ಕೆ.ಆರ್.ಪೇಟೆ ತಾಲೂಕು ಮಂದಗೆರೆ ಗ್ರಾಪಂ ವ್ಯಾಪ್ತಿಯ ಬೇವಿನಹಳ್ಳಿ ಭಾಗದ ಅಮಾನಿಕೆರೆ, ಗದ್ದೆ ಹೊಸೂರು ಭಾಗದ ಕೆಂಬಾರೆ ಕಟ್ಟೆ ಅಭಿವೃದ್ಧಿ ಕಾಮಗಾರಿಯ ದೈನಂದಿನ ಹಾಜರಾತಿಯಲ್ಲಿ ಗೋಲ್‌ಮಾಲ್ ನಡೆದಿರುವುದಾಗಿ ಚಿಕ್ಕಮಂದಗೆರೆ ಗ್ರಾಮದ ಸಿ.ಪಿ.ಭರತ್ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೆ.ಆರ್.ಪೇಟೆ ತಾಲೂಕು ಮಂದಗೆರೆ ಗ್ರಾಪಂ ವ್ಯಾಪ್ತಿಯ ಬೇವಿನಹಳ್ಳಿ ಭಾಗದ ಅಮಾನಿಕೆರೆ, ಗದ್ದೆ ಹೊಸೂರು ಭಾಗದ ಕೆಂಬಾರೆ ಕಟ್ಟೆ ಅಭಿವೃದ್ಧಿ ಕಾಮಗಾರಿಯ ದೈನಂದಿನ ಹಾಜರಾತಿಯಲ್ಲಿ ಗೋಲ್‌ಮಾಲ್ ನಡೆದಿರುವುದಾಗಿ ಚಿಕ್ಕಮಂದಗೆರೆ ಗ್ರಾಮದ ಸಿ.ಪಿ.ಭರತ್ ಆರೋಪಿಸಿದ್ದಾರೆ.

ಬೇವಿನಹಳ್ಳಿ ಭಾಗದ ಅಮಾನಿಕೆರೆ ಕೂಲಿ ಕಾರ್ಮಿಕರ ಸಂಖ್ಯೆ ೧೦ ಜನರನ್ನು ಜಿಪಿಎಸ್ ಭಾವಚಿತ್ರ ಹೊಂದಿದ್ದು, ದೈನಂದಿನ ಹಾಜರಾತಿಗೆ ೧೦೦ ಜನ ಖಾಲಿ ಕಾರ್ಮಿಕರ ಕಾರ್ಡ್‌ಗಳಿಗೆ ಹಾಜರಾತಿ ನೀಡಲಾಗುತ್ತಿದೆ. ಅದೇ ರೀತಿ ಗದ್ದೆಹೊಸೂರು ಭಾಗದ ಕೆಂಬಾರೆ ಕಟ್ಟೆಯಲ್ಲೂ ದೈನಂದಿನ ೧೦ ಜನರ ಜಿಪಿಎಸ್ ಭಾವಚಿತ್ರ ಬಳಸಿ ೬೦ ಜನರಿಗೆ ಹಾಜರಾತಿ ನೀಡಿ ಸರ್ಕಾರಕ್ಕೆ ಮೋಸ ಮಾಡಲಾಗುತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ದೂರಿದ್ದಾರೆ.

ಅಮಾನಿಕೆರೆ ಮತ್ತು ಕೆಂಬಾರೆ ಕಟ್ಟೆ ಅಭಿವೃದ್ಧಿ ಕಾಮಗಾರಿಗೆ ಕೂಲಿ ಕಾರ್ಮಿಕರನ್ನು ಬಳಸದೆ ಜೆಸಿಬಿ ಬಳಸಲಾಗಿದೆ. ಕೂಲಿ ಮಾಡದ ಕೂಲಿ ಕಾರ್ಮಿಕ ಹಾಜರಾತಿಯನ್ನು ಪಡೆದು ಹಣ ಪಾವತಿಸಲಾಗಿದೆ. ಈ ಬಗ್ಗೆ ಪಂಚಾಯಿತಿ ಅಧ್ಯಕ್ಷರು, ಪಿಡಿಒ, ಕೆ.ಆರ್.ಪೇಟೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ನೀಡಿದರೂ ಪರಿಗಣಿಸಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿ ಬಿಲ್ ಮಾಡಿಕೊಂಡಿದ್ದಾರೆ ಎಂದು ಆಪಾದಿಸಿದ್ದಾರೆ.

