬೇತುದಾರ ರಾಜೀವ್ ಪಟೇಲ್ ಮಾತನಾಡಿ, ಯಾವ ದೇಶದಲ್ಲಿ ಮಹಿಳೆಯರು ಬಹಳಷ್ಟು ಅಭಿವೃದ್ಧಿಯಾಗುತ್ತಾರೋ ಆ ದೇಶ ಯಾವುದೇ ಕಾರಣಕ್ಕೂ ಹಿಂದುಳಿಯಲು ಸಾಧ್ಯವಾಗುವುದಿಲ್ಲ ಎಂದರು.
ಜಗತ್ತಿನಲ್ಲಿ 100 ಶ್ರೀಮಂತರಿದ್ದಾರಲ್ಲ, ಅವರ್‍ಯಾರು ಕೂಡ ಶ್ರೀಮಂತರ ಮಕ್ಕಳಲ್ಲ, ತಮ್ಮ ಕೌಶಲ್ಯ ಮತ್ತು ತಂತಜ್ಞಾನವನ್ನು ಬಳಸಿ ಅಸಾಧ್ಯವಾದುದನ್ನು ಸಾಧಿಸಿ ಶ್ರೀಮಂತರಾಗಿದ್ದಾರೆ. ಇಂತಹ ಅನೇಕ ಉದಾಹರಣೆಗಳಿವೆ. ನೀವೂ ಸಹ ನಿಮ್ಮ ಕೌಶಲ್ಯ ಮತ್ತು ತಂತ್ರಜ್ಞಾನವನ್ನು ಬಳಸಿ ಉನ್ನತ ಸ್ಥಾನಕ್ಕೇರಬೇಕೆಂದು ಹೇಳಿದರು.ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ, ತುಮಕೂರಿನಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಎಸ್‌ಎಸ್‌ಎಲ್‌ಸಿಯಿಂದ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಐಟಿಐ, ಡಿಪ್ಲೊಮೊ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳು ನೊಂದಾಯಿಸಿಕೊಳ್ಳುತ್ತಾರೆ. ನೀವೂ ಸಹ ನೋಂದಾಯಿಸಿಕೊಂಡರೆ ತುಮಕೂರು ಸುತ್ತಮುತ್ತ ಆರಂಭಗೊಳ್ಳುವ ಎಚ್‌ಎಎಲ್, ಬಿಇಎಲ್, ಬಿಎಚ್‌ಇಎಲ್, ಮುಂತಾದ ಕಂಪನಿಗಳಲ್ಲಿ ಸಾಕಷ್ಟು ಅವಕಾಶಗಳು ಸಿಗುತ್ತವೆ ಎಂದು ಸಲಹೆ ನೀಡಿದರು.
ಇದೇ ವೇಳೆ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.ಕಾರ್ಯಾಗಾರದಲ್ಲಿ ಚಿಕ್ಕನಾಯಕನಹಳ್ಳಿ ಎಸ್‌ಬಿಐ ವ್ಯವಸ್ಥಾಪಕಿ ಸಂಧ್ಯಾ, ಕೌಶಲ್ಯ ಅಭಿವೃದ್ಧಿ ನಿಗಮದ ಸಂಪನ್ಮೂಲ ವ್ಯಕ್ತಿ ಅಂಜನಮೂರ್ತಿ, ಪ್ರಾಂಶುಪಾಲ ಶಿವಕುಮಾರ್, ಪ್ಲೇಸ್‌ಮೆಂಟ್ ಸೆಲ್ ಅಧಿಕಾರಿ ಪ್ರದೀಪ್ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಸಿಬ್ಬಂಧಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.