ಮಂಗಳೂರು: ಮಂಗಳೂರು ನಗರದ ವಿವಿಧ ಬೇಡಿಕೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಸುರೇಶ್ ಬಿ. ಹೇಳಿದರು.

ಕರ್ನಾಟಕ ಸರ್ಕಾರ, ನಗರಾಭಿವೃದ್ಧಿ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ (ಹಂತ 2) ಮತ್ತು ಎನ್‌ಜಿಟಿ ಪರಿಹಾರ ನಿಧಿ ಅಡಿಯಲ್ಲಿ 165 ಕೋಟಿ ರು. ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಯ ಬಳಿಕ ಅಂಬೇಡ್ಕರ್ ಭವನದಲ್ಲಿ ನಡೆದ ಸಭಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಂಗಳೂರು ನಗರದಲ್ಲಿ ವ್ಯವಸ್ಥಿತ, ಸಮರ್ಪಕ ಒಳಚರಂಡಿ ಯೋಜನೆ ಅನುಷ್ಠಾನಕ್ಕೆ ಅನುದಾನ ಕೇಳಿದ್ದಾರೆ. ಇಲ್ಲಿನ ಶಾಸಕರು, ಪ್ರಮುಖರ ಜೊತೆ ಸಿಎಂ ಅವರನ್ನು ಭೇಟಿ ಮಾಡಿ ವಿಶೇಷ ಪ್ಯಾಕೇಜ್ ಮಂಜೂರು ಮಾಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಕಾಂಗ್ರೆಸ್ ಸರಕಾರ ಯಾವುದೇ ತಾರತಮ್ಯ ಮಾಡದೇ ಸಮಾನವಾಗಿ ಅನುದಾನ ನೀಡುತ್ತಿದೆ. ರಾಜ್ಯಮ 13 ಮಹಾನಗರ ಪಾಲಿಕೆಗಳಿಗೂ ಸಮಾನ ಅನುದಾನ ನೀಡಲಾಗಿದೆ. ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಂಗಳೂರಿನ 18 ಕೆರೆಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಮಂಗಳೂರು ನಗರಕ್ಕೆ 165 ಕೋಟಿ ರು. ವಿಶೇಷ ಅನುದಾನದಡಿಯಲ್ಲಿ ಕಾಮಗಾರಿ ನಡೆಯುತ್ತಿದೆ. ವೈಜ್ಞಾನಿಕ ಮತ್ತು ಶಾಶ್ವತ, ಗುಣಮಟ್ಟದ ಕಾಮಗಾರಿಯಾಗಲಿದೆ ಇದು ಮಂಗಳೂರು ಅಭಿವೃದ್ಧಿಗೆ ಪೂರಕವಾಗಲಿದೆ. ಮಂಗಳೂರು ರಾಜ್ಯ ಪ್ರತಿಷ್ಠಿತ ನಗರ. ರಾಜ್ಯದ ಆರ್ಥಿಕತೆಗೆ ಮಂಗಳೂರು ಜಿಲ್ಲೆ, ನಗರ ಹೆಚ್ಚಿನ ಕೊಡುಗೆ ನೀಡುತ್ತಿದೆ. ಮಂಗಳೂರಿನಲ್ಲೇ ಹೆಚ್ಚಿನ ಉದ್ಯೋಗಗಳು, ಕೆಲಸಗಳು ಸಿಗುವಂತಾಗಬೇಕು. ಐಟಿ ಪಾರ್ಕ್ ನಿರ್ಮಾಣದ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ನದಿಗಳ ಒತ್ತುವರಿ ಆಗಿರುವುದನ್ನು ಸರ್ವೆ ಮಾಡಲು ಒಂದು ಕೋಟಿ ರು.ಇಡಲಾಗಿದೆ. ಈ ಮೂಲಕ ಒತ್ತುವರಿ ತೆರವಿಗೆ ಕ್ರಮ ವಹಿಸುತ್ತೇವೆ ಎಂದರು.


