ಮಾ. 21, 22ರಂದು ಸಿಯೋನ್‌ ಆಶ್ರಮ ಸಂಸ್ಥೆ ರಜತ ಮಹೋತ್ಸವ: ಡಾ. ಪೌಲೋಸ್‌

| Published : Feb 05 2024, 01:49 AM IST

ಸಾರಾಂಶ

1999ರಲ್ಲಿ ಹುಲ್ಲಿನ ಶೆಡ್‌ನಲ್ಲಿ ಓರ್ವ ವ್ಯಕ್ತಿಯ ಆರೈಕೆಯೊಂದಿಗೆ ಆರಂಭವಾದ ಆಶ್ರಮದಲ್ಲಿ ಪ್ರಸ್ತುತ 387 ಮಂದಿ ಇದ್ದಾರೆ. 900ಕ್ಕಿಂತ ಅಧಿಕ ಮಂದಿ ಗುಣಮುಖರಾಗಿ ಮನೆ ಸೇರಿದ್ದಾರೆ. ಪ್ರತಿ ದಿನ 1.5 ಲಕ್ಷ ರು. ಖರ್ಚು ಇದೆ. ಅಲ್ಪಸಂಖ್ಯಾತರ ನಿಗಮದಿಂದ ವಾರ್ಷಿಕ 83 ಲಕ್ಷ ರು. ಮಾತ್ರ ಅನುದಾನ ದೊರೆಯುತ್ತಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಸಿಯೋನ್ ಆಶ್ರಮವು ಸಮಾಜದಲ್ಲಿ ಅಸಹಾಯಕತೆಯಿಂದ ಬೀದಿಪಾಲಾಗಿದ್ದ ಮನೋರೋಗಿಗಳು, ಬುದ್ಧಿಮಾಂದ್ಯರು, ಅಂಗವಿಕಲರು, ನಿರ್ಗತಿಕರು ಮತ್ತು ವಿಶೇಷ ಚೇತನ ಮಕ್ಕಳು, ವೃದ್ಧರು, ನಾನಾ ರೀತಿಯಲ್ಲಿ ದೌರ್ಜನ್ಯಕ್ಕೆ ಒಳಗಾದವರನ್ನು ಮಾತೃವಾತ್ಸಲ್ಯತೆಯಿಂದ ಆರೈಕೆ ಮಾಡಿ ವೈದ್ಯಕೀಯ ಚಿಕಿತ್ಸೆ ಹಾಗೂ ಪುನರ್ವಸತಿ ಕಲ್ಪಿಸಲು ಕಳೆದ 25 ವರ್ಷಗಳಿಂದ ಸತತವಾಗಿ ಪ್ರಯತ್ನಿಸುತ್ತಿದೆ. ಮಾ. 21 ಹಾಗೂ 22ರಂದು ಸಂಸ್ಥೆಯ ರಜತ ಮಹೋತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ಗಂಡಿಬಾಗಿಲಿನ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಡಾ.ಯು.ಸಿ. ಪೌಲೋಸ್ ಹೇಳಿದರು.

ಅವರು ಸಿಯೋನ್ ಆಶ್ರಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಜತ ಮಹೋತ್ಸವ ಕಾರ್ಯಕ್ರಮ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಪೀಕರ್ ಯು.ಟಿ. ಖಾದರ್, ಪೇಜಾವರ ಶ್ರೀ, ಸುಬ್ರಹ್ಮಣ್ಯಶ್ರೀ, ಮಾಣಿಲಶ್ರೀ, ಕನ್ಯಾಡಿಶ್ರೀ ಹಾಗೂ ನಾಲ್ಕು ಮಂದಿ ಬಿಷಪ್ ಸೇರಿದಂತೆ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು ಆಹ್ವಾನ ನೀಡಲಾಗಿದೆ ಎಂದು ತಿಳಿಸಿದರು.

1999ರಲ್ಲಿ ಹುಲ್ಲಿನ ಶೆಡ್‌ನಲ್ಲಿ ಓರ್ವ ವ್ಯಕ್ತಿಯ ಆರೈಕೆಯೊಂದಿಗೆ ಆರಂಭವಾದ ಆಶ್ರಮದಲ್ಲಿ ಪ್ರಸ್ತುತ 387 ಮಂದಿ ಇದ್ದಾರೆ. 900ಕ್ಕಿಂತ ಅಧಿಕ ಮಂದಿ ಗುಣಮುಖರಾಗಿ ಮನೆ ಸೇರಿದ್ದಾರೆ. ಪ್ರತಿ ದಿನ 1.5 ಲಕ್ಷ ರು. ಖರ್ಚು ಇದೆ. ಅಲ್ಪಸಂಖ್ಯಾತರ ನಿಗಮದಿಂದ ವಾರ್ಷಿಕ 83 ಲಕ್ಷ ರು. ಮಾತ್ರ ಅನುದಾನ ದೊರೆಯುತ್ತಿದೆ ಎಂದು ಹೇಳಿದರು

ರಾಜ್ಯದಲ್ಲಿ 300ಕ್ಕಿಂತ ಅಧಿಕ ಇಂತಹ ಆಶ್ರಮಗಳಿದ್ದು ಸರ್ಕಾರವು ಇವುಗಳಿಗೆ ಸ್ಥಿರವಾದ ಸಹಕಾರ ನೀಡಬೇಕು ಎಂಬ ಹಕ್ಕೊತ್ತಾಯವನ್ನು ಕಾರ್ಯಕ್ರಮದಲ್ಲಿ ಮಂಡಿಸಲಾಗುವುದು ಎಂದರು. ರಜತ ಮಹೋತ್ಸವ ಕಾರ್ಯಕ್ರಮದ ಸ್ವಾಗತ ಸಮಿತಿ ಸದಸ್ಯರಾದ ಬಿ.ಎ.ರೆಹಮಾನ್ ಟಿ.ಜೆ. ಮೋರಾಸ್, ವಿ.ಟಿ.ಸೆಬಾಸ್ಟಿಯನ್, ಪ್ರಕಾಶ್ ಪಿಂಟೋ, ಟಿ.ಪಿ.ಜೋಸೆಫ್ ಹಾಗೂ ನಂದಕುಮಾರ್ ಇದ್ದರು.