ಮಳಲಿ ಮಸೀದಿ ಕಾನೂನು ಹೋರಾಟಕ್ಕೆ ವಕ್ಫ್‌ ಬೋರ್ಡ್‌ ಮುಂದಾಳತ್ವ

| Published : Feb 04 2024, 01:30 AM IST

ಸಾರಾಂಶ

ಇನ್ಮುಂದೆ ಪ್ರಕರಣದ ವಿಚಾರಣೆ ಮಂಗಳೂರಿನ 3ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯಲಿದ್ದು, ಮಸೀದಿ ಸಮಿತಿಯೊಂದಿಗೆ ವಕ್ಫ್‌ ಬೋರ್ಡ್‌ ಕೂಡ ಪಾರ್ಟಿಯಾಗಲಿದೆ ಎಂದು ದ.ಕ. ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಹೊರವಲಯದ ಮಳಲಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ಕಾನೂನು ಹೋರಾಟಕ್ಕೆ ಇದೇ ಮೊದಲ ಬಾರಿಗೆ ವಕ್ಫ್‌ ಬೋರ್ಡ್‌ ಎಂಟ್ರಿ ನೀಡಿದ್ದು, ಈ ಕಾನೂನು ಹೋರಾಟದ ಮುಂದಾಳತ್ವ ವಹಿಸಲು ನಿರ್ಧಾರ ಕೈಗೊಂಡಿದೆ.

ಈ ಪ್ರಕರಣದ ವಿಚಾರಣೆಯನ್ನು ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿ ನಡೆಸುವಂತೆ ಹೈಕೋರ್ಟ್ ಜ.31ರಂದು ಹೊರಡಿಸಿರುವ ಆದೇಶದಲ್ಲಿ ಸೂಚಿಸಿದೆ. ಇದುವರೆಗೆ ಮಸೀದಿ ಸಮಿತಿಯವರೇ ಕಾನೂನು ಹೋರಾಟ ನಡೆಸುತ್ತಿದ್ದರು. ಇನ್ಮುಂದೆ ಪ್ರಕರಣದ ವಿಚಾರಣೆ ಮಂಗಳೂರಿನ 3ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯಲಿದ್ದು, ಮಸೀದಿ ಸಮಿತಿಯೊಂದಿಗೆ ವಕ್ಫ್‌ ಬೋರ್ಡ್‌ ಕೂಡ ಪಾರ್ಟಿಯಾಗಲಿದೆ ಎಂದು ದ.ಕ. ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಸೀದಿ ಜಾಗ ವಕ್ಫ್‌ ಆಸ್ತಿ: ಮಳಲಿ ಮಸೀದಿ ವಕ್ಫ್ ಆಸ್ತಿಯಲ್ಲ ಎಂಬ ಕೆಲವರ ಹೇಳಿಕೆಯನ್ನು ತಳ್ಳಿಹಾಕಿದ ಅವರು, ಮಸೀದಿ ವಕ್ಫ್‌ ಆಸ್ತಿಯೇ ಆಗಿದೆ ಎಂದು ದಾಖಲೆ ಪ್ರಸ್ತುತಪಡಿಸಿದರು. ಮಸೀದಿ ಜಾಗದ ಸರ್ವೇ 2004ರಲ್ಲಿ ನಡೆದಿದ್ದು, 2016ರಲ್ಲಿ ಅಧಿಕೃತವಾಗಿ ಗಜೆಟ್‌ ನೋಟಿಫಿಕೇಶನ್‌ ಹೊರಡಿಸಲಾಗಿದೆ. ಆ ಜಾಗದ ಆರ್‌ಟಿಸಿ ಮಸೀದಿಯ ಹೆಸರಿನಲ್ಲೇ ಇದೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಹೈಕೋರ್ಟ್ ಆದೇಶದ ಪ್ರತಿ ನಮಗೆ ತಲುಪಿದ ನಂತರ, ಕಾನೂನು ತಜ್ಞರ ಸಲಹೆ ಪಡೆದುಕೊಂಡು ಪ್ರಕರಣದ ವಿರುದ್ಧ ಹೋರಾಡಲು ಅಣಿಯಾಗಿದ್ದೇವೆ ಎಂದು ಹೇಳಿದರು.

ಹೊರಗಿನವರಿಂದ ಗೊಂದಲ ಸೃಷ್ಟಿ: ಮಳಲಿ ಮಸೀದಿ ವಿಚಾರದಲ್ಲಿ ಸ್ಥಳೀಯರಲ್ಲಿ ಯಾವುದೇ ಗೊಂದಲ ಇಲ್ಲ, ಯಾರಿಗೂ ಸಮಸ್ಯೆ ಆಗಿಲ್ಲ. ಎಲ್ಲ ಧರ್ಮದವರು ಅಲ್ಲಿ ಅನ್ಯೋನ್ಯವಾಗಿದ್ದಾರೆ. ಆದರೆ ಹೊರಗಿನಿಂದ ಬಂದವರು ವಿವಾದ ಸೃಷ್ಟಿಸಲು ಮುಂದಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಗೊಂದಲ ಮೂಡಿಸುವ ಕೆಲಸ ನಡೆಯುತ್ತಿದೆ. ಯಾರೂ ಗೊಂದಲಕ್ಕೆ ಒಳಗಾಗಬಾರದು ಎಂದು ಅಬ್ದುಲ್ ನಾಸಿರ್‌ ಲಕ್ಕಿಸ್ಟಾರ್‌ ಮನವಿ ಮಾಡಿದರು.ದಕ್ಷಿಣ ಕನ್ನಡ ಜಿಲ್ಲಾ ವಕ್ಫ್‌ ಸಲಹಾ ಸಮಿತಿ ಉಪಾಧ್ಯಕ್ಷ ಡಾ.ಎ.ಕೆ. ಜಮಾಲ್‌, ಸದಸ್ಯ ಸೈದುದ್ಧೀನ್‌ ಬಜ್ಪೆ, ಮಳಲಿ ಪೇಟೆ ಜುಮಾ ಮಸೀದಿ ಆಧ್ಯಕ್ಷ ಅಬ್ದುಲ್‌ ರಝಾಕ್‌, ಉಪಾಧ್ಯಕ್ಷ ಎಂ.ಎ.ಅಬೂಬಕ್ಕರ್‌, ಜಿಲ್ಲಾ ವಕ್ಫ್‌ ಅಧಿಕಾರಿ ಅಬೂಬಕ್ಕರ್‌ ಇದ್ದರು.