ಹಾನಗಲ್ಲಿನ ಜನತಾ ಶಿಕ್ಷಣ ಸಂಘದ 15 ನಿರ್ದೇಶಕರ ಸಾಮೂಹಿಕ ರಾಜೀನಾಮೆ

| Published : Sep 22 2025, 01:01 AM IST

ಹಾನಗಲ್ಲಿನ ಜನತಾ ಶಿಕ್ಷಣ ಸಂಘದ 15 ನಿರ್ದೇಶಕರ ಸಾಮೂಹಿಕ ರಾಜೀನಾಮೆ
Share this Article
  • FB
  • TW
  • Linkdin
  • Email

ಸಾರಾಂಶ

ನಿರ್ಗಮಿತ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಹಿತ ಕಾಯ್ದ ಈ ಸಂಸ್ಥೆಯ ಬೆಳವಣಿಗೆ ಸಹಿಸದೇ ಕೆಲವರು ಇಲ್ಲಸಲ್ಲದ ಸುದ್ದಿ ಹಬ್ಬಿಸಿ ಅರಾಜಕತೆ ಸೃಷ್ಟಿಸುತ್ತಿರುವುದು, ಇಂಥ ಸಂಸ್ಥೆಯಲ್ಲಿ ಕೆಲಸ ಮಾಡಿದವರೇ ಇಂಥ ಕೃತ್ಯದಲ್ಲಿ ಭಾಗಿಯಾಗಿರುವುದು ವಿಷಾದನೀಯ ಎಂದು ತಿಳಿಸಿದರು.

ಹಾನಗಲ್ಲ: 72 ವರ್ಷಗಳ ಇತಿಹಾಸವಿರುವ ಇಲ್ಲಿನ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ 15 ಜನ ನಿರ್ದೇಶಕರು ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ.ಶನಿವಾರ ನಡೆದ ಸಂಘದ 19ನೇ ವಾರ್ಷಿಕ ಸಾಮಾನ್ಯ ಸಭೆಯ ನಂತರ ಅವರು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್. ಬಳಿಗಾರ ಅವರಿಗೆ ರಾಜೀನಾಮೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಬಿ.ಎಸ್. ಅಕ್ಕವಳ್ಳಿ, ಉಪಾಧ್ಯಕ್ಷ ಸುರೇಶ ರಾಯ್ಕರ, ನಿರ್ದೇಶಕರಾದ ಅಶೋಕ ಹಂಗರಗಿ, ಭೀಮನಗೌಡ ಪಾಟೀಲ, ಚಂದ್ರಶೇಖರ ಸುಬ್ಬಣ್ಣನವರ, ದುಶ್ಯಂತ ನಾಗರವಳ್ಳಿ, ರವಿಚಂದ್ರ ಪುರೋಹಿತ, ರವಿರಾಜ ಕಲಾಲ, ನಿಂಗಪ್ಪ ಗೊಬ್ಬೇರ, ಹನುಮಂತಪ್ಪ ಮಲಗುಂದ, ಮಧುಮತಿ ಪೂಜಾರ, ಲಕ್ಷ್ಮಣ ಕಂಚಿಗೊಲ್ಲರ, ಜಗದೇವ ಶಿಡ್ಲಾಪುರ, ಅರುಣ ತಿರುಮಲೆ ರಾಜೀನಾಮೆ ಸಲ್ಲಿಸಿದರು.

ಇನ್ನೊಬ್ಬ ನಿರ್ದೇಶಕಿ ರೇಖಾ ಶೆಟ್ಟರ ಸೆ. 17ರಂದೇ ರಾಜೀನಾಮೆ ಸಲ್ಲಿಸಿದ್ದಾರೆ. ಇಡೀ ಆಡಳಿತ ಮಂಡಳಿ ರಾಜೀನಾಮೆ ಸಲ್ಲಿಸಿದ್ದರಿಂದ ಆಡಳಿತಾಧಿಕಾರಿ ನೇಮಕವಾಗುತ್ತದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್. ಬಳಿಗಾರ ತಿಳಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ನಿರ್ಗಮಿತ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ, ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಹಿತ ಕಾಯ್ದ ಈ ಸಂಸ್ಥೆಯ ಬೆಳವಣಿಗೆ ಸಹಿಸದೇ ಕೆಲವರು ಇಲ್ಲಸಲ್ಲದ ಸುದ್ದಿ ಹಬ್ಬಿಸಿ ಅರಾಜಕತೆ ಸೃಷ್ಟಿಸುತ್ತಿರುವುದು, ಇಂಥ ಸಂಸ್ಥೆಯಲ್ಲಿ ಕೆಲಸ ಮಾಡಿದವರೇ ಇಂಥ ಕೃತ್ಯದಲ್ಲಿ ಭಾಗಿಯಾಗಿರುವುದು ವಿಷಾದನೀಯ. ಈ ಶಾಲೆಯಲ್ಲಿ ಓದಿದ, ಈ ಸಂಸ್ಥೆಯ ಬಗೆಗೆ ಕಾಳಜಿ ಕಳಕಳಿ ಇರುವವರು ಈ ಸಂಸ್ಥೆಯನ್ನು ಉಳಿಸಲು ಕೈಜೋಡಿಸಿ ಸಂಸ್ಥೆಯ ಹಿತಾಸಕ್ತಿ ಕಾಯಬೇಕು. ಈ ಕಾರಣಕ್ಕಾಗಿಯೇ ಯಾವುದೇ ವಿಕಲ್ಪಗಳಿಲ್ಲದಂತೆ ಆಡಳಿತ ಮಂಡಳಿಯ ಎಲ್ಲ ಸದಸ್ಯರು ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಹಾಗೂ 12 ನಿರ್ದೇಶಕರಿದ್ದರು.

