ಕುರುಬ ಸಮಾಜ ಶೈಕ್ಷಣಿಕ ಜಾಗೃತವಾಗಲಿ: ನಿರಂಜನಾನಂದ ಸ್ವಾಮೀಜಿ

| Published : Sep 22 2025, 01:01 AM IST

ಕುರುಬ ಸಮಾಜ ಶೈಕ್ಷಣಿಕ ಜಾಗೃತವಾಗಲಿ: ನಿರಂಜನಾನಂದ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಶೈಕ್ಷಣಿಕವಾಗಿ ಸಮಾಜ ಹಿಂದುಳಿದ ಕಾರಣ ಶಿಕ್ಷಣಕ್ಕೆ ಮಹತ್ವ ನೀಡಬೇಕೆನ್ನುವ ಉದ್ದೇಶದಿಂದ ಹಲವೆಡೆ ಶಿಕ್ಷಣ ಸಂಸ್ಥೆ ತೆರೆಯಲಾಗಿದೆ. ಆ ಮೂಲಕ ಸಮಾಜದ ಬಡ ಹಾಗೂ ಹಿಂದುಳಿದ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ.

ಕೊಪ್ಪಳ:

ಕುರುಬ ಸಮಾಜ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಶೈಕ್ಷಣಿಕವಾಗಿ ಜಾಗೃತವಾಗುವ ಮೂಲಕ ಸಬಲರಾಗಬೇಕೆಂದು ಕಾಗಿನೆಲೆ ಕನಕ ಗುರುಪೀಠಾಧ್ಯಕ್ಷ ನಿರಂಜನಾನಂದ ಸ್ವಾಮೀಜಿ ಕರೆ ನೀಡಿದರು.

ನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನಕ ಗುರು ಪೀಠದಿಂದ ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಶೈಕ್ಷಣಿಕವಾಗಿ ಸಮಾಜ ಹಿಂದುಳಿದ ಕಾರಣ ಶಿಕ್ಷಣಕ್ಕೆ ಮಹತ್ವ ನೀಡಬೇಕೆನ್ನುವ ಉದ್ದೇಶದಿಂದ ಹಲವೆಡೆ ಶಿಕ್ಷಣ ಸಂಸ್ಥೆ ತೆರೆಯಲಾಗಿದೆ. ಆ ಮೂಲಕ ಸಮಾಜದ ಬಡ ಹಾಗೂ ಹಿಂದುಳಿದ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಿದರು.

ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು. ಶ್ರೀಗಳು ಕೊಪ್ಪಳ ಭಾಗಕ್ಕೆ ಆಗಾಗ ಭೇಟಿ ನೀಡಿ ಆಶೀರ್ವಾದ ಹಾಗೂ ಮಾರ್ಗದರ್ಶನ ನೀಡಬೇಕು. ಶ್ರೀಗಳು ಪೀಠಾಧ್ಯಕ್ಷರಾದ ಬಳಿಕ ಸಮಾಜದಲ್ಲಿ ಬಹಳಷ್ಟು ಬದಲಾವಣೆ ಆಗಿದ್ದು ಇನ್ನಷ್ಟು ಸಮಾಜವನ್ನು ತಿದ್ದಬೇಕಿದೆ ಎಂದರು.

ಸಂಸದ ರಾಜಶೇಖರ ಹಿಟ್ನಾಳ್ ಮಾತನಾಡಿ, ಕನಕ ಗುರುಪೀಠ ಸ್ಥಾಪನೆ ಬಳಿಕ ರಾಜ್ಯದಲ್ಲಿ ಕುರುಬರಿಗೆ ಬೆಲೆ ಬಂದಿದೆ. ಈ ಮೂಲಕ ಸಂಘಟಿತರಾದರು. ಶ್ರೀಗಳು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಇಂತಹ ಗುರುಗಳು ಸಿಕ್ಕಿರುವುದು ಸಮಾಜದ ಸುದೈವ ಎಂದು ಹೇಳಿದರು.ನಿವೃತ್ತ ಅಧಿಕಾರಿ ಮಲ್ಲೇಶಪ್ಪ ಹೊರಪೇಟೆ, ನಿರಂಜನಾನಂದ ಪುರಿ ಸ್ವಾಮೀಜಿಗಳ ಇತಿಹಾಸ ಹಾಗೂ ನಡೆದು ಬಂದ ದಾರಿ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮಕ್ಕೂ ಮೊದಲು ಸ್ವಾಮೀಜಿಗಳು ಗವಿಮಠಕ್ಕೆ ಭೇಟಿ ನೀಡಿ ಗವಿಸಿದ್ಧೇಶ್ವರ ಶ್ರೀಗಳು ಕುಷಲೋಪರಿ ವಿಚಾರಿಸಿದರು. ನಂತರ ಬಸವೇಶ್ವರ ವೃತ್ತದಿಂದ ಕಾಳಿದಾಸ ಶಾಲೆ ವರೆಗೆ ಶ್ರೀಗಳನ್ನು ಸಾರೋಟದಲ್ಲಿ ಕೂಡ್ರೀಸಿ ಡೊಳ್ಳು, ಭಾಜ, ಭಜಂತ್ರಿ, ಕುಂಭ, ಕಳಸದೊಂದಿಗೆ ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು.

ಮಾಜಿ ಶಾಸಕ ಕೆ. ಬಸವರಾಜ ಇಟ್ನಾಳ್ ಅಧ್ಯಕ್ಷತೆ ವಹಿಸಿದ್ದರು. ಬಾದಿಮನಾಳ ಕನಕ ಗುರುಪೀಠದ ಶಿವಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಾಲುಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ವಿವಿಧ ತಾಲೂಕು ಕುರುಬರ ಸಂಘದ ಅಧ್ಯಕ್ಷ ಜಡಿಯಪ್ಪ ಬಂಗಾಳಿ, ಮಲ್ಲಣ್ಣ ಪಲ್ಲೇದ, ವೀರನಗೌಡ ಬಳೂಟಿಗಿ, ಯಮನಪ್ಪ ವಿಠಲಾಪುರ, ಮಂಜುನಾಥ್ ಕಡೆಮನಿ, ಮುಖಂಡರಾದ ಭರಮಪ್ಪ ಹಟ್ಟಿ, ಹನುಮೇಶ ಮುರಡಿ, ದ್ಯಾಮಣ್ಣ ನಂದ್ಯಾಪುರ ಉಪಸ್ಥಿತರಿದ್ದರು.