ಕೃಷಿಯಲ್ಲಿ ಕೀಟನಾಶಕಗಳ ಬಳಕೆ ಅನಿವಾರ್ಯವಾದರೂ ಅವುಗಳನ್ನು ಸುರಕ್ಷಿತ ಮತ್ತು ವೈಜ್ಞಾನಿಕ ವಿಧಾನದಲ್ಲಿ ಬಳಸುವ ಬಗ್ಗೆ ರೈತರು ಹೆಚ್ಚಿನ ಜಾಗೃತಿ ವಹಿಸಬೇಕು. ಬೆಳೆಗಳಿಗೆ ಹಾನಿ ಮಾಡುವ ಕೀಟಗಳನ್ನು ನಿಯಂತ್ರಿಸಲು ರಾಸಾಯನಿಕಗಳನ್ನೇ ಅವಲಂಬಿಸದೇ ನೈಸರ್ಗಿಕ ಹಾಗೂ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಬೇಕು.

ಕನ್ನಡಪ್ರಭ ವಾರ್ತೆ ಹಲಗೂರು

ಕೀಟನಾಶಕಗಳ ಅತಿಯಾದ ಬಳಕೆ ರೈತರ ಆರೋಗ್ಯಕ್ಕೆ ಮಾತ್ರವಲ್ಲದೆ ಮಣ್ಣಿನ ಫಲವತ್ತತೆ, ಜಲಮೂಲಗಳು, ಪರಿಸರ ಮತ್ತು ಆಹಾರ ಸುರಕ್ಷತೆಗೂ ಮಾರಕವಾಗಿದೆ. ಕೀಟನಾಶಕಗಳನ್ನು ಅಗತ್ಯವಿದ್ದಾಗ ಮಾತ್ರ, ಶಿಫಾರಸು ಮಾಡಿದ ಪ್ರಮಾಣದಲ್ಲಿ ಬಳಸುವುದನ್ನು ರೈತರು ರೂಡಿಸಿಕೊಳ್ಳಬೇಕು ಎಂದು ಮಂಡ್ಯ ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಉಮೇಶ್ ಕರೆ ನೀಡಿದರು.

ಸಮೀಪದ ಯತ್ತಂಬಾಡಿ ಗ್ರಾಮ ಪಂಚಾಯ್ತಿ ಆವರಣದಲ್ಲಿ ಕೃಷಿ ಇಲಾಖೆ ಮಳವಳ್ಳಿ ಹಾಗೂ ಗ್ರಾಮ ಪಂಚಾಯ್ತಿ ಆಶ್ರಯದಲ್ಲಿ ಮಂಗಳವಾರ ಪಿ.ಎಂ.-ಆರ್.ಕೆ.ವಿ.ವೈ. ಯೋಜನೆಯಡಿ ‘ಕೃಷಿಯಲ್ಲಿ ಕೀಟನಾಶಕಗಳ ಸುರಕ್ಷಿತ ಮತ್ತು ವಿವೇಚನಾಯುಕ್ತ ಬಳಕೆಯ ಕುರಿತು ರೈತರಿಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೃಷಿಯಲ್ಲಿ ಕೀಟನಾಶಕಗಳ ಬಳಕೆ ಅನಿವಾರ್ಯವಾದರೂ ಅವುಗಳನ್ನು ಸುರಕ್ಷಿತ ಮತ್ತು ವೈಜ್ಞಾನಿಕ ವಿಧಾನದಲ್ಲಿ ಬಳಸುವ ಬಗ್ಗೆ ರೈತರು ಹೆಚ್ಚಿನ ಜಾಗೃತಿ ವಹಿಸಬೇಕು. ಬೆಳೆಗಳಿಗೆ ಹಾನಿ ಮಾಡುವ ಕೀಟಗಳನ್ನು ನಿಯಂತ್ರಿಸಲು ರಾಸಾಯನಿಕಗಳನ್ನೇ ಅವಲಂಬಿಸದೇ ನೈಸರ್ಗಿಕ ಹಾಗೂ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಬೇಕು. ಬೆಳೆಗಳಿಗೆ ಬರುವ ಕೀಟ ಮತ್ತು ರೋಗಗಳ ನಿಯಂತ್ರಣಕ್ಕಾಗಿ ರೈತರು ಮನಬಂದಂತೆ ಕೀಟನಾಶಕಗಳನ್ನು ಬಳಸಬಾರದು ಎಂದರು.

ಕೃಷಿ ತಜ್ಞರ ಸಲಹೆ ಪಡೆದು ಶಿಫಾರಸು ಮಾಡಿದ ಪ್ರಮಾಣದಲ್ಲಿ ಮಾತ್ರ ಔಷಧ ಸಿಂಪಡಣೆ ಮಾಡಬೇಕು. ಅತಿಯಾದ ಕೀಟನಾಶಕ ಬಳಕೆಯಿಂದ ಮಣ್ಣು, ನೀರು ಹಾಗೂ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುವ ಜತೆಗೆ ರೈತರ ಆರೋಗ್ಯಕ್ಕೂ ಹಾನಿಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದರು.

ಕೀಟನಾಶಕ ಸಿಂಪಡಿಸುವ ಸಂದರ್ಭದಲ್ಲಿ ಕೈಗವಸು, ಮುಖಗವಸು ಸೇರಿದಂತೆ ಸುರಕ್ಷತಾ ಪರಿಕರಗಳನ್ನು ಕಡ್ಡಾಯವಾಗಿ ಬಳಸಬೇಕು. ಔಷಧ ಸಿಂಪಡಿಸಿದ ನಂತರ ಪಾಲಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆಯೂ ರೈತರು ತಿಳಿದುಕೊಳ್ಳಬೇಕು. ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಆರೋಗ್ಯಕರ ಬೆಳೆ ಉತ್ಪಾದನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಯತ್ತಂಬಾಡಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎನ್.ಸುಧಾ ಮಾತನಾಡಿ, ಗ್ರಾಪಂ ವ್ಯಾಪ್ತಿಯ ರೈತರು ಇಲಾಖೆ ವ್ಯಾಪ್ತಿಯ ಕಾರ್ಯಾಗಾರಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕೃಷಿಯಲ್ಲಿ ಹೆಚ್ಚಿನ ಇಳುವರಿ ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಎಂದು ಸಲಹೆ ನೀಡಿದರು.

ಈ ವೇಳೆ ಕಸಬಾ ರೈತ ಸಂಪರ್ಕ ಕೇಂದ್ರದ ಕೃಷಿ ಇಲಾಖೆ ಕೃಷಿ ಅಧಿಕಾರಿ ಶ್ವೇತಾ, ರೈತರಾದ ಅಶೋಕ್, ಕೆಂಪರಾಜು, ಸುನೀಲ್, ಕಾರ್ತೀಕ್, ಅಂತರವಳ್ಳಿ, ಬೆಳತೂರು, ಹೊಡಪುರ, ಯತ್ತಂಬಾಡಿ ಸುತ್ತಲಿನ ಗ್ರಾಮಗಳ ರೈತರು ಭಾಗವಹಿಸಿದ್ದರು.