ಮಂಗಳೂರು: ಮಂಗಳೂರು ನಗರದ ರಸ್ತೆಗಳಲ್ಲಿನ ಹಂಪ್‌ಗಳಿಗೆ 15 ದಿನಗಳೊಳಗೆ ಬಣ್ಣ ಹಾಕುವ ಕೆಲಸ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮತ್ತು ಮಂಗಳೂರು ಮಹಾನಗರ ಪಾಲಿಕೆ ಆಡಳಿತಾಧಿಕಾರಿ ದರ್ಶನ್ ಎಚ್.ವಿ. ಭರವಸೆ ನೀಡಿದರು.
ಅವರು ಶುಕ್ರವಾರ ಮಂಗಳೂರಿನ ಮಹಾನಗರ ಪಾಲಿಕೆ ಕಚೇರಿಯಲ್ಲಿ ಪೋನ್ ಇನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮಂಗಳೂರು ನಗರದ ರಸ್ತೆಗಳಲ್ಲಿ ಅಳವಡಿಸಲಾಗಿರುವ ಹಂಪ್‌ಗಳಿಗೆ ಸೂಚನಾ ಬಣ್ಣ ಇಲ್ಲದೆ ತಕ್ಷಣಕ್ಕೆ ಹಂಪ್‌ಗಳು ಗಮನಕ್ಕೆ ಬಾರದೇ ಅಪಘಾತಗಳು ಸಂಭವಿಸುತ್ತಿರುವ ಬಗ್ಗೆ ಪೋನ್ ಇನ್ ಕಾರ್ಯಕ್ರಮದಲ್ಲಿ ಹಲವು ಮಂದಿ ದೂರು ನೀಡಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ದರ್ಶನ್, ನಗರದ ರಸ್ತೆಗಳ ಹಂಪ್‌ಗಳಿಗೆ ಸೂಚನಾ ಬಣ್ಣ ಹಾಕಲು ಈಗಾಗಲೇ ಪ್ರಕ್ರಿಯೆ ನಡೆಸಲಾಗಿದ್ದು, ಮುಂದಿನ 15 ದಿನದೊಳಗೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಮೂಡುಬೆಟ್ಟುವಿನ ವ್ಯಕ್ತಿಯೋರ್ವರು ಕರೆ ಮಾಡಿ, ಬಗ್ಗುಂಡಿ ಕೆರೆ ಒತ್ತುವರಿ ಆಗಿದ್ದು, ಇದೀಗ ಈ ಕೆರೆಗೆ ಕೊಳಚೆ ನೀರು ಸೇರುತ್ತಿದೆ. ಈ ಕೆರೆಯನ್ನು ಅಭಿವೃದ್ಧಿ ಮಾಡಿ ಪ್ರವಾಸಿ ತಾಣವನ್ನಾಗಿ ಮಾಡಬಹುದು. ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುತ್ತೇನೆ ಎಂದು ಡಿಸಿ ಭರವಸೆ ನೀಡಿದರು.ಸ್ಟೇಟ್ ಬ್ಯಾಂಕ್‌ನ ತಾತ್ಕಲಿಕ ಬಸ್ ನಿಲ್ದಾಣ ಇಂದಿಗೂ ತಾತ್ಕಲಿಕವಾಗಿಯೇ ಉಳಿದಿದ್ದು, ಇದರಿಂದ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಳವಾಗುತ್ತಿದೆ. ಅದನ್ನು ಪಡೀಲ್‌ಗೆ ಶಿಫ್ಟ್ ಮಾಡಬೇಕು ಎಂದು ಪ್ರಭು ಎಂಬವರು ಆಗ್ರಹಿಸಿದರು. 1.5 ಕಿಮೀ. ದೂರಕ್ಕೆ ಆಟೋ 50 ರು. ಬಾಡಿಗೆ ಪಡೆದ ಬಗ್ಗೆ ಪ್ರದೀಪ್ ಎಂಬವರು ದೂರು ನೀಡಿದರು. ಈ ಬಗ್ಗೆ ಕ್ರಮಕ್ಕೆ ಡಿಸಿ ಅಧಿಕಾರಿಗಳಿಗೆ ಸೂಚಿಸಿದರು.
