ಕನ್ನಡಪ್ರಭ ವಾರ್ತೆ ನಾಗಮಂಗಲ

ಉತ್ತಮ ಆರೋಗ್ಯ, ಸ್ವಚ್ಛತೆ ಹಾಗೂ ಡ್ರಗ್ಸ್ ಮುಕ್ತ ಭಾರತವನ್ನು ಧ್ಯೇಯವಾಗಿಟ್ಟುಕೊಂಡು ಜನರಲ್ಲಿ ಅರಿವು ಮೂಡಿಸಲು ಮ್ಯಾರಥಾನ್ ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಆದಿಚುಂಚನಗಿರಿ ಮಠದ ಸಂವಿದಾನಂದನಾಥ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀ ಕೋಟೆ ವಿದ್ಯಾಗಣಪತಿ ದೇವಸ್ಥಾನದ ಮುಂಭಾಗದಲ್ಲಿ 74ನೇ ವರ್ಷದ ಪುಷ್ಪ ಮಂಟಪೋತ್ಸವದ ಪ್ರಯುಕ್ತ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದಿಂದ ಮಂಗಳವಾರ ಬೆಳಗ್ಗೆ ಆಯೋಜಿಸಿದ್ದ ಪ್ರಥಮ ವರ್ಷದ ಮುಕ್ತ ಮ್ಯಾರಥಾನ್‌ಗೆ ಚಾಲನೆ ನೀಡುವ ಮುನ್ನ ಮಾತನಾಡಿದರು.

ಪಟ್ಟಣದಲ್ಲಿ ಕಳೆದ 7 ದಶಕಗಳಿಂದ ಶ್ರೀಕೋಟೆವಿದ್ಯಾಗಣಪತಿ ಉತ್ಸವ ನಡೆಯುತ್ತಿರುವುದು ಅತ್ಯಂತ ಶ್ಲಾಘನೀಯ. ವ್ಯಕ್ತಿ ಏನಾದರೊಂದು ಸಾಧನೆ ಮಾಡುವಾಗ ಅಥವಾ ಧರ್ಮ ಕಾರ್ಯ ಮಾಡುವಾಗ ಆರೋಗ್ಯ ಬಹು ಮುಖ್ಯ. ಮ್ಯಾರಥಾನ್ ಓಟವು ದೈಹಿಕ ಸಾಮರ್ಥ್ಯ, ಮಾನಸಿಕ ದೃಢತೆ, ಶಿಸ್ತು ಮತ್ತು ಆರೋಗ್ಯವನ್ನು ಬೆಳೆಸುವ ಒಂದು ಕ್ರೀಡಾ ಚಟುವಟಿಕೆಯಾಗಿದೆ. ಆರೋಗ್ಯವನ್ನು ಧ್ಯೇಯವಾಗಿಟ್ಟುಕೊಂಡು ಈ ಮ್ಯಾರಥಾನ್ ಓಟ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ ಎಂದರು.

ಡಿವೈಎಸ್‌ಪಿ ಬಿ.ಚಲುವರಾಜು ಮಾತನಾಡಿ, ಮ್ಯಾರಥಾನ್ ಕೇವಲ ಸ್ಪರ್ಧೆಯಲ್ಲ. ಅದು ಆರೋಗ್ಯ, ಶಿಸ್ತು, ಆತ್ಮವಿಶ್ವಾಸ ಮತ್ತು ಸಾಮಾಜಿಕ ಜಾಗೃತಿಯ ಸಂಕೇತ. ಪ್ರತಿಯೊಬ್ಬರೂ ತಮ್ಮ ವಯಸ್ಸು ಮತ್ತು ದೈಹಿಕ ಸಾಮರ್ಥ್ಯಕ್ಕೆ ತಕ್ಕಂತೆ ನಡಿಗೆ, ಓಟ ಮತ್ತು ಇತರೆ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಜನರಲ್ಲಿ ಅರಿವು ಮೂಡಿಸುವ ಜೊತೆಗೆ ಆರೋಗ್ಯಕರ ಜೀವನವನ್ನು ನಡೆಸಬಹುದು ಎಂದರು.


ಪುರಸಭೆ ಮುಖ್ಯಾಧಿಕಾರಿ ವೀಣಾ ಮಾತನಾಡಿ, ಆರೋಗ್ಯವೇ ಮನುಷ್ಯರ ನಿಜವಾದ ಸಂಪತ್ತು. ಹಣ, ಆಸ್ತಿ, ಅಂತಸ್ತು ಎಲ್ಲವೂ ಇದ್ದು ಉತ್ತಮ ಆರೋಗ್ಯವಿಲ್ಲದಿದ್ದರೆ ಜೀವನದಲ್ಲಿ ಸಂತೋಷ ಮತ್ತು ನೆಮ್ಮದಿ ಸಿಗುವುದು ಕಷ್ಟ. ಆರೋಗ್ಯ, ಸ್ವಚ್ಚತೆ ಮತ್ತು ಡ್ರಗ್ಸ್ ಮುಕ್ತ ಭಾರತದ ಆಶಯದೊಂದಿಂದಿಗೆ ಮ್ಯಾರಥಾನ್ ಮೂಲಕ ಜನರಲ್ಲಿ ಅರಿವು ಮೂಡಿಸಲು ಹಮ್ಮಿಕೊಂಡಿರುವ ಈ ಕಾರ್ಯ ಮೆಚ್ಚುಗೆಯ ಸಂಗತಿ ಎಂದರು.

