ಬೇರು ಸಹಿತ ಮಾದಕ ವ್ಯಸನ ನಿರ್ಮೂಲನೆ ಗುರಿ

| Published : Dec 21 2023, 01:15 AM IST

ಸಾರಾಂಶ

ಮಾದಕ ವಸ್ತುಗಳನ್ನು ಬೇರಿನಿಂದ ನಿರ್ಮೂಲನೆ ಮಾಡಬೇಕು ಇಲ್ಲದಿದ್ದರೆ ಮಕ್ಕಳು ಯುವಕರು ಮಾದಕ ವಸ್ತುಗಳ ದಾಸರಾಗುತ್ತಾರೆ.

ಹೊಸದುರ್ಗ: ವ್ಯಸನ ಮುಕ್ತರಾಗಿ ಉತ್ತಮ ಭವಿಷ್ಯ ರೂಪಿಸಿಕೊಂಡು ಪೋಷಕರ ಆಶಯದಂತೆ ಜೀವನ ನಡೆಸಿ ಎಂದು ಹೊಸದುರ್ಗ ಠಾಣೆ ಪಿ.ಐ.ತಿಮ್ಮಣ್ಣ ಹೇಳಿದರು.

ನಗರದ ದುರ್ಗಾ ಐಟಿಐ ಕಾಲೇಜ್‌ನಲ್ಲಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆವತಿಯಿಂದ ನಡೆದ ಅಪರಾಧ ತಡೆ ಮಾಸಾಚರಣೆ ಮತ್ತು ಮಾದಕ ವಸ್ತು ಸೇವನೆ ನಿರ್ಮೂಲನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಲೇಜು ವಿದ್ಯಾರ್ಥಿಗಳು ವ್ಯಸನ ಮುಕ್ತರಾಗಿ ಉತ್ತಮ ಭವಿಷ್ಯ ರೂಪಿಸಿಕೊಂಡು ಉನ್ನತ ಅಧಿಕಾರಿಗಳನ್ನಾಗಿ ಮಾಡಬೇಕೆಂಬ ಕನಸು ಹೊತ್ತು ಕೂಲಿ ಮಾಡಿಯಾದರೂ ತಂದೆ, ತಾಯಿ ಕಾಲೇಜಿಗೆ ಕಳಿಸಿದ್ದಾರೆ ಅವರ ಆಶಯದಂತೆ ಜೀವನ ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಅಮಲು ಬರುವ ಮಾದಕ ವಸ್ತುಗಳನ್ನ ಬಳಸುವಂತಿಲ್ಲ. ಮಾದಕ ವಸ್ತುಗಳಾದ ಗಾಂಜಾ, ಅಫೀಮು ಮಾರಾಟ ಮತ್ತು ಸೇವನೆ ಎಲ್ಲಿಯಾದರೂ ಕಂಡು ಬಂದರೆ ತಕ್ಷಣ ಕಾಲೇಜಿನ ಪ್ರಾಚಾರ್ಯರು ಹಾಗೂ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

ಮಾದಕ ವಸ್ತು ಸೇವನೆ ಅಥವಾ ಮಾರಾಟ ಮಾಡಿ ಸಿಕ್ಕ ವ್ಯಕ್ತಿಗಳಿಗೆ ಜೀವನಪರ್ಯಂತ ಜೈಲೇ ಗತಿಯಾಗುವುದು. ಭಾರತದಲ್ಲಿ ಮಾದಕ ವಸ್ತು ಸೇವನೆಯಿಂದ ದಿನಕ್ಕೆ ಕನಿಷ್ಟ 15 ಯುವಕರು ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ. 7.5 ಕೋಟಿ ಯುವಕರು ದೇಶದಾದ್ಯಂತ ಮಾದಕ ವಸ್ತುಗಳಿಗೆ ತುತ್ತಾಗಿ ಜೀವನವನ್ನು ನರಕಗೊಳಿಸಿಕೊಂಡಿದ್ದಾರೆ.

ವಿದ್ಯಾರ್ಥಿ ಜೀವನದಲ್ಲಿ ಕಠಿಣ ಅಭ್ಯಾಸ ಮಾಡಿ ಬದುಕನ್ನು ರೂಪಿಸಿಕೊಂಡಾಗ ದೇಶದ ಸತ್ಪ್ರಜೆಯಾಗಿ ಬಳಲು ಸಾಧ್ಯ ಎಂದರು.

ಯುವ ಉದ್ಯಮಿ ಸದ್ಗುರು ಪ್ರದೀಪ್ ಮಾತನಾಡಿ, ದುರ್ಗಾ ಹೊಸದುರ್ಗ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶದಿಂದ ಬಂದವರಾಗಿದ್ದು, ಬಡತನದಿಂದ ಕಷ್ಟಪಟ್ಟು ಬದುಕನ್ನು ಕಟ್ಟಿಕೊಳ್ಳಲು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನೀವು ಇಲ್ಲಿ ಕಲಿಯುವ ಮೌಲ್ಯಯುತ ಕೆಲಸದಿಂದ ಮುಂದಿನ ಪೀಳಿಗೆ ನೆಮ್ಮದಿಯ ಬದುಕು ಸಾಧಿಸಲು ಅವಕಾಶವಾಗುವುದು ಎಂದರು.

ದುರ್ಗಾ ಕೈಗಾರಿಕೆಯ ಸಂಸ್ಥೆ ಕಾರ್ಯದರ್ಶಿ ಬಿ.ವಿ.ಸತೀಶ್ ಬಾಬು, ಕಚೇರಿ ಅಧೀಕ್ಷಕ ಎಲ್.ಕೆ.ಮನೋಹರ್ ಪೊಲೀಸ್ ಸಿಬ್ಬಂದಿ ಮಂಜುನಾಥ್, ಉಪನ್ಯಾಸಕ ಡಿ.ಎಂ.ಕುಮಾರ್, ಹರೀಶ್, ನಟರಾಜ್, ವೈ.ಕುಮಾರ್, ರಮೇಶ್, ಮಹೇಶ್, ರಾಜು, ತುಂಬಿನಕೆರೆ ಬಸವರಾಜ್ ಮೂಡ್ಲಪ್ಪ ಇದ್ದರು.