ಚರಂಡಿ, ರಸ್ತೆ, ರಾಜಕಾಲುವೆ ಬಗ್ಗೆ ದೂರು: ಮಳೆಗಾಲಕ್ಕೆ ಮೊದಲು ಚರಂಡಿ ದುರಸ್ತಿ ಮಾಡಬೇಕು, ರಾಜಕಾಲುವೆ ಹೂಳು ತೆಗೆಯಬೇಕು, ಮನೆ ಬಳಿಯ ಅಪಾಯಕಾರಿ ಮರದ ಗೆಲ್ಲು ತೆರವು ಮಾಡಬೇಕು, ಅಪುರ್ಣ ಸ್ಥಿತಿಯಲ್ಲಿರುವ ಕಾಮಗಾರಿ ಪೂರ್ಣಗೊಳಿಸಬೇಕು, ಕಸ ಸಾಗಾಟ ಬಗ್ಗೆ ಎಂಬಿತ್ಯಾದಿ ದೂರುಗಳ ಸಂಖ್ಯೆ ಅಧಿಕವಾಗಿತ್ತು. ಮಳೆಗಾಲಕ್ಕೆ ಮೊದಲು ಮಳೆಗಾಲದ ಪೂರ್ವ ತಯಾರಿ ಕೆಲಸಗಳನ್ನು ಪೂರ್ಣಗೊಳಿಸಲು ಈಗಾಗಲೇ ಸೂಚಿಸಲಾಗಿದೆ, ಪರಿಹಾರ ಕಾಮಗಾರಿ ನಡೆಯಲಿದೆ, ಈ ವೇಳೆ ಸಾರ್ವಜನಿಕರಿಗೂ ಮಾಹಿತಿ ನೀಡಲಾಗುತ್ತದೆ ಎಂದು ಡಿಸಿ ದರ್ಶನ್ ತಿಳಿಸಿದರು.
ನಗರದ ಹಲವೆಡೆ ಡ್ರೈನೇಜ್ ಸಮರ್ಪಕವಾಗಿಲ್ಲದೆ ರಸ್ತೆಯಲ್ಲೇ ಡ್ರೈನೇಜ್ ನೀರು ಹರಿಯುತ್ತಿರುವ ಬಗ್ಗೆ ನಾಗರಿಕರು ದೂರಿದರು. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು, ಇದಕ್ಕೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ನಗರದ ಸಮರ್ಪಕ ಯುಜಿಡಿ ಯೋಜನೆಯ ಬಗ್ಗೆ ಈಗಾಗಲೇ ಯೋಜನೆ ರೂಪಿಸಲಾಗಿದೆ. ಸಣ್ಣ ಪುಟ್ಟ ಕೆಲಸವನ್ನು ಪಾಲಿಕೆ ವತಿಯಿಂದ ನಡೆಸಲಾಗುವುದು, ದೊಡ್ಡ ಕಾಮಗಾರಿಗಳನ್ನು ವಿಶೇಷ ಅನುದಾನದಲ್ಲಿ ನಡೆಸಲು ಪ್ರಕ್ರಿಯೆ ನಡೆಯುತ್ತಿದೆ ಎಂದು ಡಿಸಿ ತಿಳಿಸಿದರು.
ಕಾಲುವೆ ನೀರು ಮನೆಗೆ: ಸುಭಾಷ್‌ನಗರದ ವ್ಯಕ್ತಿಯೋರ್ವರು ಕರೆ ಮಾಡಿ, ಮಳೆ ಸಂದರ್ಭದಲ್ಲಿ ರಾಜ ಕಾಲುವೆ ನೀರು ಮನೆಗೆ ನುಗ್ಗುತ್ತಿದ್ದು, ಮನೆ ಮುಳುಗುತ್ತಿದೆ. ಈ ವರ್ಷವೂ ಸಮಸ್ಯೆ ಆಗುವ ಭೀತಿ ಇದೆ. ಇದಕ್ಕೆ ಪರಿಹಾರ ಕಲ್ಪಿಸಿ ಎಂದು ಅಳಲು ತೋಡಿಕೊಂಡರು. ಅವರನ್ನು ಸಮಾಧಾನ ಪಡಿಸಿದ ಡಿಸಿ, ಇವತ್ತೇ ನಿಮ್ಮಲ್ಲಿಗೆ ಎಂಜಿನಿಯರ್ ಅವರನ್ನು ಕಳುಹಿಸಿ ಪರಿಶೀಲನೆಗೆ ಸೂಚಿಸುತ್ತೇನೆ ಎಂದರು. ಮುಂದಿನ ಫೋನ್ ಇನ್ ಕಾರ್ಯಕ್ರಮಕ್ಕೆ ಎಲ್ಲ ಎಂಜಿನಿಯರ್‌ಗಳು ಭಾಗವಹಿಸಬೇಕು ಎಂದು ಡಿಸಿ ನಿರ್ದೇಶನ ನೀಡಿದರು.ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.