ಸೋಮವಾರಪೇಟೆ: ಮಡಿಕೇರಿ ನಗರದಲ್ಲಿ ಅಳವಡಿಸಿದ್ದ ಶಾಸಕ ಡಾ.ಮಂತರ್ಗೌಡ ಭಾವಚಿತ್ರವಿರುವ ಬ್ಯಾನರ್ ಅನ್ನು ಬಿಜೆಪಿ ಕಾರ್ಯಕರ್ತರು ಹರಿದು ವಿರೂಪಗೊಳಿಸಿದ್ದಾರೆ ಎಂದು ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಆರೋಪಿಸಿದ್ದು, ಕೂಡಲೆ ಅರೋಪಿಯನ್ನು ಬಂಧಿಸುವಂತೆ ಆಗ್ರಹಿಸಿದೆ.
ಶಾಸಕ ಡಾ.ಮಂತರ್ಗೌಡರ ಅವರ ಭಾವಚಿತ್ರವಿರುವ ಬ್ಯಾನರ್ ಹರಿದಿರುವುದು ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಅರೋಪಿಯನ್ನು ಪೊಲೀಸರು ಬಂಧಿಸಬೇಕು. ತಪ್ಪಿದಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಜೆ.ಎಲ್. ಜನಾರ್ದನ್ ಮಾತನಾಡಿ, ಶಾಸಕರ ಭಾವಚಿತ್ರವಿರುವ ಬ್ಯಾನರ್ನಲ್ಲಿ ದಶಮಂಟಪಗಳ ಚಿತ್ರಗಳು ಇದ್ದವು. ಅಂತಹ ಬ್ಯಾನರ್ಗಳನ್ನು ಹರಿದು ಧಾರ್ಮಿಕ ನಂಬಿಕೆಗೂ ಬಿಜೆಪಿ ಕಾರ್ಯಕರ್ತ ಅಪಚಾರ ಎಸಗಿದ್ದಾನೆ. ಇಂತಹ ಕೃತ್ಯಕ್ಕೆ ಪ್ರಚೋದನೆ ನೀಡಿರುವ ಬಿಜೆಪಿ ಪ್ರಮುಖರ ವಿರುದ್ಧವೂ ಕ್ರಮವಾಗಬೇಕು ಎಂದು ಆಗ್ರಹಿಸಿದರು. ಪ್ರಚಾರ ಸಮಿತಿ ಅಧ್ಯಕ್ಷ ವಿ.ಎ.ಲಾರೆನ್ಸ್ ಪ್ರಕರಣವನ್ನು ಖಂಡಿಸಿದರು. ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸುನಿಲ್, ಉಪಾಧ್ಯಕ್ಷ ಬಸವರಾಜು ಇದ್ದರು.