ಸಾರಾಂಶ
ದೇಶ ವಿದೇಶದಲ್ಲಿ ಸಾಗರದ ಮಾರಿಕಾಂಬಾ ದೇವಸ್ಥಾನ ಪ್ರಸಿದ್ದಿಯಾಗಿದೆ. ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಎಲ್ಲೆಡೆಯಿಂದ ಭಕ್ತರು ಬರುತ್ತಾರೆ. ಇಂತಹ ದೇವಸ್ಥಾನದಲ್ಲಿ ಪಾರದರ್ಶಕ ಆಡಳಿತ ತರುವ ಜೊತೆಗೆ ದೇವಸ್ಥಾನದ ಮೂಲಕ ಊರಿನ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ಕನ್ನಡಪ್ರಭ ವಾರ್ತೆ ಸಾಗರ
ದೇಶ ವಿದೇಶದಲ್ಲಿ ಸಾಗರದ ಮಾರಿಕಾಂಬಾ ದೇವಸ್ಥಾನ ಪ್ರಸಿದ್ದಿಯಾಗಿದೆ. ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಎಲ್ಲೆಡೆಯಿಂದ ಭಕ್ತರು ಬರುತ್ತಾರೆ. ಇಂತಹ ದೇವಸ್ಥಾನದಲ್ಲಿ ಪಾರದರ್ಶಕ ಆಡಳಿತ ತರುವ ಜೊತೆಗೆ ದೇವಸ್ಥಾನದ ಮೂಲಕ ಊರಿನ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.ಇಲ್ಲಿನ ಆರ್ಯ ಈಡಿಗರ ಸಭಾಭವನದಲ್ಲಿ ಶನಿವಾರ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಸರ್ವಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಮಿತಿ ಉದ್ದೇಶ ಕೇವಲ ಹಣ ಗಳಿಕೆ ಒಂದೇ ಆಗಿರದೆ ಸಮಾಜಮುಖಿ ಚಿಂತನೆ ಹೊಂದಿರಲಿ ಎಂದು ಸಲಹೆ ನೀಡಿದರು.
ಮಾರಿಕಾಂಬಾ ಸಮಿತಿ ಮೂಲಕ ಸುಸಜ್ಜಿತ ಕಲ್ಯಾಣ ಮಂಟಪ, ಶಾಲಾಕಾಲೇಜು ನಿರ್ಮಿಸಿ, ಬಡವರಿಗೆ ಅನುಕೂಲ ಕಲ್ಪಿಸಿ. ಹಣಕೊಟ್ಟು ಉನ್ನತ ಶಿಕ್ಷಣ ಕೊಡಲು ಆಗದ ಬಡವರಿಗೆ ದೇವಿ ಹೆಸರಿನಲ್ಲಿ ಪ್ರಾರಂಭಿಸುವ ಶಾಲಾಕಾಲೇಜಿನ ಮೂಲಕ ಶೈಕ್ಷಣಿಕ ಭಾಗ್ಯ ಸಿಗುವಂತೆ ಆಗಬೇಕು. ಆಗ ದೇವಿಯು ನಿಮಗೆ ಒಳ್ಳೆಯದನ್ನು ಮಾಡುತ್ತಾಳೆ. ಕೆಲವೇ ದಿನಗಳಲ್ಲಿ ಚುನಾವಣೆ ಇರುವುದರಿಂದ ಉತ್ತಮ ಆಡಳಿತ ಮಂಡಳಿಯನ್ನು ಸದಸ್ಯರು ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.ಸಭೆಯಲ್ಲಿ ಗೊಂದಲ :
ಆರಂಭದಿಂದಲೂ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಸರ್ವಸದಸ್ಯರ ಸಭೆ ಗೊಂದಲದ ಗೂಡಾಗಿತ್ತು. ಹಾಲಿ ವ್ಯವಸ್ಥಾಪಕ ಸಮಿತಿ ಮೇಲೆ ಮಾರಿಕಾಂಬಾ ಹಿತರಕ್ಷಣಾ ಸಮಿತಿ ಪುಂಖಾನುಪುಂಖವಾಗಿ ಆರೋಪಗಳನ್ನು ಹೊರಿಸಿತು. ಸುಮಾರು ೬ ಕೋಟಿ ರು. ಖರ್ಚು ಮಾಡಿದ್ದು, ಇದನ್ನು ಸರ್ವಸದಸ್ಯರ ಗಮನಕ್ಕೆ ತರದೆ ಖರ್ಚು ಮಾಡಿರುವುದರ ಹಿಂದೆ ಭ್ರಷ್ಟಾಚಾರ ಅಡಗಿದೆ ಎಂದು ಹಿತರಕ್ಷಣಾ ಸಮಿತಿ ಸಂಚಾಲಕ ಎಂ.ಡಿ.ಆನಂದ್ ಆರೋಪಿಸಿದರೆ, ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಬೇರೆಬೇರೆ ಸಂಸ್ಥೆಗಳಲ್ಲಿ ಅನ್ಯಾಯ ನಡೆದಿದೆ. ನೀವು ಅಲ್ಲಿ ಹೋಗಿ ಇದೇ ರೀತಿ ಪ್ರಶ್ನೆ ಮಾಡುತ್ತೀರಾ ಎಂದು ಹಾರಿಕೆ ಉತ್ತರ ಕೊಡಲು ಮುಂದಾದಾಗ ಸ್ವಲ್ಪಹೊತ್ತು ಸಭೆಯಲ್ಲಿ ಪರಸ್ಪರ ವಾಕ್ಸಮರ ನಡೆಯಿತು.ಒಂದು ತಿಂಗಳಿನಲ್ಲಿ ಚುನಾವಣೆ: ಸಭೆಯ ಮುಖ್ಯ ಅಜೆಂಡಾ ಎಂದೆ ಗುರುತಿಸಿಕೊಂಡಿದ್ದ ಪ್ರತಿಷ್ಠಾನದ ಚುನಾವಣೆಯನ್ನು ಅತಿ ಶೀಘ್ರದಲ್ಲಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಪ್ರತಿಷ್ಟಾನದ ಪ್ರಧಾನ ಕಾರ್ಯದರ್ಶಿ ಬಿ.ಗಿರಿಧರ ರಾವ್ ಸೆ. ೨೦ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಜಿಲ್ಲಾ ನ್ಯಾಯಾಲಯದ ಆದೇಶದಂತೆ ಜಿಲ್ಲಾ ನೋಂದಣಾಧಿಕಾರಿಗಳಿಗೆ ಚುನಾವಣೆ ನಡೆಸಿಕೊಡುವಂತೆ ತೀರ್ಮಾನ ಕೈಗೊಳ್ಳಲಾಗಿದೆ. ಸೋಮವಾರ ಸಂಜೆಯೊಳಗೆ ಜಿಲ್ಲಾ ನೋಂದಣಾಧಿಕಾರಿಗಳನ್ನು ಭೇಟಿ ಮಾಡಿ ಚುನಾವಣೆ ನಡೆಸಿಕೊಡುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಕೆ.ಎನ್.ನಾಗೇಂದ್ರ, ಲೋಕೇಶ ಕುಮಾರ್, ಸುಂದರ ಸಿಂಗ್, ಎಸ್.ವಿ.ಕೃಷ್ಣಮೂರ್ತಿ, ಪುರುಷೋತ್ತಮ, ಚಂದ್ರು, ಶಶಿಕಾಂತ್, ನಾರಾಯಣ, ಸಂತೋಷ್ ಶೇಟ್, ನಾಗಪ್ಪ ಇನ್ನಿತರರು ಹಾಜರಿದ್ದರು.