ಜಿಲ್ಲಾಮಟ್ಟದ ಪತ್ರಿಕೆಗಳಿಂದಲೂ ಪೈಪೋಟಿ: ಬಿ.ಎನ್.ಮಲ್ಲೇಶ್

| Published : Feb 04 2024, 01:30 AM IST

ಸಾರಾಂಶ

ಹಿಂದೆ ಮೊಳೆ ಜೋಡಿಸಿ, ಪ್ರಿಂಟ್ ಮಾಡಿ ಪತ್ರಿಕೆಗಳ ಹೊರತರುವ ಕಾಲವಿತ್ತು. ಎ ಫೋರ್ ಸೈಜ್ ಕಾಗದದಲ್ಲಿ ಪತ್ರಿಕೆಗಳ ಪ್ರಿಂಟ್ ಹಾಕಿಸಿ ಬೀದಿ ಬೀದಿ ತುತ್ತೂರಿ ಊದಿ ಪತ್ರಿಕೆಗಳನ್ನು ಮಾರಾಟ ಮಾಡಲಾಗುತ್ತಿತ್ತು. ಅಂದು ತಮಗೆ ಆಗದವರ ಮೇಲೂ ಸುದ್ದಿ ಬರೆದು ಅವರ ಮನೆಗೆ ತಲುಪಿಸಿ ಆ ಮೂಲಕವೂ ಹಣ ಮಾಡುವ ಮೂಲವನ್ನಾಗಿಯೂ ಮಾಡಿಕೊಳ್ಳಲಾಗಿತ್ತು. ಕಾಲಾಂತರದಲ್ಲಿ ಇದು ಬದಲಾಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲಾಮಟ್ಟದ ಪತ್ರಿಕೆಗಳು ರಾಜ್ಯಮಟ್ಟದ ಪತ್ರಿಕೆಗಳಷ್ಟು ವ್ಯಾಪ್ತಿ ಹೊಂದಿಲ್ಲದಿರಬಹುದು. ಆದರೆ, ಅವು ಕೂಡ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳ ಬಿತ್ತರಿಸುವ ಮೂಲಕ ಪೈಪೋಟಿ ನೀಡಬಲ್ಲವು ಎಂದು ಹಿರಿಯ ಪತ್ರಕರ್ತ ಬಿ.ಎನ್.ಮಲ್ಲೇಶ್ ಹೇಳಿದರು.

ಇಲ್ಲಿನ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಪತ್ರಕರ್ತರ ರಾಜ್ಯಮಟ್ಟದ 38ನೇ ಸಮ್ಮೇಳನದಲ್ಲಿ ಶನಿವಾರ ಆಯೋಜಿಸಿದ್ದ ''''''''ಜಿಲ್ಲಾ ಮಟ್ಟದ ಪತ್ರಿಕೆಗಳು ಅಂದು, ಇಂದು, ಮುಂದು'''''''' ವಿಷಯ ಕುರಿತು ಮಾತನಾಡಿ ಹಿಂದೆ ಮೊಳೆ ಜೋಡಿಸಿ, ಪ್ರಿಂಟ್ ಮಾಡಿ ಪತ್ರಿಕೆಗಳ ಹೊರತರುವ ಕಾಲವಿತ್ತು. ಎ ಫೋರ್ ಸೈಜ್ ಕಾಗದದಲ್ಲಿ ಪತ್ರಿಕೆಗಳ ಪ್ರಿಂಟ್ ಹಾಕಿಸಿ ಬೀದಿ ಬೀದಿ ತುತ್ತೂರಿ ಊದಿ ಪತ್ರಿಕೆಗಳನ್ನು ಮಾರಾಟ ಮಾಡಲಾಗುತ್ತಿತ್ತು. ಅಂದು ತಮಗೆ ಆಗದವರ ಮೇಲೂ ಸುದ್ದಿ ಬರೆದು ಅವರ ಮನೆಗೆ ತಲುಪಿಸಿ ಆ ಮೂಲಕವೂ ಹಣ ಮಾಡುವ ಮೂಲವನ್ನಾಗಿಯೂ ಮಾಡಿಕೊಳ್ಳಲಾಗಿತ್ತು. ಕಾಲಾಂತರದಲ್ಲಿ ಇದು ಬದಲಾಯಿತು. 1906 ರಲ್ಲಿ ಕರ್ನಾಟಕದ ಗಾಂಧಿ ಎಂದೇ ಪ್ರಸಿದ್ಧಿ ಪಡೆದಿದ್ದ ಹರ್ಡೇಕರ್ ಮಂಜಪ್ಪ ದಾವಣಗೆರೆಯಲ್ಲಿ ಪತ್ರಿಕೆ ಶುರುಮಾಡಿದರು. ಆ ಕಾಲದಲ್ಲಿ ಶುರುವಾದ ಪತ್ರಿಕೆಗಳು ಸ್ವಾತಂತ್ರ‍್ಯ ತರಲು ಬಹುಮುಖ್ಯ ಪಾತ್ರ ವಹಿಸಿದವು ಎಂದು ವಿವರಿಸಿದರು.

