ಕನ್ನಡಪ್ರಭ ವಾರ್ತೆ ಮೈಸೂರು
ಬಡತನದ ಹಿನ್ನೆಲೆಯಿಂದ ಬಂದವರಿಗೆ ಶಿಕ್ಷಣವೇ ಪೂರಕ. ಶಿಕ್ಷಣದಿಂದಲೇ ಮೇಲಕ್ಕೆ ಬರಬೇಕು. ಶಿಕ್ಷಣ ಪಡೆದರೇ ಬಡತನದಿಂದ ಹೊರ ಬರಲು ಸಾಧ್ಯ ಎಂದು ಜಿಎಸ್ಟಿ ಉಪ ಆಯುಕ್ತ ಮಂಜುನಾಥ್ ಸೋಸ್ಲೆ ತಿಳಿಸಿದರು.ಮಾನಸ ಗಂಗೋತ್ರಿಯ ಇಎಂಎಂಆರ್ ಸಿ ಸಭಾಂಗಣದಲ್ಲಿ ಅರಿವಿನ ಚಾವಡಿ, ಮೈಸೂರು ವಿವಿ ಸಂಶೋಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ ಹಾಗೂ ಉಳುಮೆ ಪ್ರತಿಷ್ಠಾನ ಸಂಯುಕ್ತವಾಗಿ ಸೋಮವಾರ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ವಿದ್ಯಾರ್ಥಿಗಳೊಡನೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿರಂತರ ಅಭ್ಯಾಸ, ಶ್ರಮ, ಸಮರ್ಪಣಾ ಮನೋಭಾಗ ಹಾಗೂ ಅಸಾಧ್ಯವೆಂಬ ಮನಸ್ಥಿತಿಯಿಂದ ಹೊರಬಂದರೆ ಜೀವನದಲ್ಲಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸು ಕಾಣಬಹುದು. ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ನಮಗೆ ನಾವೇ ಸುಳ್ಳು ಹೇಳಿಕೊಳ್ಳುವುದನ್ನು ಬಿಡಬೇಕು. ಇದು ನನ್ನ ಕೈಯಿಂದ ಆಗದು ಎಂಬ ಮನಸ್ಥಿತಿಯಿಂದ ಹೊರಬರಬೇಕು ಎಂದರು.ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಪ್ರಯತ್ನಗಳನ್ನು ಮಾಡಬೇಕು, ಅದೇ ಯಶಸ್ಸಿನ ಗುಟ್ಟು. ಎಷ್ಟೋ ವಿದ್ಯಾರ್ಥಿಗಳು ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪದವಿ ಮುಗಿಸಿ ಐಎಎಸ್ ಪಾಸ್ ಮಾಡಿದ್ದಾರೆ. ಹೀಗಾಗಿ, ನಮ್ಮ ಕಲ್ಪನೆಗಳಲ್ಲಿ ಸಾಯಬೇಕೆ ಹೊರತು ಕನಸುಗಳನ್ನು ಹೊತ್ತುಕೊಂಡು ಸಾಯಬಾರದು ಎಂದರು.
ಲೇಖಕ, ಕೃಷಿಕ ಟಿ.ಜಿ.ಎಸ್. ಅವಿನಾಶ್ ಮಾತನಾಡಿ, ಜ್ಞಾನವನ್ನು ಸಂಪಾದಿಸಿಕೊಂಡು ಬದಲಾವಣೆಯಾದ ನಂತರ ಸವಾಲುಗಳನ್ನು ಎದುರಿಸುವ ಧೈರ್ಯವನ್ನು ಬೆಳೆಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಪ್ರಶ್ನೆಗಳನ್ನು ಮಾಡುವುದನ್ನೇ ಮರೆಯುತ್ತಿದ್ದೇವೆ. ಸಮಾಜದ ಹಿತದೃಷ್ಟಿಯಿಂದ ಪ್ರಶ್ನೆಗಳನ್ನು ಕೇಳುವ ಮನೊಭಾವನೆ ನಮ್ಮಲ್ಲಿ ರೂಢಿಸಿಕೊಳ್ಳಬೇಕು. ಡಾ. ಅಂಬೇಡ್ಕರ್ ಹೇಳಿದಂತೆ, ಸಮಾಜದ ಹಿತದೃಷ್ಟಿಗೆ ಪರಿಹಾರವನ್ನು ಕಂಡು ಹಿಡಿಯಬೇಕು. ಸಾಮೂಹಿಕವಾಗಿ ಕೆಲಸ ಮಾಡಬೇಕು ಎಂದರು.
ಸಾಮಾಜಿಕ ಕಾರ್ಯಕರ್ತ ಅಹಿಂದ ಜವರಪ್ಪ, ಸಂಶೋಧಕರ ಸಂಘದ ಅಧ್ಯಕ್ಷ ವರಹಳ್ಳಿ ಆನಂದ್, ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಗಜೇಂದ್ರ ಚಿನ್ನಸ್ವಾಮಿ, ಸಂಶೋಧನ ವಿದ್ಯಾರ್ಥಿ ಕಲ್ಲಹಳ್ಳಿ ಕುಮಾರ್ ಮೊದಲಾದವರು ಇದ್ದರು.