ಅಭಿವೃದ್ಧಿಗೆ ಮಂಗಳೂರಿಗೆ ಹೆಚ್ಚಿನ ಗಮನ: ಮಂಗಳೂರು ನಗರ, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ, ಶಾಂತಿಯ ವಾತಾವರಣ ನಿರ್ಮಾಣಗೊಂಡಿದೆ. ಐಟಿ ಕಂಪೆನಿಗಳು ಮಂಗಳೂರು ಕಡೆಗೆ ಹೆಚ್ಚಿನ ಗಮನ ನೀಡುತ್ತಿದೆ. ಕುದ್ಮುಲ್ ರಂಗರಾಯರ ಸಮಾಧಿ ಅಭಿವೃದ್ಧಿ, ಅಂಬೇಡ್ಕರ್ ವೃತ್ತ ಅನುಷ್ಠಾನ ಮಾಡುತ್ತೇವೆ ಎಂದರು. ವೆನ್ಲಾಕ್ ಆಸ್ಪತ್ರೆಯನ್ನು ಪ್ರಾದೇಶಿಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗಿ ಘೋಷಿಸಲು ನಿರ್ಣಯ ಮಾಡಿ ಕಳುಹಿಸಲು ಸೂಚಿಸಲಾಗಿದೆ. ಕೋಟಿ ರು. ವೆಚ್ಚದಲ್ಲಿ ಒಪಿಡಿ ಬ್ಲಾಕ್ ನಿರ್ಮಾಣವಾಗಲಿದೆ. ಮುಂದಿನ ತಿಂಗಳು ಶಂಕುಸ್ಥಾಪನೆ ಮಾಡಲಿದ್ದೇವೆ ಎಂದರು.

ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಂಗಳೂರು ಮಹಾನಗರ ಪಾಲಿಕೆ ಎತ್ತರಕ್ಕೆ ಬೆಳೆಯುವ ಪಾಲಿಕೆಯಾಗಿದ್ದು, ಇಲ್ಲಿನ ಅಭಿವೃದ್ಧಿಗೆ ಸರಕಾರ ವಿಶೇಷ ಗಮನಹರಿಸಬೇಕು. ನಗರದಲ್ಲಿ ಸಮರ್ಪಕವಾದ ಒಳಚರಂಡಿ ವ್ಯವಸ್ಥೆ ಅನುಷ್ಢಾನ ಆಗಬೇಕಾಗಿದ್ದು, ಇದಕ್ಕೆ ಸಾವಿರ ಕೋಟಿ ರು. ವಿಶೇಷ ಅನುದಾನ ನೀಡಬೇಕು. ರಾಜ ಕಾಲುವೆಗಳ ಹೂಳು ತೆರವಿಗೆ ಸಮಗ್ರ ಯೋಜನೆ ರೂಪಿಸಬೇಕು, ಕುದ್ಮುಲ್ ರಂಗರಾವ್ ಸಮಾಧಿ ಅಭಿವೃದ್ಧಿ, ಅಂಬೇಡ್ಕರ್ ವೃತ್ತ ಅನುಷ್ಠಾನ ಮುಂತಾದ ಬೇಡಿಕೆಗಳ ಈಡೇರಿಸಲು ಸಚಿವ ಬೈರತಿ ಸುರೇಶ್ ಅವರು ಕ್ರಮವಹಿಸಬೇಕು ಎಂದು ಅಹವಾಲು ಮುಂದಿರಿಸಿದರು.

ಜಿಲ್ಲಾಧಿಕಾರಿ ದರ್ಶನ್, ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ, ಮಾಜಿ ಶಾಸಕ ಜೆ.ಆರ್.ಲೋಬೋ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎ.ಗಫೂರ್, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಗ್ಯಾರಂಟಿ ಯೋಜೆನ ಪ್ರಾಧಿಕಾರ ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ, ಪ್ರಮುಖರಾದ ಜೋಕಿಂ, ವಿಶ್ವಾಸದಾಸ್, ಶಾಲೆಟ್ ಪಿಂಟೋ, ಲಾವಣ್ಯ ಬಳ್ಳಾಲ್, ಶಶಿಧರ ಹೆಗ್ಡೆ, ಸದಾಶಿವ ಉಳ್ಳಾಲ ಮತ್ತಿತರರು ಇದ್ದರು. ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸವಲತ್ತುಗಳ ಚೆಕ್ ವಿತರಿಸಲಾಯಿತು.