ಸಾರಾಂಶ
ಜಿಲ್ಲೆಯ ಇತಿಹಾಸ ಪ್ರಸಿದ್ಧ ಪುಲಿಗೆರೆಯ ಸೋಮೇಶ್ವರ ದೇವಸ್ಥಾನದ ಚಾವಣಿ ಕಳೆದ ಹಲವು ವರ್ಷಗಳಿಂದ ಶಿಥಿಲಾವಸ್ಥೆಗೆ ತಲುಪಿ ಮಳೆ ಬಂದರೆ ಸೋರುತ್ತಿರುವುದು ನೋವಿನ ಸಂಗತಿಯಾಗಿದೆ.
ಲಕ್ಷ್ಮೇಶ್ವರ: ಜಿಲ್ಲೆಯ ಇತಿಹಾಸ ಪ್ರಸಿದ್ಧ ಪುಲಿಗೆರೆಯ ಸೋಮೇಶ್ವರ ದೇವಸ್ಥಾನದ ಚಾವಣಿ ಕಳೆದ ಹಲವು ವರ್ಷಗಳಿಂದ ಶಿಥಿಲಾವಸ್ಥೆಗೆ ತಲುಪಿ ಮಳೆ ಬಂದರೆ ಸೋರುತ್ತಿರುವುದು ನೋವಿನ ಸಂಗತಿಯಾಗಿದೆ.
ಪಟ್ಟಣದ ಸೋಮೇಶ್ವರ ದೇವಾಲಯವು 8 ನೇ ಶತಮಾನದಲ್ಲಿ ಬಾದಾಮಿ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿರುವ ಅದ್ಭುತ ದೇವಾಲಯವಾಗಿದೆ. ಸೋಮೇಶ್ವರನು ಪಾರ್ವತಿ ಸಮೇತ ಅಶ್ವರೂಢನಾಗಿ ಕುಳಿತಿರುವ ಮೂರ್ತಿ ದಕ್ಷಿಣ ಭಾರತದಲ್ಲಿ ಎಲ್ಲೂ ಕಂಡು ಬರುವುದಿಲ್ಲ. ಇಂತಹ ಇತಿಹಾಸ ಪ್ರಸಿದ್ಧ ದೇವಾಲಯವು ಪ್ರತಿ ವರ್ಷ ಮಳೆಗಾಲದಲ್ಲಿ ದೇವಸ್ಥಾನದ ಮುಖ್ಯ ಪ್ರಾಂಗಣ ಸೋರುತ್ತದೆ. ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಯಾಗುತ್ತದೆ. ಸದ್ಯ ಶ್ರಾವಣ ಮಾಸದ ಪ್ರಯುಕ್ತ ನಡೆಯುವ ಪುರಾಣ ಪ್ರವಚನ ಕಾರ್ಯಕ್ರಮ ಸೋರುವ ಪ್ರಾಂಗಣದಲ್ಲಿಯೇ ನಡೆಯುತ್ತದೆ. ಮಂಗಳವಾರ ಸುರಿದ ಮಳೆಯಿಂದ ದೇವಸ್ಥಾನದ ಮಾಳಿಗೆ ಜಿನುಗುಟ್ಟುತ್ತಿರುವುದರಿಂದ ಭಕ್ತರೇ ಹಣ ಸಂಗ್ರಹಿಸಿ ತಾಡಪತ್ರಿ ಹೊದಿಕೆ ಹಾಕಿದ್ದಾರೆ. ಈ ಪರಿಸ್ಥಿತಿ ಭಕ್ತರಲ್ಲಿ ನೋವುಂಟು ಮಾಡಿದೆ. ಸೋಮೇಶ್ವರ ದೇವಾಲಯ ಚಾವಣಿಯು ಮಳೆಗಾಲದಲ್ಲಿ ಸೋರುತ್ತಿರುವುದು ದೇವಾಲಯದ ಅವಸ್ಥೆಗೆ ಹಿಡಿದ ಕನ್ನಡಿಯಾಗಿದೆ ಎಂದು ಹಲವರು ಮಾತನಾಡಿದರು.2016-17ರಲ್ಲಿ ಇನ್ಫೋಶಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಸುಧಾಮೂರ್ತಿ ದೇವಾಲಯದ ಶಿಥಿಲಾವಸ್ಥೆ ನೋಡಿ ಸುಮಾರು ₹5.50 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಿದ್ದರು.ಆದರೆ ಈಗ ದೇವಾಲಯದ ಚಾವಣಿ ಸೋರುತ್ತಿರುವುದು ಭಕ್ತರ ಆತಂಕಕ್ಕೆ ಕಾರಣವಾಗಿದೆ.
ಮನವಿ: ಪ್ರಾಚ್ಯವಸ್ತು ಇಲಾಖೆಯ ವ್ಯಾಪ್ತಿಗೊಳಪಡುವ ಸುಪ್ರಸಿದ್ಧ ದೇವಸ್ಥಾನದ ಚಾವಣಿ ಹಾಗೂ ಉತ್ತರ ದ್ವಾರ ದುರಸ್ತಿ ಮಾಡಿಸಿ ಕೊಡುವಂತೆ ಹಾಗೂ ಮೂಲಭೂತ ಸೌಲಭ್ಯಕ್ಕಾಗಿ ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ಕಲ್ಪಿಸುವಂತೆ ಹಲವು ಬಾರಿ ಭಕ್ತರು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜವಾಗಿಲ್ಲ ಎಂಬುದು ಭಕ್ತರ ಅಳಲಾಗಿದೆ.ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ದೇವಸ್ಥಾನ ಅಭಿವೃದ್ಧಿಗೆ ₹೫೦ ಲಕ್ಷ ಅನುದಾನ ಕಲ್ಪಿಸಲಾಗುವುದು ಎಂಬ ಭರವಸೆ ನೀಡಿದ್ದು ಅದು ಹುಸಿಯಾಗಿಯೇ ಉಳಿದಿದೆ.
ಪ್ರಾಚ್ಯ ವಸ್ತು ಇಲಾಖೆಯ ಪರವಾನಗಿ ಇಲ್ಲದೇ ದೇವಸ್ಥಾನದಲ್ಲಿ ಯಾವುದೇ ದುರಸ್ತಿ, ಅಭಿವೃದ್ಧಿ ಕಾರ್ಯ ಮಾಡಲು ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ಸಚಿವರು ಮತ್ತು ಅಧಿಕಾರಿಗಳು ಇತ್ತ ಗಮನ ಹರಿಸಿ ಪ್ರಸಿದ್ಧ ದೇವಸ್ಥಾನ ರಕ್ಷಣೆಗೆ ಮುಂದಾಗಬೇಕು ಎಂಬುದು ಭಕ್ತರ ಒತ್ತಾಸೆಯಾಗಿದೆ.