ಗದ್ದಲದಲ್ಲೇ ಅಂತ್ಯ ಕಂಡ ಮಂಗಳೂರು ಪಾಲಿಕೆಯ ಕೊನೆಯ ಸಾಮಾನ್ಯ ಸಭೆ

| Published : Feb 28 2025, 12:46 AM IST

ಸಾರಾಂಶ

ಮಂಗಳೂರು ಮಹಾನಗರ ಪಾಲಿಕೆ ಹಾಲಿ ಆಡ‍ಳಿತ ಅವಧಿಯ ಕೊನೆಯ ಸಾಮಾನ್ಯ ಸಭೆ ಗುರುವಾರ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಆರೋಪ, ಪ್ರತ್ಯಾರೋಪಗಳ ಮಧ್ಯೆ ಕೊನೆಗೊಂಡಿತು. ಸಭೆಯ ಕೊನೆಯಲ್ಲಿ ವಿಪಕ್ಷ ಕಾಂಗ್ರೆಸ್‌ ವಿರೋಧದ ನಡುವೆ ಕೆಲವು ಆಡಳಿತಾತ್ಮಕ ನಿರ್ಧಾರಗಳನ್ನು ಅಂಗೀಕರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಮಹಾನಗರ ಪಾಲಿಕೆ ಹಾಲಿ ಆಡ‍ಳಿತ ಅವಧಿಯ ಕೊನೆಯ ಸಾಮಾನ್ಯ ಸಭೆ ಗುರುವಾರ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಆರೋಪ, ಪ್ರತ್ಯಾರೋಪಗಳ ಮಧ್ಯೆ ಕೊನೆಗೊಂಡಿತು. ಸಭೆಯ ಕೊನೆಯಲ್ಲಿ ವಿಪಕ್ಷ ಕಾಂಗ್ರೆಸ್‌ ವಿರೋಧದ ನಡುವೆ ಕೆಲವು ಆಡಳಿತಾತ್ಮಕ ನಿರ್ಧಾರಗಳನ್ನು ಅಂಗೀಕರಿಸಲಾಯಿತು.

ಮೇಯರ್‌ ಮನೋಜ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ಇಲ್ಲಿನ ಮಂಗಳಾ ಸಭಾಂಗಣದಲ್ಲಿ ಸಾಮಾನ್ಯ ಸಭೆ ಆರಂಭದಲ್ಲೇ ವಿಪಕ್ಷ ನಾಯಕ ಅನಿಲ್‌ ಕುಮಾರ್‌ ಅವರು ಪಾಲಿಕೆ ಆಡಳಿತ ವೈಫಲ್ಯ ಬಗ್ಗೆ ಪ್ರಸ್ತಾಪಿಸಿದರು. ಇದನ್ನು ಆಡಳಿತ ಬಿಜೆಪಿ ಸದಸ್ಯರು ಆಕ್ಷೇಪಿಸಿದ್ದು, ಎರಡು ಪಕ್ಷಗಳ ಸದಸ್ಯರ ನಡುವೆ ತೀವ್ರ ಮಾತಿನ ಚಕಮಿಕಿಗೆ ಕಾರಣವಾಯಿತು. ಮಧ್ಯಾಹ್ನ ವರೆಗೆ ಎರಡು ಬಾರಿ ಕಲಾಪ ಮುಂದೂಡಿದರೂ ಪರಿಸ್ಥಿತಿ ತಿಳಿಯಾಗಲಿಲ್ಲ. ಅಪರಾಹ್ನ ನೇರವಾಗಿ ಅಜೆಂಡಾ ಓದುವ ಮೂಲಕ ವಿಪಕ್ಷದ ಗದ್ದಲ, ವಿರೋಧದ ನಡುವೆಯೂ ಕೆಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಅಜೆಂಡಾ ಮಂಡಿಸಿದರು. ಗುಜ್ಜರಕೆರೆ ದೇವಸ್ಥಾನ ಸ್ವಾಧೀನಕ್ಕೆ:

ಬೋ‍ಳಾರ ವಾರ್ಡ್‌ನಲ್ಲಿರುವ ಗುಜ್ಜರ ಕೆರೆಯನ್ನು ಹಳೆಕೋಟೆ ಮಾರಿಯಮ್ಮ ದೇವಸ್ಥಾದ ನಿರ್ವಹಣೆ ವಹಿಸಿಕೊಡುವಂತೆ ನಿರ್ಧರಿಸಲಾಯಿತು. ಈ ಕೆರೆಯ ನೀರು ಮಲಿನವಾಗದಂತೆ ಮತ್ತು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ದೇವಸ್ಥಾನದ ಸುಪರ್ದಿಗೆ ವಹಿಸುವುದು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳ ಕೋರಿಕೆ ಪತ್ರಕ್ಕೆ ಒಪ್ಪಿಗೆ ಸೂಚಿಸುವ ನಿರ್ಣಯ ಕೈಗೊಳ್ಳಲಾಯಿತು.

ವಾರ್ಡ್‌ ಉಪ ಸಮಿತಿ ನಿಯಮ ಸರ್ಕಾರಕ್ಕೆ:

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ವಾರ್ಡ್‌ ಸಮಿತಿ ರಚಿಸಲಾಗಿದ್ದು, ಇವುಗಳ ಸುಲಲಿತ ಕಾರ್ಯನಿರ್ವಹಣೆಗೆ ಎರಡು ಉಪ ನಿಯಮಗಳಿಗೆ ಆಕ್ಷೇಪಣೆ ಆಹ್ವಾನಿಸಲಾಗಿದೆ. ಆಕ್ಷೇಪಣೆ ಮತ್ತು ಸಲಹೆಗಳನ್ನು ಅಂತಿಮಗೊಳಿಸಿ ಸರ್ಕಾರಕ್ಕೆ ಕಳುಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ವೀರರಾಣಿ ಅಬ್ಬಕ್ಕ ರಸ್ತೆ ನಾಮಕರಣ ಪ್ರಸ್ತಾಪ:

ವೆಲೆನ್ಸಿಯಾ 48ನೇ ವಾರ್ಡ್‌ನ ಪಂಪ್‌ವೆಲ್‌ ಜಂಕ್ಷನ್‌ನಿಂದ ಉಳ್ಳಾಲ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್‌ ರಸ್ತೆಗೆ ವೀರರಾಣಿ ಅಬ್ಬಕ್ಕ ರಸ್ತೆ ಎಂದು ನಾಮಕರಣ ಮಾಡುವ ಬಗ್ಗೆ ಶಾಸಕ ವೇದವ್ಯಾಸ್‌ ಕಾಮತ್‌ ಮತ್ತು ಸ್ಥಳೀಯ ಪಾಲಿಕೆ ಸದಸ್ಯ ಸಂದೀಪ್‌ ಗರೋಡಿ ಮನವಿ ಸಲ್ಲಿಸಿದ್ದರು.

ಡಾ.ಅಂಬೇಡ್ಕರ್‌ ವೃತ್ತ ನಾಮಕರಣ:

ಬಂಟ್ಸ್‌ ಹಾಸ್ಟೆಲ್‌ನಿಂದ ಬರುವ ರಸ್ತೆ, ಹಂಪನಕಟ್ಟೆಯಿಂದ ಬರುವ ಮೂಲ್ಕಿ ಸುಂದರರಾಂ ಶೆಟ್ಟಿ ರಸ್ತೆ ಹಾಗೂ ಶಿವರಾಮ ಕಾರಂತ ರಸ್ತೆ ಸೇರುವ ಜಂಕ್ಷನ್‌ನ್ನು ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತ ಎಂದು ನಾಮಕರಣಕ್ಕೆ ತೀರ್ಮಾನಿಸಲಾಯಿತು.

ಕಂಕನಾಡಿ ವೆಲೆನ್ಸಿಯಾ ವಾರ್ಡ್‌ ಉಜ್ಜೋಡಿ ನೆಕ್ಕರೆಮಾರ್‌ ರಸ್ತೆಗೆ ಬೊಮ್ಮಣ್ಣ ಪೂಜಾರಿ ರಸ್ತೆ ಎಂದು ನಾಮಕರಣಕ್ಕೆ ಸದಸ್ಯ ಸಂದೀಪ್‌ ಪ್ರಸ್ತಾಪಕ್ಕೆ ಸಮ್ಮತಿಸಲಾಯಿತು.

