ರಾಜ್ಯದಲ್ಲಿ ಅತ್ಯಂತ ಹಿಂದುಳಿದಿರುವ ಹೈದ್ರಾಬಾದ್‌ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ಮಾಡಿ ಜಾರಿಗೆ ತಂದಿರುವ ವಿಶೇಷ ರಕ್ಷಣೆಯ ವ್ಯಾಪ್ತಿಗೆ ಪಕ್ಕದ ವಿಜಯಪುರ ಜಿಲ್ಲೆ, ಹಲವು ಪ್ರದೇಶಗಳ ಸೇರ್ಪಡೆಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟಗಳನ್ನು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಬಲವಾಗಿ ಖಂಡಿಸಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ರಾಜ್ಯದಲ್ಲಿ ಅತ್ಯಂತ ಹಿಂದುಳಿದಿರುವ ಹೈದ್ರಾಬಾದ್‌ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ಮಾಡಿ ಜಾರಿಗೆ ತಂದಿರುವ ವಿಶೇಷ ರಕ್ಷಣೆಯ ವ್ಯಾಪ್ತಿಗೆ ಪಕ್ಕದ ವಿಜಯಪುರ ಜಿಲ್ಲೆ, ಹಲವು ಪ್ರದೇಶಗಳ ಸೇರ್ಪಡೆಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟಗಳನ್ನು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಬಲವಾಗಿ ಖಂಡಿಸಿದೆ.

ಭಾರತ ಸರಕಾರ 2013ರಲ್ಲಿ 371ನೇ(ಜೆ) ಕಲಂ ಹೈದ್ರಾಬಾದ್‌ ಕರ್ನಾಟಕ ಪ್ರದೇಶಕ್ಕೆ ಮಾತ್ರ ಜಾರಿ ಮಾಡಿದೆ. ಇದರ ವ್ಯಾಪ್ತಿಗೆ ಯಾವ ಪ್ರದೇಶದ ಸೇರ್ಪಡೆಗೂ ಅವಕಾಶವಿಲ್ಲ. ಸತತವಾಗಿ 13 ವರ್ಷಗಳಿಂದ ಬೇರೆ ಬೇರೆ ಪ್ರದೇಶದ ಜಿಲ್ಲೆಗಳು, ತಾಲೂಕುಗಳು ನಮ್ಮ ಪ್ರದೇಶದ ವಿಶೇಷ ಸ್ಥಾನಮಾನದಡಿ ಸೇರಿಸಲು ಕೆಲವು ರಾಜಕಿಯ ವ್ಯಕ್ತಿಗಳು ನಡೆಸಿರುವ ಕುತಂತ್ರಕ್ಕೆ ಸಮಿತಿ ನಿರಂತರ ಖಂಡಿಸುತ್ತಾ ಪ್ರತಿಭಟನೆ ನಡೆಸಿಕೊಂಡು ಬಂದಿದೆ.

ಸಿಂದಗಿ, ಇಂಡಿ ಸೇರಿದಂತೆ ವಿಜಯಪುರ ಜಿಲ್ಲೆ ಹೈದ್ರಾಬಾದ್‌ ಕರ್ನಾಟಕದ 371ನೇ(ಜೆ) ವ್ಯಾಪ್ತಿಗೆ ಸೇರಿಸಲು ನಡೆಸಿರುವ ಹೋರಾಟವನ್ನು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಬಲವಾಗಿ ಖಂಡಿಸುತ್ತದೆ ಎಂದು ಸಮಿತಿ ಅಧ್ಯಕ್ಷ ಡಾ. ಲಕ್ಷ್ಮಣ ದಸ್ತಿ, ಗೌರವಾಧ್ಯಕ್ಷ, ಬಸವರಾಜ ದೇಶಮುಖ ಹೇಳಿದ್ದಾರೆ.