ಸದಸ್ಯತ್ವ ಇಲ್ಲ: ಆಡಳಿತ ಮಂಡಳಿ ರಾಜೀನಾಮೆ ನಂತರ ಬಳಿಗಾರ ಅವರು, ಸಂಸ್ಥೆಯ ಸದಸ್ಯತ್ವ ಕೇಳಿದವರಿಗೆ ಸದ್ಯಕ್ಕೆ ಸದಸ್ವತ್ವವಿಲ್ಲ. ಆಡಳಿತ ಮಂಡಳಿ ರಾಜೀನಾಮೆ ಸಲ್ಲಿಸಿದ್ದರಿಂದ ಸದಸ್ಯತ್ವ ನೀಡಲಾಗದು ಎಂದಿದ್ದಾರೆ.ಭ್ರಷ್ಟಾಚಾರ ನಡೆದಿಲ್ಲ: ಭ್ರಷ್ಟಾಚಾರದ ಸರಿಯಾದ ಅರ್ಥವೇ ಗೊತ್ತಿಲ್ಲದವರು ಈ ಸಹಕಾರಿ ಸಂಘದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸುತ್ತಿರುವುದು ನೋವಿನ ಸಂಗತಿಯಾಗಿದ್ದು, ಈ ಸಂಸ್ಥೆಯ ಮೇಲೆ ವಕ್ರದೃಷ್ಟಿ ಬೀರಿ ಇಲ್ಲಿನ ವ್ಯವಸ್ಥೆಯನ್ನು ಮೂಲೆಗುಂಪು ಮಾಡುವ ಹುನ್ನಾರಕ್ಕೆ ಮುಂದಾಗಿದ್ದಾರೆ ಎಂದು ಸಂಸ್ಥೆಯ ಉಪಾಧ್ಯಕ್ಷ ಸುರೇಶ ರಾಯಕರ ಕಿಡಿಕಾರಿದರು.

ಇಲ್ಲಿನ ಕುಮಾರೇಶ್ವರ ಕಲಾ ವಾಣಿಜ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ 19ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಕಳೆದ ಹತ್ತಾರು ವರ್ಷಗಳಲ್ಲಿ ಸಂಸ್ಥೆ ಅತಿ ಹೆಚ್ಚು ಅಭಿವೃದ್ಧಿ ಹೊಂದಿರುವುದು ಪ್ರಶಂಸೆಗೆ ಪಾತ್ರವಾಗಿದೆ. ಇದನ್ನು ಸಹಿಸದೇ ಕೆಲವರು ಸದಸ್ಯತ್ವ ಪಡೆಯುವ ನೆಪದಲ್ಲಿ ಸಂಸ್ಥೆಯನ್ನು ದಿವಾಳಿ ಮಾಡುವ ಹುನ್ನಾರದಲ್ಲಿದ್ದಾರೆ. ಅದಕ್ಕೆ ನಾವು ಎಂದಿಗೂ ಅವಕಾಶ ನೀಡುವುದಿಲ್ಲ ಎಂದರು.

ವರದಿ ನೀಡಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ, ಸಂಸ್ಥೆಯ ಹಿತ ಕಾಪಾಡುವುದು ನಮ್ಮ ಜವಾಬ್ದಾರಿ. ಸಂಸ್ಥೆಯ ಸದಸ್ಯರು ನಮ್ಮನ್ನು ನಂಬಿ ಸಂಸ್ಥೆ ನಡೆಸಲು ಆಯ್ಕೆ ಮಾಡಿದ್ದಾರೆ. ಆದರೆ ಕಳೆದ 6 ತಿಂಗಳಿನಿಂದ ಸಂಸ್ಥೆ ಹೆಸರು ಕೆಡಿಸುವ ನಿರಂತರ ಹುನ್ನಾರ ನಡೆದಿದ್ದು, ಇದು ಎಲ್ಲೆಡೆ ಸಂಸ್ಥೆಯ ಬಗೆಗೆ ವ್ಯತಿರಿಕ್ತ ಭಾವನೆಯನ್ನು ಬೆಳೆಸುತ್ತಿದೆ. ಆದರೆ ಇಂತಹ ಹುನ್ನಾರಗಳಿಗೆ ಸರಿಯಾದ ಉತ್ತರ ನೀಡಲು ಸಿದ್ಧ. ಸಂಸ್ಥೆಯನ್ನು ಅತ್ಯಂತ ದೊಡ್ಡ ರೀತಿಯಲ್ಲಿ ಅಭಿವೃದ್ಧಿಪಡಿಸಿದ ತೃಪ್ತಿ ನಮಗಿದೆ. ಹೊಸ ಸದಸ್ಯತ್ವ ನೀಡುವುದು ಆಡಳಿತ ಮಂಡಳಿಯ ವಿವೇಚನೆಗೆ ಬಿಟ್ಟದ್ದು. ಬೇಕಾದವರು ನ್ಯಾಯಾಲಯದ ಮೊರೆ ಹೋಗಲಿ ಎಂದರು.

ಎಂ.ಎಚ್. ಬಳಿಗಾರ ಲೆಕ್ಕಪತ್ರ ಹಾಗೂ ಅಂದಾಜು ಪತ್ರಿಕೆಯನ್ನು ಮಂಡಿಸಿದರು. ಪುರಸಭೆ ಮಾಜಿ ಅಧ್ಯಕ್ಷ ಎಂ.ಬಿ.ಕಲಾಲ, ಎ.ಎಸ್. ಬಳ್ಳಾರಿ, ನಿರ್ದೇಶಕರು ಇದ್ದರು.