ಸ್ವಸ್ಥ ಪರಿವಾರದಿಂದ ಸ್ವಸ್ಥ ಸಮಾಜ ನಿರ್ಮಾಣ: ಜೋಶಿ

| Published : Sep 22 2025, 01:01 AM IST

ಸಾರಾಂಶ

ಹುಬ್ಬಳ್ಳಿ- ಧಾರವಾಡ ಮಹಾನಗರ ಬಿಜೆಪಿ ಯುವ ಮೋರ್ಚಾ ವತಿಯಿಂದ ಪ್ರಧಾನಿ ನರೇಂದ್ರ ಮೋದಿ 75ನೇ ಹುಟ್ಟುಹಬ್ಬದ ಅಂಗವಾಗಿ, ‘ನಶೆಮುಕ್ತ ಭಾರತ’ ನಿರ್ಮಾಣ ಸಂಕಲ್ಪದೊಂದಿಗೆ ಹುಬ್ಬಳ್ಳಿಯಲ್ಲಿ ನಡೆದ ನಮೋ ಯುವ ಓಟ ಆಯೋಜನೆ.

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ‘ಸ್ವಸ್ಥ ವ್ಯಕ್ತಿ, ಸ್ವಸ್ಥ ಪರಿವಾರ ಮತ್ತು ಸ್ವಸ್ಥ ಸಮಾಜ’ ನಿರ್ಮಾಣ ಹೊಸ ಭಾರತವನ್ನು ಶ್ರೇಷ್ಠ ಭಾರತವನ್ನಾಗಿ ಮಾಡುವ ಮಾರ್ಗವಾಗಿದೆ. ಮಾದಕ ವ್ಯಸನಗಳು ಯುವಶಕ್ತಿಯನ್ನು ದುರ್ಬಲಗೊಳಿಸುತ್ತವೆ. ಯುವಕರು ದೈಹಿಕವಾಗಿ ಸದೃಢರಾಗಿರುವುದರ ಜತೆಗೆ ಈ ಪಿಡುಗಿನಿಂದ ಸಂಪೂರ್ಣವಾಗಿ ದೂರವಿರಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿ- ಧಾರವಾಡ ಮಹಾನಗರ ಬಿಜೆಪಿ ಯುವ ಮೋರ್ಚಾ ವತಿಯಿಂದ ಪ್ರಧಾನಿ ನರೇಂದ್ರ ಮೋದಿ 75ನೇ ಹುಟ್ಟುಹಬ್ಬದ ಅಂಗವಾಗಿ, ‘ನಶೆಮುಕ್ತ ಭಾರತ’ ನಿರ್ಮಾಣ ಸಂಕಲ್ಪದೊಂದಿಗೆ ಹುಬ್ಬಳ್ಳಿಯಲ್ಲಿ ನಡೆದ ‘ನಮೋ ಯುವ ಓಟ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕಾರ್ಯಕ್ರಮದಲ್ಲಿ ಕ್ರಿಕೆಟಿಗ ವೆಂಕಟೇಶ ಪ್ರಸಾದ್, ಖ್ಯಾತ ನಟಿ ಹರ್ಷಿಕಾ ಪೂಣಚ್ಚ ಮತ್ತು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಮಹೇಶ್ ಟೆಂಗಿನಕಾಯಿ ಮತ್ತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉಪಸ್ಥಿತರಿದ್ದರು.

ದೇಶದ 75 ನಗರಗಳಲ್ಲಿ ನಡೆದ ‘ನಮೋ ಯುವ ರನ್’ ಮ್ಯಾರಾಥಾನ್‌ನ ಯಶಸ್ವಿ ಭಾಗವಾಗಿ ಹುಬ್ಬಳ್ಳಿಯಲ್ಲಿ ನಡೆದ ಈ ಓಟ ಗಮನ ಸೆಳೆಯಿತು. ಯುವಕರು ಮಾದಕ ವಸ್ತುಗಳಿಂದ ದೂರವಿರಲು ಮತ್ತು ದೈಹಿಕ ಕ್ಷಮತೆಯನ್ನು ಗಳಿಸಲು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮೇಯರ್ ಜ್ಯೋತಿ ಪಾಟೀಲ್, ಉಪ ಮೇಯರ್ ಸಂತೋಷ ಚವ್ಹಾಣ್, ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರೀತಂ ಅರಕೇರಿ, ಪಕ್ಷದ ಪಾಲಿಕೆ ಸದಸ್ಯರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸಚಿವರು ಮತ್ತು ಇತರ ಗಣ್ಯರು ಭಾಗವಹಿಸಿದ ಯುವಕರನ್ನು ಅಭಿನಂದಿಸಿ, ಅವರ ಈ ಹೆಜ್ಜೆ ಇಡೀ ಸಮಾಜಕ್ಕೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.