ಸಾರಾಂಶ
ಗದಗ: ಪರಿಶಿಷ್ಟ ಜಾತಿಗಳಲ್ಲಿನ ಒಳಮೀಸಲಾತಿಯ ಅವೈಜ್ಞಾನಿಕ ವರ್ಗೀಕರಣ ವಿರೋಧಿಸಿ, ಅ. 6ರಿಂದ ಗದಗಿನಲ್ಲಿ ಬೃಹತ್ ಪ್ರತಿಭಟನೆ ಹಾಗೂ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಅಧ್ಯಕ್ಷ ರವಿಕಾಂತ ಅಂಗಡಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹೋರಾಟ ಬಂಜಾರ ಸಮುದಾಯದ ವಿವಿಧ ಸಂಘಟನೆಗಳು ಹಾಗೂ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣವನ್ನು ವಿರೋಧಿಸುವ ಸಮುದಾಯಗಳ ಹೋರಾಟ ಸಮಿತಿಯ ಸಂಯುಕ್ತಾಶ್ರಯದಲ್ಲಿ (ನಾಯಕ, ಡಾವಸಾಣ, ಕಾರಭಾರಿ ಹಾಗೂ ಪಂಚರ ನೇತೃತ್ವದಲ್ಲಿ) ನಡೆಯಲಿದೆ ಎಂದರು.ನಿವೃತ್ತ ನ್ಯಾ. ನಾಗಮೋಹನದಾಸ ಏಕ ಸದಸ್ಯ ಆಯೋಗದ ವರದಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ಸುಪ್ರೀಂ ಕೋರ್ಟ್ ಮಾನದಂಡ ಉಲ್ಲಂಘನೆಯಾಗಿದೆ. ಇದು ನಿವೃತ್ತ ನ್ಯಾ. ಎ.ಜೆ. ಸದಾಶಿವ ಆಯೋಗದ ಮುಂದುವರಿದ ಭಾಗದಂತಿದೆ. ಶಿಕ್ಷಣ, ಉದ್ಯೋಗ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯ ಅಂಕಿ-ಅಂಶಗಳು ವಾಸ್ತವಿಕತೆಗೆ ದೂರವಾಗಿವೆ. ಕೆಲವು ಕುಟುಂಬಗಳು ಅಲಭ್ಯತೆಯ ಕಾರಣಕ್ಕೆ ಸಮೀಕ್ಷೆ ಅಪೂರ್ಣವಾಗಿದೆ ಎಂದು ಆಯೋಗವೇ ಹೇಳಿದ್ದರೂ, ಸರ್ಕಾರ ಈ ಅಪೂರ್ಣ ವರದಿಯನ್ನೇ ಜಾರಿಗೊಳಿಸಿದೆ ಎಂದರು.
ಮೀಸಲಾತಿಯಲ್ಲಿ ಅನ್ಯಾಯ: ಆಯೋಗ ಸಿದ್ಧಪಡಿಸಿದ ಕೋಷ್ಟಕದಲ್ಲಿ, ಡಿ ಗುಂಪಿನಲ್ಲಿರುವ ಲಂಬಾಣಿ ಮತ್ತು ಇತರ ಸಮುದಾಯವು 23 ಮಾನದಂಡಗಳಲ್ಲಿ ಕೇವಲ 6 ವಿಷಯಗಳಲ್ಲಿ ತುಸು ಮುಂದಿದೆ ಮತ್ತು ಉಳಿದ 17 ವಿಷಯಗಳಲ್ಲಿ ಸಿ ಗುಂಪಿಗಿಂತ ತುಂಬಾ ಹಿಂದುಳಿದಿದೆ ಎಂದು ತೋರಿಸಲಾಗಿದೆ. ಹೀಗಿದ್ದರೂ, ಡಿ ಗುಂಪಿಗೆ ಸಿ ಗುಂಪಿಗಿಂತ ಕಡಿಮೆ ಶೇಕಡವಾರು ಮೀಸಲಾತಿ ನೀಡಿರುವುದು ಯಾವ ಸಾಮಾಜಿಕ ನ್ಯಾಯ ಎಂದು ಪ್ರಶ್ನಿಸಿದರು.2011ರ ಜನಗಣತಿಯನ್ನು 2025ಕ್ಕೆ ಹೋಲಿಸುವಾಗ ಕೆಲವು ಜಾತಿಗಳ ಜನಸಂಖ್ಯೆ ಶೇ. 1.13ರಷ್ಟು ಹೆಚ್ಚಳ ತೋರಿಸಿ, ಇನ್ನು ಕೆಲ ಜಾತಿಗಳಿಗೆ ಶೇ. 10ರಿಂದ 12ರಷ್ಟು ಹೆಚ್ಚು ತೋರಿಸಿರುವುದರ ಹಿಂದಿನ ಮರ್ಮವನ್ನು ನಾಗಮೋಹನದಾಸ ಅವರು ಬಹಿರಂಗಪಡಿಸಬೇಕಿದೆ. ಜಾತಿಗಳನ್ನು ಹಿಂದುಳಿದ ಸಮುದಾಯಗಳೆಂದು ವರ್ಗೀಕರಿಸಿದ ಆಯೋಗವು, ಮೀಸಲಾತಿ ವರ್ಗೀಕರಿಸುವಾಗ ಆಸಂವಿಧಾನಿಕ ಪದಗಳನ್ನು ಬಳಸಿರುವುದು ದುರದೃಷ್ಟಕರ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ವಿಧಾನಸಭೆಯಲ್ಲಿ ಇದೇ ಪದಗಳನ್ನು ಬಳಸಿರುವುದು ಸಂವಿಧಾನಕ್ಕೆ ಮಾಡಿದ ಅಪಮಾನ ಎಂದು ದೂರಿದರು.
ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿ ಅ. 6ರಂದು ಬೆಳಗ್ಗೆ 11ಕ್ಕೆ ಮಹಾತ್ಮಗಾಂಧಿ ಸರ್ಕಲ್‌ನಿಂದ ಗದಗ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ಮೂಲಕ ಬೃಹತ್ ಪ್ರತಿಭಟನೆ ನಡೆಸಿ, ಆನಂತರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ರವಿಕಾಂತ ಅಂಗಡಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಟಿ.ಎಲ್. ನಾಯಕ, ಚಂದು ನಾಯಕ, ಶಿವಪ್ಪ ನಾಯಕ, ಕೇಶಪ್ಪ ಕಾರಬಾರಿ, ಕುಬೇರಪ್ಪ ನಾಯಕ, ಖೀಮಪ್ಪ ನಾಯಕ, ತೇಜು ನಾಯಕ, ಶಿವಪತ್ರ ನಾಯಕ, ಭೋವಿ ವಡ್ಡರ ಸಂದಕದ, ಪರಮೇಶ ನಾಯಕ, ಸುರೇಶ ಪೂಜಾರ ಇದ್ದರು.