ಉಪ ಮೇಯರ್‌ ಭಾನುಮತಿ, ಆಯುಕ್ತ ರವಿಚಂದ್ರ ನಾಯಕ್‌ ಇದ್ದರು. .............

ಇಡೀ ದಿನ ವ್ಯರ್ಥವಾದ ಕಲಾಪ

ಸಾಮಾನ್ಯ ಸಭೆಯ ಆರಂಭದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಶುರುವಾದ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವಿನ ಪ್ರಲಾಪಕ್ಕೆ ಇಡೀ ದಿನದ ಕಲಾಪ ವ್ಯರ್ಥವಾಯಿತು. ಸುಮಾರು ಎರಡೂವರೆ ತಾಸುಗಳ ಕಾಲ ಧ್ವನಿವರ್ಧಕಗಳೇ ಕಿತ್ತು ಬರುವ ರೀತಿ ಸದಸ್ಯರ ಮಾತಿನ ಸಮರ ನಡೆಯಿತು.

ನಾಡಗೀತೆಯ ಬಳಿಕ ಮೇಯರ್‌ರವರು ಹಿಂದಿನ ಸಭೆಯ ನಡಾವಳಿಗಳನ್ನು ಸ್ಥಿರೀಕರಣಗೊಳಿಸಿ ಪ್ರಶ್ನೋತ್ತರಕ್ಕೆ ಅವಕಾಶ ನೀಡಿದರು.

ಈ ಸಂದರ್ಭ ವಿಪಕ್ಷ ನಾಯಕ ಅನಿಲ್‌ ಕುಮಾರ್‌ ಮಾತನಾಡಿ, ಪಾಲಿಕೆಯಲ್ಲಿ ಬಿಜೆಪಿ ಆಡಳಿತದ ಐದು ವರ್ಷಗಳಲ್ಲಿ ಒಳಚರಂಡಿಗಾಗಿ 300 ಕೋಟಿ ರೂ. ಖರ್ಚು ಮಾಡಲಾಗಿದೆ. ಕಳೆದ ಸುಮಾರು ಮೂರು ವರ್ಷಗಳಿಂದ ನಗರದಲ್ಲೆಡೆ ಒಳಚರಂಡಿ ಅವ್ಯವಸ್ಥೆಯ ಬಗ್ಗೆ ವಿಪಕ್ಷ ಗಮನ ಸೆಳೆಯುತ್ತಾ ಬಂದಿದ್ದರೂ, ಅದನ್ನು ಸರಿಪಡಿಸುವಲ್ಲಿ ಆಡಳಿತ ವಿಫಲವಾಗಿದೆ ಎಂದು ಆರೋಪಿಸಿದರು.

ಒಟ್ಟಿನಲ್ಲಿ ಪಾಲಿಕೆಯ ಐದು ವರ್ಷಗಳ ಆಡಳಿತ ದೌರ್ಭಾಗ್ಯ, ಆಡಳಿತ ವೈಫಲ್ಯ ಎಂದು ವಿಪಕ್ಷ ನಾಯಕರು ಆರೋಪ ಮುಂದುವರಿಸುತ್ತಿದ್ದಂತೆಯೇ ವಿಪಕ್ಷ ಸದಸ್ಯೆ ಶಕೀಲಾ ಕಾವ ಮಧ್ಯ ಪ್ರವೇಶಿಸಿ, ಸದನದಲ್ಲಿ ರಾಜಕೀಯ ಪ್ರೇರಿತ ಮಾತುಗಳನ್ನಾಡಲಾಗುತ್ತಿದೆ ಎಂದರು.

