ಎಸ್ಸೆಸ್ಸೆಲ್ಸಿ ಫಲಿತಾಂಶ ಇನ್ನಷ್ಟು ಉತ್ತಮ ಪಡಿಸಿ

| Published : Jul 21 2024, 01:17 AM IST

ಎಸ್ಸೆಸ್ಸೆಲ್ಸಿ ಫಲಿತಾಂಶ ಇನ್ನಷ್ಟು ಉತ್ತಮ ಪಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲಾ ವಿದ್ಯಾರ್ಥಿಗಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಮೂಲಕ ಜಿಲ್ಲೆಯ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಉತ್ತಮ ಪಡಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕುರೇರ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಶಾಲಾ ವಿದ್ಯಾರ್ಥಿಗಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಮೂಲಕ ಜಿಲ್ಲೆಯ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಉತ್ತಮ ಪಡಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕುರೇರ ಸೂಚಿಸಿದರು.

ಜಿಲ್ಲಾ ಪಂಚಾಯತ್ ನೂತನ ಸಭಾಂಗಣದಲ್ಲಿ ಶನಿವಾರ ಜರುಗಿದ ಶಾಲಾ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2024-25ರ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಸುಧಾರಣೆಗಾಗಿ ಶಾಲಾ ಹಂತದಲ್ಲಿ ವಿವಿಧ ಕ್ರಿಯಾ ಯೋಜನೆಗಳನ್ನು ಹಾಕಿಕೊಂಡು ಶಿಕ್ಷಕರು ಅನುಷ್ಠಾನಗೊಳಿಸುವುದರಿಂದ ವಿದ್ಯಾರ್ಥಿಗಳಲ್ಲಿ ಕಲಿಕಾ ಸಾಮರ್ಥ್ಯ ಸುಧಾರಿಸಿ ಫಲಿತಾಂಶವು ನೂರಕ್ಕೆ ನೂರು ಬರಲು ಸಾಧ್ಯವಾಗುತ್ತದೆ ಎಂದರು.

ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಅಂತಹ ವಿದ್ಯಾರ್ಥಿಗಳು ಮತ್ತು ಪಾಲಕರ ಮನಪರಿವರ್ತಿಸುವ ಕೆಲಸ ಮಾಡಿ ಹಾಜರಾತಿ ಉತ್ತಮ ಪಡಿಸಬೇಕು. ವಿದ್ಯಾರ್ಥಿಗಳೊಂದಿಗೆ ಬೆರೆತು ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ಪ್ರೇರಣಾದಾಯಕ ಕಥೆಗಳನ್ನು ಹೇಳುವುದರಿಂದ ಮಕ್ಕಳಲ್ಲಿ ಬದಲಾವಣೆ ಕಂಡು ಬರುತ್ತದೆ. ಗುಣಮಟ್ಟದ ಬೋಧನೆ ಇದ್ದಲ್ಲಿ ಗುಣಮಟ್ಟದ ಫಲಿತಾಂಶ ಕೂಡ ಬರುತ್ತದೆ. ಈ ನಿಟ್ಟಿನಲ್ಲಿ ಶಾಲೆಯ ಪ್ರಾಂಶುಪಾಲರು ಶ್ರಮ ವಹಿಸಬೇಕಾಗುತ್ತದೆ ಎಂದು ಹೇಳಿದರು.

ವರ್ಗಾವಣೆಯಿಂದ ಶಿಕ್ಷಕರ ಹುದ್ದೆ ಖಾಲಿಯಾದ ತಕ್ಷಣ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಬೇಕು. ಶಾಲೆಯ ಸ್ವಚ್ಛತೆಯನ್ನು ಡಿ ಗ್ರುಪ್ ಸಿಬ್ಬಂದಿಯಿಂದ ಅಥವಾ ಗ್ರಾಪಂನಿಂದ ನಿರ್ವಹಿಸಿ, ಶಿಕ್ಷಕರನ್ನು ವಿದ್ಯಾರ್ಥಿಗಳು ಅನುಸರಿಸುವುದರಿಂದ ಶಿಕ್ಷಕರ ನಡೆ, ನುಡಿ, ವೇಷ ಭಾಷೆ ಎಲ್ಲವೂ ಅಚ್ಚುಕಟ್ಟಾಗಿರಲಿ. ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಶಿಕ್ಷಕರ ಪಾತ್ರ ಪ್ರಮುಖವಾಗಿರುತ್ತದೆ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಿ.ಕೆ ನಂದನೂರ ಮಾತನಾಡಿ, ಎಸ್‌ಎಸ್‌ಎಲ್‌ಸಿ 2024ರ ಪರೀಕ್ಷೆಯಲ್ಲಿ ಶೇಕಡಾ 100 ಮತ್ತು ಶೂನ್ಯ ಫಲಿತಾಂಶ ಸಾಧಿಸಿದ ಶಾಲೆಗಳು ಹಾಗೂ ವಿವಿಧ ಕ್ರಿಯಾ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಸಭೆಯಲ್ಲಿ ಡಿವೈಎಸಿ ಉಪ ಸಮನ್ವಯಾಧಿಕಾರಿ ಸಿ.ಆರ್.ಓಣಿ ಸೇರಿದಂತೆ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಎಲ್ಲ ಸರ್ಕಾರಿ ಶಾಲೆಗಳ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.

---

ಸನ್ಮಾನ

ಉತ್ತಮವಾಗಿ ಕಾರ್ಯನಿರ್ವಹಿಸಿದ ಸರಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ಬುದ್ನಿ ಪಿ.ಕೆ ಸರಕಾರಿ ಪ್ರೌಢಶಾಲೆಯ ಎ.ವೈ.ಲಂಗೋಟಿ, ಬೀಳಗಿ ತಾಲೂಕಿನ ಕೊಪ್ಪ ಆರ್.ಎಸ್. ಆದರ್ಶ ವಿದ್ಯಾಲಯದ ಬಿ.ಸಿ.ಹೊಸಗೌಡ್ರ, ಕಡಿವಾಲ ಇನಾಮ ಸರಕಾರಿ ಪ್ರೌಢಶಾಲೆಯ ಎಂ.ಬಿ.ಕರಂಡಿ ಅವರನ್ನು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಸನ್ಮಾನ ಮಾಡಿದರು.