ಹಲವು ದೇಗುಲ ಬಂದ್‌, ಕೆಲವೆಡೆ ವಿಶೇಷ ಪೂಜೆ

| Published : Sep 07 2025, 01:00 AM IST

ಸಾರಾಂಶ

ಖಗ್ರಾಸ ಚಂದ್ರಗ್ರಹಣ ಹಿನ್ನೆಲೆಯಲ್ಲಿ ರಾಜ್ಯದ ಹಲವು ದೇವಸ್ಥಾನಗಳ ಬಾಗಿಲು ಸಂಜೆಯೇ ಬಂದ್‌ ಮಾಡಲಾಗುತ್ತದೆ. ಇನ್ನೂ ಕೆಲವೆಡೆ ವಿಶೇಷ ಪೂಜೆಗಳು ನಡೆಯಲಿವೆ. ಚಿ

ಬೆಂಗಳೂರು: ಖಗ್ರಾಸ ಚಂದ್ರಗ್ರಹಣ ಹಿನ್ನೆಲೆಯಲ್ಲಿ ರಾಜ್ಯದ ಹಲವು ದೇವಸ್ಥಾನಗಳ ಬಾಗಿಲು ಸಂಜೆಯೇ ಬಂದ್‌ ಮಾಡಲಾಗುತ್ತದೆ. ಇನ್ನೂ ಕೆಲವೆಡೆ ವಿಶೇಷ ಪೂಜೆಗಳು ನಡೆಯಲಿವೆ. ಚಿಕ್ಕಬಳ್ಳಾಪುರದ ನಂದಿಗ್ರಾಮದ ಭೋಗ ನಂದೀಶ್ವರ ದೇವಾಲಯವನ್ನು ಸಂಜೆ 4.30ಕ್ಕೆ ಬಂದ್‌ ಮಾಡಲಾಗುತ್ತದೆ. ಶೃಂಗೇರಿ ಶಾರದಾಂಬೆ, ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಗಳಲ್ಲಿ ಭಕ್ತರಿಗೆ ರಾತ್ರಿ ಪ್ರಸಾದ ವಿತರಣೆ ಇರುವುದಿಲ್ಲ. ಇಡಗುಂಜಿ ವಿನಾಯಕ ದೇಗುಲ, ಗೋಕರ್ಣ ಮಹಾಬಲೇಶ್ವರ, ಮುರ್ಡೇಶ್ವರ ದೇವಾಲಯಗಳಲ್ಲಿ ಅಭಿಷೇಕ ನಡೆಸಿದ ಬಳಿಕ ಬಾಗಿಲು ಹಾಕಲಾಗುವುದು. ಕೊಪ್ಪಳದ ಅಂಜನಾದ್ರಿ ಹಾಗೂ ಹುಲಿಗೆಮ್ಮ ದೇವಿಯ ದರ್ಶನವನ್ನು ಸಂಜೆ 5ರಿಂದ ರದ್ದುಪಡಿಸಲಾಗಿದೆ. ಮಲೆನಾಡಿನ ಪ್ರಸಿದ್ಧ ಮಳೆ ದೇವರು ಕಿಗ್ಗಾ ಶ್ರೀ ಋಷ್ಯಶೃಂಗೇಶ್ವರ ದೇವಾಲಯದಲ್ಲಿ ಗ್ರಹಣ ಆರಂಭದಿಂದ ಅಂತ್ಯದವರೆಗೂ ಜಲಾಭಿಷೇಕ ನಡೆಯಲಿದೆ.

ಮಧ್ಯರಾತ್ರಿ ಗ್ರಹಣ ಮುಕ್ತಾಯವಾಗಲಿದ್ದು, ಸೋಮವಾರ ಬೆಳಗ್ಗೆ ದೇವಸ್ಥಾನಗಳಲ್ಲಿ ಶುದ್ಧೀಕರಣ ಮಾಡಿ ಪೂಜೆ ಬಳಿಕ ಯಥಾ ರೀತಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ಅಪರೂಪದ ಚಂದ್ರಗ್ರಹಣ

ಸುದೀರ್ಘ ಅವಧಿಯ ಅಪರೂಪದ ಚಂದ್ರಗ್ರಹಣ ಸೆ.7ರ ರಾತ್ರಿ ಭಾರತದಾದ್ಯಂತ ಗೋಚರಿಸಲಿದೆ. ರಾತ್ರಿ 9:57ಕ್ಕೆ ಗ್ರಹಣ ಆರಂಭವಾಗಲಿದ್ದು (ಸ್ಪರ್ಶಕಾಲ) ತಡರಾತ್ರಿ 1:26ಕ್ಕೆ ಮುಕ್ತಾಯವಾಗಲಿದೆ (ಮೋಕ್ಷಕಾಲ). ಗ್ರಹಣದ ಪೂರ್ಣಪ್ರಭಾವ ಮಧ್ಯರಾತ್ರಿ 12:28 ರಿಂದ 1:26ರವರೆಗೆ ಇರಲಿದೆ. ಸತತ 3 ಗಂಟೆಗಳ ಕಾಲ ಗ್ರಹಣ ಸಂಭವಿಸಲಿದ್ದು, ರಕ್ತವರ್ಣದಲ್ಲಿ ಚಂದಿರ ಗೋಚರಿಸಲಿದ್ದಾನೆ ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.