ಕನ್ನಡಪ್ರಭ ವಾರ್ತೆ, ತುಮಕೂರುಕೆರೆಗಳ ಗೋಡು ಮಣ್ಣನ್ನು ತಮ್ಮ ತೋಟಗಳಿಗೆ ಹಾಕಿಕೊಳ್ಳಲು ರೈತರಿಗೆ ಅನುಮತಿ ನೀಡಬೇಕು. ಕೈಗಾರಿಕೆ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳುವುದನ್ನು ಕೈಬಿಡಬೇಕು ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರುಸೇನೆಯ ರಾಜ್ಯ ಸಂಚಾಲಕ ಆನಂದ ಪಟೇಲ್ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ನಗರದ ಟೌನ್‌ಹಾಲ್ ವೃತ್ತದಲ್ಲಿ ಸಮಾವೇಶಗೊಂಡ ಕುಣಿಗಲ್, ಗುಬ್ಬಿ, ಕೊರಟಗೆರೆ,ಚಿಕ್ಕನಾಯಕನಹಳ್ಳಿ ಹಾಗೂ ಇನ್ನಿತರ ತಾಲೂಕುಗಳ ರೈತರು,ಸರಕಾರಗಳ ರೈತ ವಿರೋಧಿ ನೀತಿಯನ್ನು ಖಂಡಿಸಿ ಟೌನ್‌ಹಾಲ್ ವತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳ ಕಚೇರಿ ಬಳಿ ಕೆಲ ಕಾಲ ಧರಣಿ ನಡೆಸಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಆನಂದ ಪಟೇಲ್, ರಾಜ್ಯ ಸರ್ಕಾರ ಕೈಗಾರಿಕೆಗಳ ಅಭಿವೃದ್ಧಿ ಹೆಸರಿನಲ್ಲಿ ಕೆಐಎಡಿಬಿ ಮೂಲಕ ರೈತರ ಫಲವತ್ತಾದ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ಸ್ವಾಧೀನ ಪಡಿಸಿಕೊಂಡು ಕೆಲವು ವರ್ಷಗಳ ನಂತರ ಉದ್ದಿಮೆದಾರರಿಗೆ ಮಾರಾಟ ಮಾಡುವ ಮೂಲಕ ರಿಯೆಲ್ ಎಸ್ಟೇಟ್ ದಂಧೆಗೆ ಕುಮ್ಮಕ್ಕು ನೀಡುತ್ತಿದೆ. ಅನ್ನ ಬೆಳೆಯುವ ರೈತನ ಬಳಿ ಭೂಮಿ ಇರಬೇಕೇ ಹೊರತು, ಉದ್ದಿಮೆದಾರರ ಬಳಿ ಅಲ್ಲ. ಕೆಐಎಡಿಬಿ ಮೂಲಕ ಇದುವರೆಗೂ ರೈತರಿಂದ ಕೈಗಾರಿಕೆಗಳಿಗೆ ವಶಪಡಿಸಿಕೊಳ್ಳಲಾದ ಭೂಮಿ, ಸ್ಥಾಪನೆಯಾದ ಕೈಗಾರಿಕೆಗಳು, ಕೆಲಸ ಮಾಡುತ್ತಿರುವ ಉದ್ಯೋಗಿಗಳ ವಿವರ ನೀಡಿಲ್ಲ. ಈ ವಿಚಾರವಾಗಿ ಮೊದಲು ಶ್ವೇತ ಪತ್ರ ಒದಗಿಸಬೇಕು ಎಂದು ಆಗ್ರಹಿಸಿದರು.ನೀರಿನ ಮೂಲಗಳಾದ ಕೆರೆ ಕಟ್ಟೆಗಳಲ್ಲಿ ಇಂದು ಹೂಳು ತುಂಬಿದೆ. ರೈತರ ಜಮೀನಿನಲ್ಲಿದ್ದ ಮಣ್ಣು ಮಳೆಗಾಲದಲ್ಲಿ ನೀರಿನೊಂದಿಗೆ ಕೆರೆ ಸೇರುತ್ತಿದೆ. ಕೆರೆಯ ಹೂಳು ಮಣ್ಣಿನ ಮೇಲೆ ರೈತರಿಗೆ ಹಕ್ಕಿದೆ. ಆದರೆ ಸರ್ಕಾರ ಕ್ಯೂ ಮೀಟರ್ ಲೆಕ್ಕದಲ್ಲಿ ಕೆರೆಯ ಗೋಡು ಮಣ್ಣನ್ನು ಮಾರಿಕೊಳ್ಳಲು ಹೊರಟಿದೆ. ಇಟ್ಟಿಗೆ ಫ್ಯಾಕ್ಟರಿಗಳ ಮಾಲೀಕರಿಗೆ ಕೆರೆಯ ಮಣ್ಣು ಮಾರಿ, ಸಂಪನ್ಮೂಲ ಕ್ರೂಢೀಕರಣಕ್ಕೆ ಮುಂದಾಗಿರುವುದು ನಾಚಿಕೇಗೇಡಿನ ಸಂಗತಿ. ಕೂಡಲೇ ಕೆರೆಯ ಕೆನೆ ಮಣ್ಣನ್ನು ರೈತರು ತಮ್ಮ ಹೊಲ, ಗದ್ದೆಗಳಿಗೆ ಟ್ರಾಕ್ಟರ್‌ಗಳು, ಎತ್ತಿನ ಗಾಡಿಗಳಲ್ಲಿ ತೆಗೆದುಕೊಂಡು ಹೋಗಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು. ಈ ಸರ್ಕಾರ ಬಂದು ಮೂರು ವರ್ಷ ಕಳೆದರೂ ಒಂದೇ ಒಂದು ಬಗರ್‌ಹುಕ್ಕುಂ ಕಮಿಟಿ ಸಭೆ ನಡೆಸಿಲ್ಲ. ಮೂರು ತಲೆಮಾರಿನಿಂದಲೂ ಸರಕಾರಿ ಭೂಮಿ ಉಳುಮೆ ಮಾಡುತ್ತಾ ಫಾರಂ. ನಂಬರ್ ೫೦,೫೩ ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ಮಂಜುರಾತಿ ನೀಡಿಲ್ಲ. ಬದಲಾಗಿ ಅರಣ್ಯ ಇಲಾಖೆಯ ಮೂಲಕ ಬಗರ್ ಹುಕ್ಕಂ ರೈತರಿಗೆ ಕಿರುಕುಳ ನೀಡಿ ಒಕ್ಕಲೆಬಿಸಲು ಹೊರಟಿದೆ. ತಲೆಮಾರುಗಳಿಂದ ಉಳುಮೆ ಮಾಡುತ್ತಿರುವ ಜನರಿಗೆ ನ್ಯಾಯ ಒದಗಿಸಬೇಕು. ಹಾಗೆಯೇ ಎತ್ತಿನ ಹೊಳೆ, ಭದ್ರ ಮೇಲ್ದಂಡೆ ಬೇಗ ಪೂರ್ಣಗೊಳಿಸುವುದು ಮತ್ತು ಹೇಮಾವತಿ ಯೋಜನೆಯಿಂದ ನಿಗಧಿತ ೨೪.೦೮ ಟಿ.ಎಂ.ಸಿ ನೀರು ತರಲು ಅಗತ್ಯ ಕ್ರಮವನ್ನು ಜಿಲ್ಲಾಡಳಿತ ಕೈಗೊಳ್ಳಬೇಕೆಂದು ಆನಂದಪಟೇಲ್ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ರೈತರ ಸಮಸ್ಯೆಗಳ ಕುರಿತು ನಾನೇ ಸ್ವತಃ ನಿಗಾವಹಿಸಿದ್ದು ಯಾವುದೇ ತೊಂದರೆಗಳು ಬರದಂತೆ ನೋಡಿಕೊಳ್ಳಲಾಗುತ್ತಿದೆ. ಬೆಸ್ಕಾಂಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದರೆ ದೂ.7304975519ಗೆ ಕರೆ ಮಾಡಿದರೆ ತಕ್ಷಣ ಸ್ಪಂದಿಸುವ ಕೆಲಸ ಮಾಡುತ್ತೇವೆ. ನಾನು ಕೂಡ ಇದನ್ನು ಪ್ರತಿದಿನ ಮೇಲುಸ್ತುವಾರಿ ನಡೆಸುತ್ತಿದ್ದು ಯಾರು ಸಹ ಆತಂಕಕ್ಕೆ ಒಳಗಾಗಬಾರದು ಎಂದು ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷರಾಧ ಧನಂಜಯ್ ಆರಾಧ್ಯ, ಸಣ್ಣರಾಮೇಗೌಡ,ಚಿರತೆ ಚಿಕ್ಕಣ್ಣ, ಪಂಡಿತಣ್ಣ, ಅನಿಲ್‌ಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪೋಟೋ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ರೈತರ ಭೂಮಿ ವಶಪಡಿಸಿಕೊಳ್ಳುವುದನ್ನು ಕೈ ಬಿಡಿ
ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರುಸೇನೆಯ ರಾಜ್ಯ ಸಂಚಾಲಕ ಆನಂದ ಪಟೇಲ್ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.