ಸಾರಾಂಶ
ಹುಬ್ಬಳ್ಳಿ: ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯ ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ಬರೆಸಬೇಕು. ಜಾತಿ ಕಾಲಂನಲ್ಲಿ ತಮ್ಮ ಜಾತಿ ಬರೆಸಬೇಕು ಎಂದು ವಿಧಾನಸಭೆ ವಿರೋಧಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ- ಲಿಂಗಾಯತ ಬೇರೆ ಅಲ್ಲ, ಎರಡೂ ಒಂದೇ. ಧರ್ಮದ ಕಾಲಂನಲ್ಲಿ ಹಿಂದೂ ಅಂತಲೇ ಬರೆಯಿಸಬೇಕು. ಕೆಲವು ಮಠಾಧೀಶರು ಎಡಪಂತೀಯರ ಪ್ರಭಾವಕ್ಕೆ ಒಳಗಾಗಿ ವೀರಶೈವ- ಲಿಂಗಾಯತ ಪ್ರತ್ಯೇಕ ಧರ್ಮ ಎನ್ನುತ್ತಿದ್ದಾರೆ. ಇದು ವಿತಂಡವಾದ. ಸಮಾವೇಶದಲ್ಲಿ ಕೆಲವು ಸ್ವಾಮೀಜಿಗಳು ಧರ್ಮದ ಕುರಿತು ವಿತಂಡ ವಾದ ಮಂಡಿಸಿದ್ದಾರೆ. ಸಚಿವರು ಹಾಗೂ ಕೆಲವು ನಾಯಕರು ವಿವೇಚನೆ ಅನುಸಾರ ಹಾಗೂ ವೀರಶೈವ ಲಿಂಗಾಯತ ಧರ್ಮ ಎಂದೇ ಬರೆಸಬೇಕು ಎಂದು ಹೇಳಿಕೆ ನೀಡಿದ್ದಾರೆ. ಇವೆಲ್ಲ ರಾಜಕೀಯ ಪ್ರೇರಿತ ಹೇಳಿಕೆಗಳು ಎಂದು ಕಿಡಿಕಾರಿದರು.ವೀರಶೈವ ಲಿಂಗಾಯತ ಏಕತಾ ಸಮಾವೇಶದಲ್ಲಿ ಸಚಿವ ಈಶ್ವರ ಖಂಡ್ರೆ ನೀಡಿದ ವೀರಶೈವ ಲಿಂಗಾಯತ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಖಂಡ್ರೆ ಹೇಳಿಕೆ ವೈಯಕ್ತಿಕವಾದದ್ದೇ ಹೊರತು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನಿರ್ಧಾರವಲ್ಲ. ಮಹಾಸಭಾ ಯಾರ ವೈಯಕ್ತಿಕ ಆಸ್ತಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಡಪಂಥೀಯರ ಟೂಲ್‌ಕಿಟ್ ಭಾಗವಾಗಿ ಸಮಾಜವನ್ನು ದಾರಿ ತಪ್ಪಿಸುತ್ತಿದ್ದಾರೆ. ಮುಖ್ಯಮಂತ್ರಿ ಖುರ್ಚಿ ಭದ್ರಪಡಿಸಿಕೊಳ್ಳಲು ಸಿದ್ದರಾಮಯ್ಯ ಅವರು ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದ್ದಾರೆ. ಆ ಮೂಲಕ ಹಿಂದೂ ಸಮಾಜವನ್ನು ಒಡೆದು, ಹೈಕಮಾಂಡ್ ಮನವೊಲಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಸಮಾಜದ ಜನಪ್ರತಿನಿಧಿಗಳಾಗಲಿ, ಮಠಾಧೀಶರಾಗಲಿ ಗೊಂದಲ ಸೃಷ್ಟಿಸುವ ಬದಲು, ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಠಾಧೀಶರನ್ನು ಮುಂದೆ ಬಿಟ್ಟು, ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಸಾಂವಿಧಾನಿಕವಾಗಿ ಮಾನ್ಯತೆ ಇರುವುದು ಆರು ಧರ್ಮಗಳಿಗೆ ಮಾತ್ರ ಎಂದರು.
ಸಮೀಕ್ಷೆಯ ಜಾತಿ ಕಾಲಂನಲ್ಲಿ ಹೆಸರೇ ಕೇಳದ ನೂರಾರು ಜಾತಿಗಳನ್ನು ಸೇರಿಸಲಾಗಿದೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ಕ್ರಿಶ್ಚಿಯನ್‌ಗೆ ಸಂಬಂಧಿಸಿ ನಲವತ್ತಾರು ಜಾತಿಗಳನ್ನು ಸಿದ್ದರಾಮಯ್ಯ ಹೆಸರಿಸಿದ್ದಾರೆ. ಮತಾಂತರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಜಾತಿ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಕುತ್ತು ಬಂದಾಗಲೆಲ್ಲ ಅವರು ಧರ್ಮದ ವಿಚಾರ ಮುನ್ನೆಲೆಗೆ ತರುತ್ತಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಈ ರೀತಿ ಮಾಡಿದ್ದಾರೆ. ಎಲ್ಲರೂ ಜಾತಿ ಕಾಲಂನಲ್ಲಿ ಹಿಂದೂ ಅಂತಲೇ ಬರೆಯಿಸಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ರವಿ ನಾಯಕ ಮತ್ತಿತರರು ಉಪಸ್ಥಿತರಿದ್ದರು.