ಚಿಕ್ಕಮಂದಗೆರೆಯ ನರೇಗಾ ಯೋಜನೆಯಲ್ಲಿ ನಡೆದಿರುವ ಸಮುದಾಯ ಕಾಮಗಾರಿಗಳಲ್ಲಿ ಸಾಮಗ್ರಿಗಳ ಮೊತ್ತವನ್ನು ನರೇಗಾ ಇಂಜಿನಿಯರ್ ಪಾರ್ಥರವರು ತಮ್ಮ ಸಂಬಂಧಿಕ ಹೆಸರಿಗೆ ಪಾವತಿ ಮಾಡಿಕೊಂಡು ಅವ್ಯವಹಾರ ನಡೆಸಿದ್ದಾರೆ. ಪಾರ್ಥ ಅವರು ಕೆ.ಆರ್.ಪೇಟೆಯ ವಿವಿಧ ಗ್ರಾಪಂಗಳಲ್ಲಿ ಕರ್ತವ್ಯನಿರ್ವಹಿಸಿದ್ದು ಅಲ್ಲಿಯೂ ಲಕ್ಷಾಂತರ ರು. ಹಣವನ್ನು ತಮ್ಮ ಸಂಬಂಧಿಕರ ಹೆಸರಿಗೆ ಹಾಕಿದ್ದಾರೆ ಎಂಬ ಬಗ್ಗೆಯೂ ದೂರಿನಲ್ಲಿ ದಾಖಲಿಸಿದ್ದಾರೆ.

ಚಿಕ್ಕಮಂದಗೆರೆ ಮತ್ತು ಲಕ್ಷ್ಮೀಪುರ ಗ್ರಾಪಂ ವ್ಯಾಪ್ತಿಯ ನರೇಗಾ ಯೋಜನೆಯ ದೂರುಗಳ ಕುರಿತು ಪರಿಶೀಲಿಸುವಂತೆ ಅ.೯ರಂದೇ ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ತನಿಖಾ ತಂಡವನ್ನು ರಚಿಸಿ ಕಾಮಗಾರಿಗಳಲ್ಲಿ ಹಣ ದುರುಪಯೋಗ, ಕರ್ತವ್ಯಲೋಪಗಳಾಗಿರುವ ಕುರಿತಂತೆ ಪಾಂಡವಪುರ ತಾಪಂ ಇಒ ಎಂ.ಎಸ್.ವೀಣಾ ನೇತೃತ್ವದಲ್ಲಿ ತನಿಖೆ ನಡೆಸಿ ಅ.೩೦ರೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದರು.

ಆದರೆ, ಇದುವರೆಗೂ ತನಿಖಾ ತಂಡ ಚಿಕ್ಕಮಂದಗೆರೆ ಹಾಗೂ ಲಕ್ಷ್ಮೀಪುರ ಗ್ರಾಪಂ ಕಚೇರಿಗಳಿಗೆ ಬಂದು ಕಾಮಗಾರಿಗಳ ಪರಿಶೀಲನೆ ನಡೆಸಿಲ್ಲ, ಅಧಿಕಾರಿಗಳು, ಜನಪ್ರತಿನಿಧಿಗಳ ವಿಚಾರಣೆಯನ್ನೂ ನಡೆಸಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಮುಖ್ಯ ಕಾರ್ಯಾಚರಣೆ ಅಧಿಕಾರಿಗಳೇ ಪತ್ರ ಬರೆದು ತನಿಖೆ ನಡೆಸಿ ವರದಿ ನೀಡುವಂತೆ ಕೋರಿದ್ದರೂ ಅಧಿಕಾರಿಗಳು ಕ್ಯಾರೆ ಎನ್ನದೆ ದಿವ್ಯಮೌನ ವಹಿಸಿದ್ದಾರೆ.

ತನಿಖಾ ತಂಡ ರಚಿಸಿ ಎರಡು ತಿಂಗಳಾಗಿದೆ. ಇಲ್ಲಿಯವರೆಗೆ ತನಿಖಾ ಸಮಿತಿಯವರು ಸ್ಥಳಕ್ಕೆ ಬಂದಿಲ್ಲ. ಜಿಪಂ ಸಿಇಒ ಅವರಿಗೆ ವರದಿಯನ್ನೂ ಕೊಟ್ಟಿಲ್ಲ. ಜಿಲ್ಲಾ ಪಂಚಾಯ್ತಿ ಆಡಳಿತ ವ್ಯವಸ್ಥೆ ಕುಸಿದುಬಿದ್ದಿದ್ದು, ರಾಜಕೀಯ ಪ್ರಭಾವಕ್ಕೆ ಮಣಿದು ಸಿಇಒ ಕೂಡ ಮೌನಕ್ಕೆ ಶರಣಾಗಿರಬಹುದೆಂದು ಸಿ.ಪಿ.ಭರತ್ ದೂರಿದ್ದಾರೆ.