ಸಾರ್ವಜನಿಕ ಆಸ್ಪತ್ರೆ ಮಕ್ಕಳ ತಜ್ಞ ಡಾ. ನಂದಕುಮಾರ್ ಮಾತನಾಡಿ, ಮ್ಯಾರಥಾನ್ ಓಟವು ಆರೋಗ್ಯ, ಶ್ವಾಸಕೋಶದ ಕಾರ್ಯಕ್ಷಮತೆ, ಸ್ನಾಯುಗಳ ಬಲ ಮತ್ತು ಮನಸ್ಸಿನ ಉಲ್ಲಾಸಕ್ಕೆ ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ದೈಹಿಕ ಚಟುವಟಿಕೆಗಳ ಕೊರತೆ, ಆಹಾರ ಪದ್ಧತಿಯಲ್ಲಿನ ಬದಲಾವಣೆ, ಮಾನಸಿಕ ಒತ್ತಡ ಮತ್ತು ನಿದ್ರೆಯ ಅಭಾವದಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಜನರಲ್ಲಿ ಆರೋಗ್ಯದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಮ್ಯಾರಥಾನ್ ಓಟವು ಒಳ್ಳೆಯ ಬೆಳವಣಿಗೆ ಎಂದರು.

ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ನಡೆದ ಮ್ಯಾರಥಾನ್‌ನಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಹಾಗೂ ಯುವಕ, ಯುವತಿಯರು ಪಾಲ್ಗೊಂಡಿದ್ದರು. ಮಹಿಳೆಯರ ವಿಭಾಗದ 3ಕಿ.ಮೀ. ದೂರದ ಓಟಕ್ಕೆ ಪ್ರಥಮ 3ಸಾವಿರ, ದ್ವಿತೀಯ 2ಸಾವಿರ, ಮೂರು, ನಾಲ್ಕು ಮತ್ತು ಐದನೇ ಸ್ಥಾನಕ್ಕೆ ತಲಾ1 ಸಾವಿರ ನಗದು ಬಹುಮಾನ. ಪುರುಷರ ವಿಭಾಗದ 6ಕಿ.ಮೀ. ದೂರದ ಓಟಕ್ಕೆ ಪ್ರಥಮ 5ಸಾವಿರ, ದ್ವಿತೀಯ 3ಸಾವಿರ, ತೃತೀಯ 2ಸಾವಿರ, ನಾಲ್ಕು ಮತ್ತು ಐದನೇ ಸ್ಥಾನಕ್ಕೆ ತಲಾ 1ಸಾವಿರ ನಗದು ಬಹುಮಾನ ನೀಡಲಾಯಿತು.

ವಿಜೇತರು:

ಮಹಿಳೆಯರ ವಿಭಾಗ ಪಟ್ಟಣದ ಎಲ್ಲೆನ್ ಶಾಲೆ 7ನೇ ತರಗತಿ ವಿದ್ಯಾರ್ಥಿನಿ ಎಚ್.ಎಸ್.ಭವ್ಯ (ಪ್ರಥಮ), ಆದಿಚುಂಚನಗಿರಿ ಎಸ್‌ಜಿಎಸ್ ಕಾಲೇಜಿನ ಸಿ.ಅಂಜನ (ದ್ವಿತೀಯ) ಮತ್ತು ಇದೇ ಕಾಲೇಜಿನ ಪಿ.ವಿ.ಐಶ್ವರ್ಯ (ತೃತೀಯ) ಬಹುಮಾನ ಪಡೆದರು.

ಪುರುಷರ ವಿಭಾಗದಲ್ಲಿ ಮೈಸೂರಿನ ಪುರುಷೋತ್ತಮ (ಪ್ರಥಮ) ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯ ದರ್ಶನ್ (ದ್ವಿತೀಯ) ಹಾಗೂ ಕುಣಿಗಲ್‌ನ ಗಿರೀಶ್‌ಗೌಡ (ತೃತೀಯ) ನಗದು ಬಹುಮಾನ ಪಡೆದುಕೊಂಡರು. ಇನ್ನುಳಿದಂತೆ ಆದಿಚುಂಚನಗಿರಿ ಶಾಲೆ ಸುಶ್ಮಿತ, ಲಕ್ಷ್ಮಿ, ಪಾಲೇತಿ ಅಪರ್ಣ, ಕೆ.ಎನ್.ಯಶ್ವಂತ್, ಡಿ.ಸಿ.ಕುಶಾಲ್‌ಗೌಡ, ಟಿ.ವಿ.ಗಿರೀಶ್ ತಲಾ 1ಸಾವಿರ ನಗದು ಬಹುಮಾನ ಪಡೆದರು.

ಶ್ರೀಕೋಟೆವಿದ್ಯಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಎನ್.ಎಸ್.ಕೋದಂಡರಾಮು, ಪಟ್ಟಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಚ್.ಎಂ.ಶಿವಕುಮಾರ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಶಿವಣ್ಣಗೌಡ, ಅಧ್ಯಕ್ಷ ಎಂ.ಎನ್.ಪರಮಶಿವಯ್ಯ, ಕಾರ್ಯದರ್ಶಿ ವಸಂತ, ಕಾರ್ಯಕ್ರಮ ಸಂಚಾಲಕ ಟಿ.ಎನ್.ವೆಂಕಟೇಶ್, ಎಲ್‌ಐಸಿ ಪುಟ್ಟರಾಜು, ಶ್ರೀನಿವಾಸ್ ಸೇರಿದಂತೆ ಹಲವರು ಇದ್ದರು.