ವಿಜಯಪುರವನ್ನು ಸ್ವಚ್ಛ, ಸುಂದರವನ್ನಾಗಿಸಿ

| Published : Dec 21 2023, 01:15 AM IST

ವಿಜಯಪುರವನ್ನು ಸ್ವಚ್ಛ, ಸುಂದರವನ್ನಾಗಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯು ಐತಿಹಾಸಿಕ ಸ್ಮಾರಕಗಳಿಗೆ ಹೆಸರುವಾಸಿ. ದೇಶ-ವಿದೇಶದ ಪ್ರವಾಸಿಗರು ಆಗಮಿಸುತ್ತಿದ್ದು, ನಗರದ ಸ್ವಚ್ಛತೆಗೆ ಆದ್ಯತೆ ನೀಡಬೇಕು: ಲೋಕಾಯುಕ್ತ ಅಧೀಕ್ಷಕ ಹನಮಂತರಾಯ

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯು ಐತಿಹಾಸಿಕ ಸ್ಮಾರಕಗಳಿಗೆ ಹೆಸರುವಾಸಿ. ದೇಶ-ವಿದೇಶದ ಪ್ರವಾಸಿಗರು ಆಗಮಿಸುತ್ತಿದ್ದು, ನಗರದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಲೋಕಾಯುಕ್ತ ಅಧೀಕ್ಷಕ ಹನಮಂತರಾಯ ಹೇಳಿದರು.

ಬುಧವಾರ ನಗರದ ಸೆಟ್‌ಲೈಟ್ ಬಸ್ ನಿಲ್ದಾಣ, ಶಿವಾಜಿ ವೃತ್ತ, ಕೇಂದ್ರ ಬಸ್ ನಿಲ್ದಾಣ, ಕೋರ್ಟ್, ಗಗನ ಮಹಲ್ ಹಾಗೂ ಎ.ಪಿ.ಎಮ್.ಸಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ವೀಕ್ಷಿಸಿದರು. ಸೆಟ್‌ಲೈಟ್ ಬಸ್ ನಿಲ್ದಾಣ ಹಾಗೂ ಕೇಂದ್ರ ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಗೋಡೆ ಆವರಣ ಸುತ್ತಲೂ ವಿವಿಧ ಗಿಡ ಮರಗಳ ಬೆಳೆಸಬೇಕು. ಹಸಿರು ಹುಲ್ಲು ಬೆಳೆಸುವ ಮೂಲಕ ಬಸ್ ನಿಲ್ದಾಣವನ್ನು ಸುಂದರವಾಗಿಸುವುದರೊಂದಿಗೆ ಸ್ವಚ್ಛತೆ, ಕಸ-ತ್ಯಾಜ್ಯವನ್ನು ದಿನದಲ್ಲಿ ಎರಡು ಸರತಿಗಳಲ್ಲಿ ವಿಲೇವಾರಿಗೆ ಕ್ರಮ ವಹಿಸಬೇಕು. ನಿಲ್ದಾಣದ ಆವರಣದಲ್ಲಿರುವ ಐತಿಹಾಸಿಕ ಬಾವಿ ಸ್ವಚ್ಛಗೊಳಿಸಿ, ನೀರನ್ನು ಬಳಸಿಕೊಳ್ಳುವಂತೆ, ಬಸ್ ನಿಲ್ದಾಣದ ಸ್ಥಳಗಳಲ್ಲಿ ಸಿ.ಸಿ.ಟಿವಿ ಅಳವಡಿಸಬೇಕು ಎಂದು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಜಿಲ್ಲೆಯ ಬೇರೆ-ಬೇರೆ ಗ್ರಾಮಗಳಿಂದ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ನಗರಕ್ಕೆ ಆಗಮಿಸುತ್ತಾರೆ. ಶಾಲಾ–ಕಾಲೇಜಿನ ನಿಗದಿತ ಸಮಯಕ್ಕನುಗುಣವಾಗಿ ವಿದ್ಯಾರ್ಥಿಗಳು ತಲುಪುವಂತೆ ಹೆಚ್ಚುವರಿ ಬಸ್ ಸಂಚರಿಸುವಂತೆ ನೋಡಿಕೊಳ್ಳಬೇಕು. ಶಿವಾಜಿ ವೃತ್ತದಲ್ಲಿರುವ ಕೋಟೆ ಗೋಡೆಗೆ ಹೊಂದಿಕೊಂಡಂತೆ ಕಂದಕದ ಹತ್ತಿರ ಎತ್ತರದ ಗೋಡೆ ನಿರ್ಮಿಸುವಂತೆ ಸೂಚಿಸಿದರು. ಲಾಲ್ ಬಹಾದ್ದೂರ ಶಾಸ್ತ್ರಿ ಮಾರುಕಟ್ಟೆಗೆ ಭೇಟಿ ನೀಡಿ, ಸ್ವಚ್ಛತೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಪೌರ ಕಾರ್ಮಿಕರನ್ನು ಅಭಿನಂದಿಸಿದರು. ಸ್ವಚ್ಛತೆ ಜೊತೆಗೆ ತಮ್ಮ ಆರೋಗ್ಯ ಕುರಿತು ಹೆಚ್ಚು ಗಮನ ಹರಿಸುವಂತೆ ಅವರಿಗೆ ತಿಳಿಸಿದರು.ಗಗನ ಮಹಲ್, ಕೋರ್ಟ್ ಆವರಣ ಹಾಗೂ ಎ.ಪಿ.ಎಂ.ಸಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಬದ್ರುದ್ದೀನ ಸೌದಾಗರ, ವಿಜಯಪುರ ತಹಸೀಲ್ದಾರ್ ಕವಿತಾ, ಲೋಕಾಯುಕ್ತ ಡಿ.ವೈ.ಎಸ್.ಪಿ ಸುರೇಶ ರೆಡ್ಡಿ, ಈಶಾನ್ಯ ಕರ್ನಾಟಕ ಸಾರಿಗೆ ವಿಜಯಪುರ ಘಟಕದ ವಿಭಾಗೀಯ ನಿಯಂತ್ರಣಾಧಿಕಾರಿ ಜೆ.ಎಮ್.ಫಯಾಜ್, ಲೋಕಾಯುಕ್ತ ಪೊಲೀಸ್ ಇನ್‌ಪೆಕ್ಟರ್ ಆನಂದ ಟಕ್ಕನ್ನವರ ಹಾಗೂ ಆನಂದ ಡೋಣಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.