ರಾಜ್ಯ ಸರ್ಕಾರದ ಜಾತಿ ಸಮೀಕ್ಷೆಗೆ ಮಾನ್ಯತೆಯೇ ಇಲ್ಲ: ಕೇಂದ್ರ ಸಚಿವ ಜೋಶಿ

| N/A | Published : Sep 22 2025, 01:01 AM IST / Updated: Sep 22 2025, 01:23 PM IST

Kannada actress Ranya rao gold smuggling case Union minister pralhad joshi reacts
ರಾಜ್ಯ ಸರ್ಕಾರದ ಜಾತಿ ಸಮೀಕ್ಷೆಗೆ ಮಾನ್ಯತೆಯೇ ಇಲ್ಲ: ಕೇಂದ್ರ ಸಚಿವ ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದ್ರೋಹಿಗಳಿಗೆ, ಸಮಾಜದಲ್ಲಿ ಸೌಹಾರ್ದತೆ ಕೆಡಿಸುವವರಿಗೆ, ಮತೀಯ ಭಾವನೆ ಕೆರಳಿಸುವವರಿಗೆ ಕಾಂಗ್ರೆಸ್‌ ಸರ್ಕಾರ ಬೆಂಬಲ ಮತ್ತು ಕುಮ್ಮಕ್ಕು ನೀಡುತ್ತಿದೆ. ಈಗ ನಡೆಸುತ್ತಿರುವ ಜಾತಿಗಣತಿ ಸಮೀಕ್ಷೆಯಲ್ಲೂ ಇದರ ಪರಿಣಾಮ ಕಾಣುತ್ತಿದೆ.

ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್‌ ಸರ್ಕಾರ ನಡೆಸುತ್ತಿರುವ ಜಾತಿ- ಜನಗಣತಿ ಸಮೀಕ್ಷೆಗೆ ಯಾವುದೇ ಅಧಿಕೃತ ಮಾನ್ಯತೆಯಿಲ್ಲ, ಅರ್ಥವೂ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರ ಜನಗಣತಿ ಮಾಡುತ್ತದೆ. ಆ ಅಧಿಕಾರ ಇರುವುದು ಕೇಂದ್ರಕ್ಕೆ ಮಾತ್ರ. ರಾಜ್ಯ ಸರ್ಕಾರ ನಡೆಸುತ್ತಿರುವುದು ಸಮೀಕ್ಷೆಯಷ್ಟೇ. ಇದಕ್ಕೆ ಯಾವುದೇ ಅರ್ಥವಿಲ್ಲ ಎಂದು ಹೇಳಿದರು.

ಸಮಾಜದ್ರೋಹಿಗಳಿಗೆ, ಸಮಾಜದಲ್ಲಿ ಸೌಹಾರ್ದತೆ ಕೆಡಿಸುವವರಿಗೆ, ಮತೀಯ ಭಾವನೆ ಕೆರಳಿಸುವವರಿಗೆ ಕಾಂಗ್ರೆಸ್‌ ಸರ್ಕಾರ ಬೆಂಬಲ ಮತ್ತು ಕುಮ್ಮಕ್ಕು ನೀಡುತ್ತಿದೆ. ಈಗ ನಡೆಸುತ್ತಿರುವ ಜಾತಿಗಣತಿ ಸಮೀಕ್ಷೆಯಲ್ಲೂ ಇದರ ಪರಿಣಾಮ ಕಾಣುತ್ತಿದೆ ಎಂದು ತೀವ್ರವಾಗಿ ಖಂಡಿಸಿದರು.

ಸಮೀಕ್ಷೆಗೆ ಯಾವ ಆಧಾರ?: ರಾಜ್ಯ ಕಾಂಗ್ರೆಸ್‌ ಸರ್ಕಾರ ಅದ್ಯಾವ ಆಧಾರದ ಮೇಲೆ ಜಾತಿ ಸಮೀಕ್ಷೆ ಮಾಡುತ್ತಿದೆ? ಕುರುಬ ಕ್ರಿಶ್ಚಿಯನ್‌, ಬ್ರಾಹ್ಮಣ ಕ್ರಿಶ್ಚಿಯನ್‌, ಲಿಂಗಾಯತ ಕ್ರಿಶ್ಚಿಯನ್‌ ಎಂದು ಯಾವ ಆಧಾರ ಮೇಲೆ ಮಾಡಲು ಹೊರಟಿದ್ದೀರಿ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಬ್ಬ ಅಲ್ಟ್ರಾ ಲೆಫ್ಟಿಸ್ಟ್‌ ಎಂದು ಜೋಶಿ ಕಿಡಿಕಾರಿದರು.