ಈ ವಿಚಾರದಲ್ಲಿ ಪರಸ್ಪರ ಸದಸ್ಯರೊಳಗೆ ಮಾತಿನ ಚಕಮಕಿ ಆರಂಭವಾಯಿತು. ವಿಪಕ್ಷ ನಾಯಕ ಮಾತನಾಡುವಾಗ ಅಡ್ಡಿ ಪಡಿಸಿ ಹಕ್ಕುಚ್ಯುತಿ ಮಾಡಲಾಗಿದೆ ಎಂದು ವಿಪಕ್ಷ ಸದಸ್ಯರು ಆಡಳಿತ ಪಕ್ಷದ ವಿರುದ್ಧ ಹರಿಹಾಯ್ದರು. ಆಡಳಿತ ಹಾಗೂ ವಿಪಕ್ಷ ಸದಸ್ಯರು ಮೈಕ್‌ ಕಿತ್ತುಹೋಗುವ ರೀತಿ ಬೊಬ್ಬಿರಿದರು. ಯಾರ ಮಾತು ಯಾರಿಗೂ ಕೇಳಿಸದಾಯಿತು. ಅಷ್ಟುಹೊತ್ತಿಗಾಗಲೇ ಸುಮಾರು ಒಂದೂವರೆ ತಾಸು ಕಳೆದಿತ್ತು. ಸದಸ್ಯರನ್ನು ನಿಯಂತ್ರಿಸಲು ವಿಫಲರಾದ ಮೇಯರ್‌ ಬೆಲ್‌ ಬಾರಿಸಿ ಸಭೆ ಮುಂದೂಡುವುದಾಗಿ ಘೋಷಣೆ ಮಾಡದೆ ಸದನದಿಂದ ಹೊರ ನಡೆದರು. ಆಡಳಿತ ಪಕ್ಷದ ಸದಸ್ಯರೂ ಸದನದಿಂದ ಹೊರನಡೆದರು.ಬಳಿಕ ಸುಮಾರು 15 ನಿಮಿಷಗಳ ಬಳಿಕ ಮತ್ತೆ ಉಪ ಮೇಯರ್‌ ಹಾಗೂ ಸದಸ್ಯರ ಜತೆ ಸದನ ಮೇಯರ್‌ ಸದನ ಪ್ರವೇಶಿಸಿದರೂ ವಿಪಕ್ಷ ನಾಯಕರಿಗೆ ಪೂರ್ತಿ ಮಾತನಾಡಲು ಅವಕಾಶ ನೀಡಿ ಎಂದು ಪಟ್ಟುಬಿಡಿದ ಕಾರಣ ಕಲಾಪ ಮುಂದುವರಿಸಲು ಸಾಧ್ಯವಾಗಲಿಲ್ಲ.

ಈ ನಡುವೆ ಮೇಯರ್‌ರವರು ಸದಸ್ಯರನ್ನು ಸಮಾಧಾನ ಪಡಿಸಲೆತ್ನಿಸಿ ಮಾತನಾಡಲು ಪ್ರಯತ್ನಿಸಿದರೂ ಮತ್ತೆ ವಿಪಕ್ಷ ನಾಯಕನಿಗೆ ಮೊದಲು ಮಾತನಾಡಲು ಅವಕಾಶ ನೀಡಬೇಕೆಂಬುದು ಪಟ್ಟು ಹಿಡಿದು ವಿಪಕ್ಷ ಸದಸ್ಯರು ಮೇಯರ್‌ ಪೀಠದೆದುರು ತೆರಳಿ ಒತ್ತಾಯಿಸಿದರು. ಹೀಗೆ ಕೆಲಹೊತ್ತು ಗದ್ದಲದ ಬಳಿಕ ಇನ್ನೇನು ಸಭೆ ಆರಂಭವಾಗುತ್ತದೆ ಎನ್ನುತ್ತಿದ್ದಂತೆಯೇ ಮತ್ತೆ ಸದಸ್ಯರ ನಡುವೆ ವಾಗ್ವಾದ ಮುಂದುವರಿದಾಗ 1.30ರ ಸುಮಾರಿಗೆ ಮೇಯರ್‌ ಊಟದ ವಿರಾಮದೊಂದಿಗೆ ಸಭೆಯನ್ನು ಮುಂದೂಡಿದರು. ಅಪರಾಹ್ನ ಚರ್ಚೆಗೆ ಅವಕಾಶ ನೀಡದೆ ನೇರವಾಗಿ ಅಜೆಂಡಾ ಮಂಡಿಸಲಾಯಿತು.