ಸಾರಾಂಶ
ಕಳೆದ ಒಂದು ತಿಂಗಳಿಂದ ಯೂರಿಯಾ ಗೊಬ್ಬರಕ್ಕಾಗಿ ಹಗಲು ರಾತ್ರಿಯನ್ನದೇ ಕಾಯುತ್ತಿದ್ದರೂ ರೈತರಿಗೆ ಬೇಕಾದ ಪ್ರಮಾಣದಲ್ಲಿ ಯೂರಿಯಾ ಸಿಗುತ್ತಿಲ್ಲ. ಸರತಿ ಸಾಲಿನಲ್ಲಿ ನಿಂತು ನಿಂತು ಸಾಕಾದ ರೈತರು ಇದೀಗ ಆ ಸರದಿ ಸಾಲಿನಲ್ಲಿ ತಮ್ಮ ಕೈಚೀಲ, ಚಪ್ಪಲಿಗಳನ್ನು ಇಟ್ಟು ಗೊಬ್ಬರಕ್ಕಾಗಿ ಎದುರು ನೋಡುತ್ತಿದ್ದಾರೆ.
ಲಕ್ಷ್ಮೇಶ್ವರ: ಕಳೆದ ಒಂದು ತಿಂಗಳಿಂದ ಯೂರಿಯಾ ಗೊಬ್ಬರಕ್ಕಾಗಿ ಹಗಲು ರಾತ್ರಿಯನ್ನದೇ ಕಾಯುತ್ತಿದ್ದರೂ ರೈತರಿಗೆ ಬೇಕಾದ ಪ್ರಮಾಣದಲ್ಲಿ ಯೂರಿಯಾ ಸಿಗುತ್ತಿಲ್ಲ. ಸರತಿ ಸಾಲಿನಲ್ಲಿ ನಿಂತು ನಿಂತು ಸಾಕಾದ ರೈತರು ಇದೀಗ ಆ ಸರದಿ ಸಾಲಿನಲ್ಲಿ ತಮ್ಮ ಕೈಚೀಲ, ಚಪ್ಪಲಿಗಳನ್ನು ಇಟ್ಟು ಗೊಬ್ಬರಕ್ಕಾಗಿ ಎದುರು ನೋಡುತ್ತಿದ್ದಾರೆ.
ಲಕ್ಷ್ಮೇಶ್ವರ ಪಟ್ಟಣದಲ್ಲಿ ತಾಲೂಕಿನ ಹರದಗಟ್ಟಿ, ಮುನಿಯನ ತಾಂಡಾ. ಉಂಡೇನಹಳ್ಳಿ, ಅಕ್ಕಿಗುಂದ, ಗೊಜನೂರ, ಗೋವನಾಳ, ರಾಮಗೇರಿ, ಪು.ಬಡ್ನಿ, ಆದ್ರಳ್ಳಿ, ಸೋಗಿಹಾಳ, ಬಟ್ಟೂರ, ದೊಡ್ಡೂರ ಸೇರಿದಂತೆ ಅನೇಕ ಗ್ರಾಮಗಳ ರೈತರು ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ಕೈ ಚೀಲ, ಚಪ್ಪಲಿ, ಟಾವೆಲ್ ಇಟ್ಟು ಕಾಯುತ್ತಿರುವ ದೃಶ್ಯ ಕಂಡು ಬಂದಿತು.ತಾಲೂಕಿನಲ್ಲಿ ಕಳೆದ ಎರಡು ದಿನಗಳಲ್ಲಿ 125 ಮಿಮೀ ಮಳೆ ಸುರಿದ್ದಿದ್ದರಿಂದ ಅತಿಯಾದ ತೇವಾಂಶದಿಂದ ಹಾಳಾಗುವ ಬೆಳೆಗಳನ್ನು ಸಂರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಯೂರಿಯಾ ಗೊಬ್ಬರಕ್ಕಾಗಿ ಅಂಗಡಿಗಳ ಮುಂದೆ ನಿಂತರೂ ಗೊಬ್ಬರ ಸಿಗದ ಸ್ಥಿತಿ ನಿಮಾರ್ಣವಾಗಿದೆ. ಕೆಲ ಅಂಗಡಿ ಮುಂಗಟ್ಟುಗಳಿಗೆ ಬರುತ್ತಿರುವ ಗೊಬ್ಬರ ರಾವಣ ಹೊಟ್ಟೆಗೆ ಅರಕಾಸಿನ ಮಜ್ಜಿಗೆಯಂತಾಗಿದೆ ಎನ್ನುವುದು ರೈತರ ಆರೋಪವಾಗಿದೆ.
ರಾಜಕಾರಣಿಗಳು ರೈತರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಮಾಡುವುದನ್ನು ಬಿಟ್ಟು ಉಳಿದೆಲ್ಲ ಕಾರ್ಯ ಮಾಡುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ಪಟ್ಟಣದ ರೈತ ಫಕ್ಕೀರೇಶ ಟೊಕಾಳಿ ಹಾಗೂ ಹರದಗಟ್ಟಿಯ ರೈತ ರಮೇಶ ಲಮಾಣಿ ಬೇಸರ ವ್ಯಕ್ತಪಡಿಸಿದರು.