ಮಕ್ಕಳು, ತಾಯಂದಿರ ಅಪೌಷ್ಟಿಕತೆ ನಿವಾರಣೆ ಯೋಜನೆ ಅರ್ಹರಿಗೆ ತಲುಪಬೇಕು

| Published : Sep 03 2024, 01:31 AM IST

ಮಕ್ಕಳು, ತಾಯಂದಿರ ಅಪೌಷ್ಟಿಕತೆ ನಿವಾರಣೆ ಯೋಜನೆ ಅರ್ಹರಿಗೆ ತಲುಪಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳ ಹಾಗೂ ತಾಯಂದಿರಲ್ಲಿ ಕಂಡುಬರುವ ಅಪೌಷ್ಟಿಕತೆ ತೊಡೆದುಹಾಕಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳು ಎಲ್ಲರಿಗೂ ತಲುಪಬೇಕು ಹಾಗೂ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಾಲಮುಕುಂದ ರಮೇಶರಾವ ಮುತಾಲಿಕದೇಸಾಯಿ ಕರೆ ನೀಡಿದರು.

ಹಾವೇರಿ: ಮಕ್ಕಳ ಹಾಗೂ ತಾಯಂದಿರಲ್ಲಿ ಕಂಡುಬರುವ ಅಪೌಷ್ಟಿಕತೆ ತೊಡೆದುಹಾಕಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳು ಎಲ್ಲರಿಗೂ ತಲುಪಬೇಕು ಹಾಗೂ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಾಲಮುಕುಂದ ರಮೇಶರಾವ ಮುತಾಲಿಕದೇಸಾಯಿ ಕರೆ ನೀಡಿದರು.ನಗರದ ಇಜಾರಿಲಕಮಾಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ಪೌಷ್ಟಿಕ ದಿನಾಚರಣೆ ಹಾಗೂ ಪೋಷಣ ಮಾಸಾಚರಣೆ ಅಂಗವಾಗಿ ತಾಯಿ ಹೆಸರಿನಲ್ಲಿ ಸಸಿ ನೆಟ್ಟು , ಅರಿವು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಜಿಲ್ಲೆಯನ್ನು ಅಪೌಷ್ಟಿಕ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಂಕಲ್ಪ ಮಾಡೋಣ ಎಂದು ಹೇಳಿದರು. ಮಕ್ಕಳಿಗೆ ಮೊಳಕೆಕಾಳು, ಸಿರಿಧಾನ್ಯಗಳ ಆಹಾರ ಹಾಗೂ ಹಣ್ಣು-ತರಕಾರಿಗಳನ್ನು ಹೆಚ್ಚಾಗಿ ನೀಡಬೇಕು. ಮಕ್ಕಳು ಸದೃಢವಾಗಿ ಬೆಳೆದರೆ ಸದೃಢ ದೇಶಕಟ್ಟಲು ಸಾಧ್ಯ. ಕ್ರೀಡೆ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಮಕ್ಕಳು ಬಾಲ್ಯದಲ್ಲೇ ಉತ್ತಮ ಆರೋಗ್ಯ ಹೊಂದಬೇಕು. ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು ಮಕ್ಕಳು ಹಾಗೂ ತಾಯಂದಿರು ಉತ್ತಮ ಆರೋಗ್ಯ ಹೊಂದಬೇಕು. ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಲು ಸಮಸ್ಯೆಯಾದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಂಪರ್ಕಿಸಿದರೆ ಸೂಕ್ತ ಕಾನೂನು ನೆರವು ಒದಗಿಸಲಾಗುವುದು ಎಂದು ಹೇಳಿದರು.ಪ್ರಕೃತಿಯನ್ನು ಗೌರವಿಸಬೇಕು ಹಾಗೂ ಪರಿಸರವನ್ನು ಉಳಿಸಬೇಕು. ಈ ಕೆಲಸ ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ. ಹಾಗಾಗಿ ಎಲ್ಲರೂ ಸಸಿಗಳನ್ನು ನೆಟ್ಟು ಮರಗಳಾಗಿ ಬೆಳೆಸಬೇಕು. ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಚ್. ಜತ್ತಿ ಮಾತನಾಡಿ, ಉತ್ತಮ ಆಹಾರದಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ. ಮಕ್ಕಳಿಗೆ ನಮ್ಮ ಸಾಂಪ್ರದಾಯಿಕ ಆಹಾರ ನೀಡುವುದರಿಂದ ಅಪೌಷ್ಟಿಕತೆ ತೊಡೆದುಹಾಕಬಹುದು. ಫಾಸ್ಟ್ ಫುಡ್‌ನಿಂದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಮಕ್ಕಳಿಗೆ ಮನೆಯಲ್ಲಿ ತಯಾರಿಸಿದ ಗುಣಮಟ್ಟದ ಆಹಾರ ನೀಡಬೇಕು. ಜೊತೆಗೆ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪರಿಸರವನ್ನು ನಾವು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಮೊಳಕೆಕಾಳು, ಸಿರಿಧಾನ್ಯ, ಇತರೆ ಆಹಾರ, ಹಣ್ಣು-ತರಕಾರಿ ಹಾಗೂ ಹಾಲಿನ ಪುಡಿಯಿಂದ ತಯಾರಿಸಿದ ಲಾಡು, ಶೇಂಗಾ ಚೆಕ್ಕಿ, ಹೋಳಿಗೆ ಸೇರಿದಂತೆ ವಿವಿಧ ಖಾದ್ಯಗಳ ಪ್ರದರ್ಶನವನ್ನು ನ್ಯಾಯಾಧೀಶರು ವೀಕ್ಷಣೆ ಮಾಡಿದರು. ಸಹಾಯಕ ಕಾನೂನು ನೆರವು ಅಭಿರಕ್ಷಣಾ ವಕೀಲರಾದ ಎನ್.ಎನ್.ಡಿಳ್ಳೆಪ್ಪನವರ ಅವರು ಪೌಷ್ಟಿಕ ಆಹಾರ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನಿರೂಪಣಾಧಿಕಾರಿ ಶೈಲಾ ಕುರಹಟ್ಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಐ.ಎ.ತಹಶೀಲ್ದಾರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಎಸ್.ಜಿ. ಪಾಟೀಲ, ವಿಜಯಲಕ್ಷ್ಮೀ ಪಾಟೀಲ ಇತರರು ಉಪಸ್ಥಿತರಿದ್ದರು.ಶಿಲ್ಪಾ ಸಿದ್ದಮ್ಮನವರ ಸ್ವಾಗತಿಸಿ, ಪ್ರತಿಜ್ಞಾವಿಧಿ ಬೋಧಿಸಿದರು. ಶ್ರೀದೇವಿ ಬ್ಯಾಡಗಿ ಕಾರ್ಯಕ್ರಮ ನಿರೂಪಿಸಿದರು.