ಪ್ರಸ್ತುತ, ಎಲ್ಲಾ ಜಿಲ್ಲೆಗಳಲ್ಲಿಯೂ ಎರಡ್ಮೂರು ಜಿಲ್ಲಾಮಟ್ಟದ ಪತ್ರಿಕೆಗಳು ರಾಜ್ಯಮಟ್ಟದ ಪತ್ರಿಕೆಗಳಿಗೆ ಸೆಡ್ಡು ಹೊಡೆಯುತ್ತಿವೆ. ರಾಜ್ಯಮಟ್ಟದ ಪತ್ರಿಕೆಗಳು ಕೂಡ ಜಿಲ್ಲಾಮಟ್ಟದ ಪತ್ರಿಕೆಗಳಿಗೆ ನೀಡುತ್ತಿದ್ದ ಬೆಲೆಯಷ್ಟೇ ಪತ್ರಿಕೆಗಳನ್ನು ಮಾರಾಟ ಮಾಡುವಾಗ ಜಿಲ್ಲಾಮಟ್ಟದ ಪತ್ರಿಕೆಗಳು ಅವಸಾನಕ್ಕೆ ಹೋಗುವ ಆತಂಕ ಎದುರಿಸಿದ್ದು ಸುಳ್ಳಲ್ಲ ಎಂದರು.

ಆಗ ಒಂದು ಪತ್ರಿಕೆಯನ್ನು ತರಲು 28 ಜನ ಕೆಲಸವನ್ನು ಮಾಡುತಿದ್ದರು ಇವಾಗ ಇಬ್ಬರೇ ಪತ್ರಿಕೆಯಲ್ಲಿ ಕೆಲಸವನ್ನು ಮಾಡುವಂತೆ ಕೃತಕ ಬುದ್ದಿಮತ್ತೆ ಮಾಡುತ್ತದೆ. ಆದರೆ, ಕೃತಕ ಬುದ್ಧಿಮತ್ತೆಯಿಂದ ನೈಜ ಸುದ್ದಿಗಳು ಹೊರಬರುವುದು ಕಷ್ಟ. ಹಾಗಾಗಿ ಜನರ ವಿಶ್ವಾಸ ಉಳಿಸಿಕೊಳ್ಳುವಂತ ಸುದ್ದಿ ಬಿತ್ತರ ಮಾಡಲು ಸುದ್ದಿಗಾರರ ಅಗತ್ಯವಿದೆ ಎಂದು ತಿಳಿಸಿದರು.

ಸುದ್ದಿಮೂಲ ಸಂಪಾದಕ ಬಸವರಾಜ ಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಈ ಗೋಷ್ಠಿಯಲ್ಲಿ ಹಲೋ ಮೈಸೂರು ಪತ್ರಿಕೆ ಸಂಪಾದಕ ಟಿ.ಗುರುರಾಜ, ಆರ್.ಪಿ.ವೆಂಕಟೇಶ ಮೂರ್ತಿ, ಕನ್ನಡ ಪ್ರಭ ಪತ್ರಿಕೆ ಪ್ರಧಾನ ವರದಿಗಾರ ನಾಗರಾಜ ಬಡದಾಳ್, ಅಜಿತ್ ಹೊಂಬಾಳೆ, ಗಣಪತಿ ಗಂಗೊಳ್ಳಿ, ರಶ್ಮಿ ಪಾಟೀಲ್, ದೇವೇಂದ್ರಪ್ಪ ಕಪನೂರು ಇತರರು ಭಾಗವಹಿಸಿದ್ದರು.