ಗ್ರಾಮೀಣ ವಿದ್ಯಾರ್ಥಿಗಳು ಕೀಡೆ ಸೇರಿದಂತೆ ಇತರೆ ಚಟುವಟಿಕೆಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ನಮ್ಮ ಕಣ್ಮುಂದೆ ಇದೆ. ತಮ್ಮಲ್ಲಿರುವ ಪ್ರತಿಭೆಯನ್ನು ಉತ್ತಮ ತರಬೇತಿಯೊಂದಿಗೆ ಅನಾವರಣಗೊಳಿಸಲು ಮುಂದಾಗಬೇಕು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ವಿದ್ಯಾರ್ಥಿಗಳ ಭವಿಷ್ಯದಲ್ಲಿ ಕ್ರೀಡೆಯೂ ಹೆಚ್ಚಿನ ಮಹತ್ವ ಪಡೆಯಲಿದೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಯುವ ಸಮೂಹ ಹೆಚ್ಚಿನ ಆಸಕ್ತಿ ವಹಿಸಬೇಕೆಂದು ಎಂದು ಸರ್ಕಾರಿ ಪದವಿ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ರವೀಂದ್ರಕುಮಾರ್ ತಿಳಿಸಿದರು.ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ನಡೆದ ಮಂಡ್ಯ ವಿಶ್ವವಿದ್ಯಾನಿಲಯದ ಮಾಂಡವ್ಯ ವಲಯದ ಅಂತರ್ ಕಾಲೇಜು ಮಟ್ಟದ ಮಟ್ಟದ ಪುರುಷರ ಮತ್ತು ಮಹಿಳೆಯರ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ವಿದ್ಯಾರ್ಥಿಗಳು ಕೀಡೆ ಸೇರಿದಂತೆ ಇತರೆ ಚಟುವಟಿಕೆಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ನಮ್ಮ ಕಣ್ಮುಂದೆ ಇದೆ. ತಮ್ಮಲ್ಲಿರುವ ಪ್ರತಿಭೆಯನ್ನು ಉತ್ತಮ ತರಬೇತಿಯೊಂದಿಗೆ ಅನಾವರಣಗೊಳಿಸಲು ಮುಂದಾಗಬೇಕು ಎಂದರು.ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ಭಾರತ್ ಜೋಡೋ ಯುವ ಸಂಘ ಸಹಕಾರಿಯಾಗಿದೆ. ಸರ್ಕಾರವು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಭಾರತ ಜೋಡೋ ಯುವ ಸಂಘ ಸ್ಥಾಪಿಸುತ್ತಿದೆ. ಆ ಮೂಲಕ ಯುವಕರನ್ನು ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಲು ಸಹಕಾರಿಯಾಗುತ್ತದೆ ಎಂದರು.
ವಲಯ ಮಟ್ಟದ ವಾಲಿಬಾಲ್ ಪಂದ್ಯಾವಳಿ ಮಳವಳ್ಳಿಯಲ್ಲಿ ಆಯೋಜನೆಗೊಂಡಿರುವುದು ಸಂತಸ ತಂದಿದೆ. ಕ್ರೀಡಾಪಟುಗಳು ಸೋಲು ಗೆಲುವನ್ನು ಸಮಾನಾಗಿ ಸ್ವೀಕರಿಸಬೇಕೆಂದು ಸಲಹೆ ನೀಡಿದರು.ಕಾಲೇಜು ಪ್ರಾಂಶುಪಾಲೆ ಯಶೋಧ ಮಾತನಾಡಿ, ಪಂದ್ಯಾವಳಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಯಶ್ವಸಿಗೊಳಿಸಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀನಿವಾಸ್, ಅಭಿವೃದ್ದಿ ಸಮಿತಿ ಸದಸ್ಯೆ ಸುಭಾಷಿಣಿ, ಮುಖಂಡರಾದ ಅಭಿಷೇಕ್, ಸಿದ್ದಾರ್ಥ, ರಂಗಸ್ವಾಮಿ, ಕೆಡಿಪಿ ಸದಸ್ಯ ಶಶಿರಾಜ್, ಬುಬ್ರವಾಹನ ಅಯೂಬ್ ಪಾಷ, ನಾಗಣ್ಣ, ಉಪನ್ಯಾಸಕ ಡಾ. ಎಂ.ವಿ ರಘು ಸೇರಿದಂತೆ ಇತರರು ಇದ್ದರು.