ಸಾರಾಂಶ
ಇತ್ತೀಚೆಗೆ ಮುಕ್ತಾಯಗೊಂಡ ಒಲಿಂಪಿಕ್‌ನಲ್ಲಿ ದೇಶದ ಕ್ರೀಡಾಪಟುಗಳ ಸಾಧನೆ ಕಳಪೆಯಾಗಿತ್ತು ಎಂಬ ಆರೋಪಗಳಿವೆ. ಆದರೆ ಪದಕ ಗೆಲ್ಲಲು ಸಿದ್ಧತೆಗಳ ಬಗ್ಗೆಯೂ ಆತ್ಮಾವಲೋಕನ ಮಾಡಿಕೊಳ್ಳಬೇಕು.
ಬ್ಯಾಡಗಿ: ಕೌಶಲ್ಯ ಹೊಂದಿದ ತರಬೇತುದಾರರಿಲ್ಲದೇ ರಾಜ್ಯದ ಬಹುತೇಕ ಕ್ರೀಡಾಂಗಣಗಳು ಬಿಕೋ ಎನ್ನುತ್ತಿವೆ. ಹೀಗಾಗಿ ಶಾಲಾ ಕ್ರೀಡಾಕೂಟಗಳನ್ನೇ ನೆಚ್ಚಿಕೊಂಡು ಪದಕಕ್ಕಾಗಿ ಸ್ಪರ್ಧಿಸುವಂಥ ಸಾಮರ್ಥ್ಯವಿರುವ ಕ್ರಿಡಾಪಟುಗಳನ್ನು ಗುರುತಿಸಬೇಕಾದ ಅನಿವಾರ್ಯತೆಯಲ್ಲಿ ನಾವಿದ್ದೇವೆ ಎಂದು ಶಾಸಕ ಬಸವರಾಜ ಶಿವಣ್ಣನವರ ಖೇದ ವ್ಯಕ್ತಪಡಿಸಿದರು.
ತಾಲೂಕಿನ ಮೋಟೆಬೆನ್ನೂರು ಗ್ರಾಮದ ಎಸ್‌ಸಿಎಚ್ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಇತ್ತೀಚೆಗೆ ಮುಕ್ತಾಯಗೊಂಡ ಒಲಿಂಪಿಕ್‌ನಲ್ಲಿ ದೇಶದ ಕ್ರೀಡಾಪಟುಗಳ ಸಾಧನೆ ಕಳಪೆಯಾಗಿತ್ತು ಎಂಬ ಆರೋಪಗಳಿವೆ. ಆದರೆ ಪದಕ ಗೆಲ್ಲಲು ಸಿದ್ಧತೆಗಳ ಬಗ್ಗೆಯೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.ತರಬೇತುದಾರರು ಸಿಬ್ಬಂದಿಯನ್ನು ನೇಮಕ ಮಾಡುವುದು, ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಸ್ಪರ್ಧಿಸುವಂತೆ ಉತ್ತಮ ತರಬೇತಿ ನೀಡುವುದು, ಅದಕ್ಕಾಗಿ ಪ್ರಾಥಮಿಕ ಹಂತದಿಂದಲೇ ಗುಣಮಟ್ಟದ ತರಬೇತಿಯನ್ನು ನೀಡುವ ಮೂಲಕ ಒಲಿಂಪಿಕ್ಸ್, ಕಾಮನವೆಲ್ತ್, ಏಷ್ಯನ್ ಗೇಮ್ಸ್‌ಗಳಲ್ಲಿ ಪದಕಗಳನ್ನು ಗೆಲ್ಲುವ ಹಂತಕ್ಕೆ ತಲುಪಿಸುವ ಗುರುತರ ಜವಾಬ್ದಾರಿ ತೋರಬೇಕಾಗುತ್ತದೆ ಎಂದರು.
ನವೋದಯ ವಿದ್ಯಾಸಂಸ್ಥೆ ಅಧ್ಯಕ್ಷ ಬಸವರಾಜ ಹಾವೇರಿಮಠ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಹಾವೆಮುಲ್ ನಿರ್ದೇಶಕ ಪ್ರಕಾಶ ಬನ್ನಿಹಟ್ಟಿ, ತಾಲೂಕು ಬಿಜೆಪಿ ಅಧ್ಯಕ್ಷ ಎನ್.ಎಸ್. ಬಟ್ಟಲಕಟ್ಟಿ, ಹಿರಿಯ ಕಬಡ್ಡಿ ಕ್ರೀಡಾಪಟು ಕರಬಸಪ್ಪ ಬಳ್ಳಾರಿ, ಕ್ಯಾನಕೋರ ಕಂಪನಿ ಮ್ಯಾನೇಜರ್ ಕಿಶನಕುಮಾರ, ನಿವೃತ್ತ ಪ್ರಾಚಾರ್ಯ ಎಸ್.ಜಿ. ವೈದ್ಯ, ಸುನಂದಾ ಮೂಲಿಮನಿ, ಗಜಾನನ ರಾಯ್ಕರ, ಹಾವೇರಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸಿ.ಜಿ. ಚಕ್ರಸಾಲಿ, ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಎಂ. ಪಮ್ಮಾರ, ಸಿಆರ್‌ಪಿ ಯಶವಂತಕುಮಾರ, ರೇವಣೆಪ್ಪ ದಿಡಗೂರ ಇತರರು ಇದ್ದರು.