ರಾಜಕೀಯ ವ್ಯಕ್ತಿಗಳ ಕುತಂತ್ರದಿಂದ ಹೈದ್ರಾಬಾದ್‌ ಕರ್ನಾಟಕ 371ನೇ(ಜೆ) ಕಲಂ ವ್ಯಾಪ್ತಿಗೆ ವಿಜಯಪುರ, ಗದಗ, ಚಿತ್ರದುರ್ಗದ ಮೊಳಕಾಲ್ಮೂರು, ವಿಶೇಷ ಸ್ಥಾನಮಾನದ ವ್ಯಾಪ್ತಿಗೆ ಸೇರಿಸಲು ವಾಮ ಮಾರ್ಗದ ಪ್ರಯತ್ನಗಳು ನಡೆಸಿದ್ದರು. ಇದೀಗ ಸಿಂದಗಿ, ಇಂಡಿ ಸೇರಿದಂತೆ ವಿಜಯಪುರ ಜಿಲ್ಲೆಯನ್ನು 371ನೇ(ಜೆ) ಕಲಂ ವ್ಯಾಪ್ತಿಗೆ ಸೇರಿಸಬೇಕೆಂಬ ಹೋರಾಟ ನಡೆಸುತ್ತಿರುವುದು ಬೇಸರದ ಸಂಗತಿ.

ಭಾರತ ಸರ್ಕಾರ 371ನೇ(ಜೆ) ಕಲಂ ತಿದ್ದುಪಡಿಯಲ್ಲಿ ಹೈದ್ರಾಬಾದ್‌ ಕರ್ನಾಟಕದ ಎಳು ಜಿಲ್ಲೆಗಳನ್ನು ಮಾತ್ರ 371ನೇ(ಜೆ) ಕಲಂ ವ್ಯಾಪ್ತಿಗೆ ಸೇರಿಸಿದ್ದು, ಯಾವುದೇ ಕಾರಣಕ್ಕೂ ಬೇರೆ ಪ್ರದೇಶದ ಒಂದು ಹಳ್ಳಿಯೂ ಸಹ 371ನೇ(ಜೆ) ಕಲಂ ವ್ಯಾಪ್ತಿಗೆ ಸೇರಿಸಲು ಸಾಧ್ಯವಿಲ್ಲ. ಇಂತಹ ಸಂವಿಧಾನಾತ್ಮಕ ಕಾನೂನು ಜಾರಿಯಲ್ಲಿರುವಾಗಲೂ ಸಹ ನಮ್ಮ ಹಕ್ಕಿಗೆ ಚ್ಯುತಿ ತರುವ ವಿಫಲ ಯತ್ನ ಮಾಡುತ್ತಿರುವುದು ಖೇದಕರ ಸಂಗತಿ ಎಂದು ದಸ್ತಿ, ಬಸವರಾಜ ದೇಶಮುಖ ವಿಷಾದಿಸಿದರು ಸಿಂದಗಿಯ ಹೋರಾಟ ಸ್ಥಳಕ್ಕೆ ಭೇಟಿ ನೀಡಿ ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಬೆಂಬಲಿಸಿರೋದು ಖಂಡಿಸುತ್ತೇವೆ. ಇಂತಹ ಸೂಕ್ಷ್ಮ ವಿಷಯದ ಬಗ್ಗೆ ಒಂದು ಪಕ್ಷದ ರಾಜ್ಯಾಧ್ಯಕ್ಷರಾಗಿ ಹೀಗೆ ಹೇಳಿರೋದು ದುಃಖದ ಸಂಗತಿಯಾಗಿದೆ. 371ನೇ(ಜೆ) ಕಲಂನಲ್ಲಿ ಯಾವುದೇ ಜಿಲ್ಲೆ, ತಾಲೂಕು ಅಷ್ಟೆ ಅಲ್ಲದೆ ಒಂದು ಗ್ರಾಮವೂ ಸಹ ಸೇರಿಸಲೂ ರಾಷ್ಟ್ರಮಟ್ಟದಲ್ಲಿ ಪ್ರಯತ್ನಿಸಿದರೆ, ಕಲ್ಯಾಣ ಕರ್ನಾಟಕದಲ್ಲಿ ಉಗ್ರ ಹೋರಾಟ ಮಾಡುತ್ತದೆಂದು ಸಮಿತಿ ಪರವಾಗಿ ದಸ್ತಿ, ದೇಶಮುಖ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರೊ. ಆರ್.ಕೆ. ಹುಡಗಿ, ಡಾ. ಬಸವರಾಜ ಕುಮನೂರ, ಮನೀಷ್ ಜಾಜು, ರೌಫ್ ಖಾದ್ರಿ, ಡಾ. ಗಾಂಧಿಜಿ ಮೋಳಕೇರಿ, ಡಾ. ಮಾಜಿದ್ ದಾಗಿ, ಲಿಂಗರಾಜ ಸಿರಗಾಪೂರ ಇದ್ದರು.