ಅನಾಥ ಯುವತಿಯರ ವರಿಸಿದ ಅರ್ಚಕ, ಕೃಷಿಕ

| Published : Dec 21 2023, 01:15 AM IST

ಸಾರಾಂಶ

ಬ್ರಾಹ್ಮಣ ಸಮುದಾಯದಲ್ಲಿ ರೈತರಿಗೆ, ಪುರೋಹಿತರು, ಸಾಮಾನ್ಯ ಉದ್ಯೋಗದಲ್ಲಿರುವವರನ್ನು ಮದುವೆಯಾಗಲು ಹೆಣ್ಣು ಮಕ್ಕಳು ಒಪ್ಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬ್ರಾಹ್ಮಣ ಯುವಕರು ಇತರ ಸಮುದಾಯದ ಅಥವಾ ಅನಾಥ ಹೆಣ್ಣುಮಕ್ಕಳನ್ನು ಮದುವೆಯಾಗುವುದು ಅನಿವಾರ್ಯವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಅನಾಥ ಮಕ್ಕಳ ಆಶ್ರಯ ಕೇಂದ್ರ - ರಾಜ್ಯ ಮಹಿಳಾ ನಿಲಯ ಇಬ್ಬರು ಯುವತಿಯರಿಗೆ ಬುಧವಾರ ಜಿಲ್ಲಾಧಿಕಾರಿ ಧಾರೆ ಎರೆದು ವಿವಾಹ ನೆರವೇರಿಸಿದರು. ಇದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ನ್ಯಾಯಾಧೀಶರು ಮತ್ತು ಇತರ ಅಧಿಕಾರಿಗಳು ಸಾಕ್ಷಿಗಳಾದರು.

ಬ್ರಾಹ್ಮಣ ಸಮುದಾಯದಲ್ಲಿ ರೈತರಿಗೆ, ಪುರೋಹಿತರು, ಸಾಮಾನ್ಯ ಉದ್ಯೋಗದಲ್ಲಿರುವವರನ್ನು ಮದುವೆಯಾಗಲು ಹೆಣ್ಣು ಮಕ್ಕಳು ಒಪ್ಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬ್ರಾಹ್ಮಣ ಯುವಕರು ಇತರ ಸಮುದಾಯದ ಅಥವಾ ಅನಾಥ ಹೆಣ್ಣುಮಕ್ಕಳನ್ನು ಮದುವೆಯಾಗುವುದು ಅನಿವಾರ್ಯವಾಗುತ್ತಿದೆ.

ಅದರಂತೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬೇಳಂಜೆ ದೇವಸ್ಥಾನದ ಅರ್ಚಕ ಸತ್ಯನಾರಾಯಣ ಶ್ರೀಧರ ಭಟ್ಟ ಅವರು ಸ್ಟೇಟ್ ಹೋಮ್ ನ ನಿವಾಸಿ ಕುಮಾರಿ ಅವರನ್ನು ಹಾಗೂ ಕುಂದಾಪುರ ತಾಲೂಕಿನ ಮೊಳಹಳ್ಳಿಯ ಕೃಷಿಕ ಗಣೇಶ ಶಾಸ್ತ್ರಿ ಅವರು ಶೀಲಾ ಅವರನ್ನು ವಿವಾಹವಾದರು.

ಈ ಎರಡೂ ಜೋಡಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು ಸಂತೋಷದಿಂದ ಧಾರೆ ಎರೆದು ವಧುವರರ ವೈವಾಹಿಕ ಜೀವನಕ್ಕೆ ಶುಭ ಹಾರೈಸಿದರು.

ಉಡುಪಿ ಶಾಸಕ ಯಶಪಾಲ್ ಸುವರ್ಣ, ಎಸ್ಪಿ ಡಾ.ಅರುಣ್ ಕುಮಾರ್, ಎಡಿಸಿ ಮಮತಾ, ಹಿರಿಯ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ, ಜಿಪಂ ಸಿಇಒ ಪ್ರಸನ್ನ ಎಚ್., ಕುಂದಾಪುರ ಎಸಿ ರಶ್ಮಿ, ಮಹಿಳಾ ಮತ್ತು ಕಲ್ಯಾಣ ಅಭಿವೃದ್ಧಿ ಇಲಾಖೆಯ ವೀಣಾ ವಿವೇಕಾನಂದ ಸಹಿತ ಅನೇಕ ಗಣ್ಯರು ಭಾಗಿಗಳಾಗಿದ್ದರು.

ಈವರೆಗೆ ಉಡುಪಿ ಸ್ಟೇಟ್ ಹೋಮ್ ನಲ್ಲಿ 24 ಅನಾಥ ಯುವತಿಯರಿಗೆ ಸಮಾಜಮುಖಿ ಯುವಕರು ವಿವಾಹವಾಗಿ ಹೊಸಬದುಕು ನೀಡಿದ್ದಾರೆ. ವಿಶೇಷ ಎಂದರೆ ಈ ಯುವಕರಲ್ಲಿ ಬ್ರಾಹ್ಮಣ, ಲಿಂಗಾಯಿತ ಸಮುದಾಯದವರೇ ಹೆಚ್ಚು.