ಸಚಿವ ಜಮೀರ್‌ ಅಹ್ಮದ್‌ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಶ್ರೀನಾಥ ಗೌಪ್ಯ ಚರ್ಚೆ

| N/A | Published : Feb 28 2025, 12:46 AM IST / Updated: Feb 28 2025, 12:48 PM IST

ಸಚಿವ ಜಮೀರ್‌ ಅಹ್ಮದ್‌ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಶ್ರೀನಾಥ ಗೌಪ್ಯ ಚರ್ಚೆ
Share this Article
  • FB
  • TW
  • Linkdin
  • Email

ಸಾರಾಂಶ

ಸಚಿವ ಜಮೀರ್‌ ಅಹ್ಮದ್‌ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಶ್ರೀನಾಥ ಗುರುವಾರ ಇಲ್ಲಿ ಗೌಪ್ಯ ಮಾತುಕತೆ ನಡೆಸಿರುವುದು ಭಾರೀ ಸಂಚಲನ ಮೂಡಿಸಿದೆ.

ಗಂಗಾವತಿ:  ಸಚಿವ ಜಮೀರ್‌ ಅಹ್ಮದ್‌ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಶ್ರೀನಾಥ ಗುರುವಾರ ಇಲ್ಲಿ ಗೌಪ್ಯ ಮಾತುಕತೆ ನಡೆಸಿರುವುದು ಭಾರೀ ಸಂಚಲನ ಮೂಡಿಸಿದೆ.

ತಮ್ಮ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ಇದರಿಂದ ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಎದುರಿಸಲು ಕಷ್ಟವಾಗಿದೆ. ಕೆಲ ಕಾರ್ಯಕರ್ತರನ್ನು ಬಿಜೆಪಿ ಸಂಪರ್ಕಿಸುತ್ತಿದೆ ಎಂಬ ಮಾಹಿತಿಯನ್ನು ಶ್ರೀನಾಥ ನೀಡಿದ್ದು, ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧವೂ ದೂರು ನೀಡಿದ್ದಾರೆ.

ಮಾಜಿ ಸಂಸದ ಎಚ್‌.ಜಿ. ರಾಮುಲು ಅವರ ತೋಟದಲ್ಲಿ ಗೌಪ್ಯ ಮಾತುಕತೆ ನಡೆಸಿದ್ದಾರೆ. ಗಂಗಾವತಿ ಕ್ಷೇತ್ರದಲ್ಲಿ ಗುಂಪುಗಾರಿಕೆ ಮುಂದುವರಿದಿದ್ದರಿಂದ ಕಾರ್ಯಕರ್ತರಲ್ಲಿ ಉತ್ಸಾಹ ಕಡಿಮೆಯಾಗಿದೆ. ಸರ್ಕಾರದ ಮಟ್ಟದಲ್ಲಿ ಕಾರ್ಯಕರ್ತರಿಗೆ ನಾಮನಿರ್ದೇಶನ ಸೇರಿದಂತೆ ಸರಿಯಾದ ಸ್ಥಾನಮಾನ ದೊರೆಯುತ್ತಿಲ್ಲ. ಇದರಿಂದ ಕ್ಷೇತ್ರದಲ್ಲಿ ಮೂರು ಗುಂಪುಗಳಾಗಿವೆ. ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎನ್ನುವುದನ್ನು ಅರಿತ ಸಚಿವ ಜಮೀರ್‌ ಅಹ್ಮದ್‌ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗಿದ್ದಾರೆ. ಇದರ ಭಾಗವಾಗಿ ಶ್ರೀನಾಥ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಕ್ಷೇತ್ರದಲ್ಲಿ ಮುಖಂಡರ ಗುಂಪುಗಾರಿಕೆಯಿಂದ ಕಾರ್ಯಕರ್ತರಿಗೆ ಅನ್ಯಾಯವಾಗಿದೆ. ಈ ರೀತಿಯ ಗುಂಪುಗಾರಿಕೆಯಿಂದಲೇ ಗಂಗಾವತಿ ಹಾಗೂ ಕನಕಗಿರಿ ಕ್ಷೇತ್ರದಲ್ಲಿ ನಡೆದ ಸಹಕಾರ ಸಂಘಗಳ ಚುನಾವಣೆಯಲ್ಲಿ ಹಿನ್ನೆಡೆಯಾಗಿದೆ. ಗುಂಪುಗಾರಿಕೆ ಮುಂದುವರಿದರೆ ಜಿಪಂ ಹಾಗೂ ತಾಪಂ ಪಂಚಾಯಿತಿ ಚುನಾವಣೆ ಮೇಲೆ ತೀವ್ರ ಪರಿಣಾಮ ಬೀರಲಿದೆ ಎನ್ನುವ ಕುರಿತು ಪ್ರಸ್ತಾಪಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಜಿಲ್ಲಾ ಉಸ್ತುವಾರಿ ವಿರುದ್ಧ ದೂರು:

ಜಿಲ್ಲಾ ಉಸ್ತುವಾರಿ ಸಚಿವರು ಗಂಗಾವತಿ ಕ್ಷೇತ್ರದ ನಮ್ಮ ಬೆಂಬಲಿಗರನ್ನು ಕಡೆಗಣಿಸಿದ್ದಾರೆ. ನಾಮನಿರ್ದೇಶನ ಮಾಡುವಲ್ಲಿ ತಾರತಮ್ಯ ಮಾಡಲಾಗಿದೆ. ಇದರಿಂದ ಪಕ್ಷ ಸಂಘಟಿಸಲು ತೀವ್ರ ತೊಂದರೆಯಾಗಿದೆ ಎಂದು ಶ್ರೀನಾಥ ಜಮೀರ್‌ ಬಳಿ ದೂರು ಸಲ್ಲಿಸಿದ್ದು, ಇಂತಹ ಗುಂಪುಗಾರಿಕೆಯಿಂದಲೇ ಗಂಗಾವತಿ ಕ್ಷೇತ್ರವನ್ನು ವಿಧಾನಸಭೆಯಲ್ಲಿ ಕಳೆದುಕೊಳ್ಳಬೇಕಾಯಿತು ಎಂದು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.ಎಚ್.ಜಿ. ರಾಮುಲು ನಮ್ಮ ನಾಯಕರಾಗಿದ್ದು ಮೊದಲು ಬಾರಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೇನೆ. ಗಂಗಾವತಿ ಕ್ಷೇತ್ರದಲ್ಲಿ ಗುಂಪುಗಾರಿಕೆ ಇರುವ ಬಗ್ಗೆ ಮಾಹಿತಿ ಪಡೆದಿದ್ದೇನೆ. ಎಚ್.ಆರ್. ಶ್ರೀನಾಥ ಜತೆ ಮಾತುಕತೆ ನಡೆಸಿದ್ದು, ಗುಂಪುಗಾರಿಕೆ ನಿವಾರಿಸುವೆ ಎಂದು ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದರು.

ಗಂಗಾವತಿ ಕ್ಷೇತ್ರದಲ್ಲಿ ಗುಂಪುಗಾರಿಕೆ, ಕಾರ್ಯಕರ್ತರ ನಾಮನಿರ್ದೇಶನ, ಅಭಿವೃದ್ಧಿ ಕುಂಠಿತ, ಪಕ್ಷದ ಸಂಘಟನೆ ಸೇರಿದಂತೆ ಕಾಂಗ್ರೆಸ್ ವಲಯದಲ್ಲಿ ನಿರುತ್ಸಾಹದ ಬಗ್ಗೆ ಸಚಿವ ಜಮೀರ್ ಅವರ ಮುಂದೆ ಪ್ರಸ್ತಾಪಿಸಲಾಗಿದೆ ಎಂದು ಎಚ್.ಆರ್. ಶ್ರೀನಾಥ ತಿಳಿಸಿದರು.