ಒಕ್ಕಲಿಗರು ಸೇರಿದಂತೆ ಹಲವು ಸಮುದಾಯಗಳಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಜಾತಿ ಸಮೀಕ್ಷೆ ಮಾಡಿದರೆ ಒಕ್ಕಲಿಗ ಸಮಾಜದಲ್ಲಿ ತಮ್ಮ ನಾಯಕತ್ವ ಹೋಗಲಿದೆ ಎಂಬ ಸತ್ಯ ಡಿಕೆಶಿ ಅರಿವಿಗೆ ಬಂದಿದೆ. ಹಾಗಾಗಿ ಅವರೂ ಸೇರಿದಂತೆ ಕಾಂಗ್ರೆಸ್‌ನ ಸಚಿವರೇ ಇದರ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ ಎಂದು ಜೋಶಿ ಪ್ರತಿಕ್ರಿಯಿಸಿದರು.

ಹಿಂದೂ ಸಮಾಜ ಒಡೆಯುವ ಷಡ್ಯಂತ್ರ: ನಕಲಿ ಗಾಂಧಿಗಳ ಆಣತಿಯಂತೆ ಸಿಎಂ ಸಿದ್ದರಾಮಯ್ಯ ಹಿಂದೂ ಸಮಾಜ ಒಡೆಯುವ ಷಡ್ಯಂತ್ರ ನಡೆಸಿದ್ದಾರೆ. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಪ್ರೇರಣೆ, ಸೂಚನೆಯಂತೆ ನುಸುಳುಕೋರರಿಗೆ ʼವೋಟಿಂಗ್‌ ಹಕ್ಕುʼ ಕೊಟ್ಟು ದೇಶವನ್ನು ಅಶಕ್ತಗೊಳಿಸುವ ಷಡ್ಯಂತ್ರದ ಭಾಗ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತಾಂತರಿಗಳಿಗೆ ಮೀಸಲಾತಿ?: ಕನ್ವರ್ಟ್‌ ಆದವರಿಗೆ ಮೀಸಲಾತಿಯಿಲ್ಲ ಎಂದು ನಮ್ಮ ಸಂವಿಧಾನದಲ್ಲಿ ಸ್ಪಷ್ಟವಾಗಿದೆ. ಆದರೆ, ಇವರು ಕುರುಬ ಕ್ರಿಶ್ಚಿಯನ್‌, ಬ್ರಾಹ್ಮಣ ಕ್ರಿಶ್ಚಿಯನ್‌, ಲಿಂಗಾಯತ ಕ್ರಿಶ್ಚಿಯನ್‌ ಎಂದು ನಮೂದಿಸಿ ಮೀಸಲಾತಿ ಕೊಡುವ ಹುನ್ನಾರ ನಡೆಸಿದಂತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ಧರ್ಮಸ್ಥಳಕ್ಕೆ ಬುಲ್ಡೋಜರ್‌:

ಧರ್ಮಸ್ಥಳಕ್ಕೆ ಬುಲ್ಡೋಜರ್‌ ಹಚ್ಚಬೇಕು ಎಂದವರನ್ನು ಬಿಟ್ಟು ʼಮಸೀದಿಗೆ ಬುಲ್ಡೋಜರ್‌ ಹಚ್ಚಬೇಕುʼ ಎಂದವರ ವಿರುದ್ಧ ಕ್ರಮ ಕೈಗೊಳ್ಳುತ್ತೀರಿ. ಒಟ್ಟಿನಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಮತಾಂಧರ ಪರವಿರುವ ಕೆಟ್ಟ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಹುಲ್‌ಗೆ ಕಾಮನ್‌ಸೆನ್ಸ್‌ ಇಲ್ಲ: ಜೋಶಿ ಟೀಕೆ

ದೇಶದ ಜನರು ತಮಗೆ ಮತ ಹಾಕಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನ ಬದ್ಧ ಸಂಸ್ಥೆಗಳ ಮೇಲೆ ಅಟ್ಯಾಕ್ ಮಾಡುತ್ತಿದ್ದಾರೆ. ಮತಗಳ್ಳತನ ಮಾಡಲಾಗಿದೆ ಎಂದು ಹೇಳುವ ರಾಹುಲ್‌ ಗಾಂಧಿಗೆ ಸಾಮಾನ್ಯಜ್ಞಾನ (ಕಾಮನ್‌ಸೆನ್ಸ್‌) ಇಲ್ಲ ಎಂದು ಜೋಶಿ ಕುಟುಕಿದರು.

ಈಗಾಗಲೇ ಚುನಾವಣಾ ಆಯೋಗ ಕಾಂಗ್ರೆಸ್‌ಗೆ ಸ್ಪಷ್ಟೀಕರಣ ನೀಡಿದೆ. ಈಗ ಕಾಂಗ್ರೆಸ್ ಎಸ್‌ಐಟಿ ತನಿಖೆ ನಡೆಸಿದರೂ ಯಾವುದೇ ಪ್ರಯೋಜನವಿಲ್ಲ. ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ಬ್ಯಾಲೇಟ್ ಪೇಪರ್ ಬಳಸಲು ಸಾಧ್ಯವಿಲ್ಲ. ದೇಶವು ಡಿಜಿಟಲ್ ತಂತ್ರಜ್ಞಾನದಲ್ಲಿ ಮುಂದು ಸಾಗುತ್ತಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

Read more Articles on