ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಹಾಗೂ ಸೋಮನಹಳ್ಳಿ ಗ್ರಾಮಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬುಡಮೇಲು ಮಾಡುವ ಹುನ್ನಾರ ನಡೆಸಿದ್ದಾರೆ. ಈ ಸಂಬಂಧ ಹೈಕೋರ್ಟ್‌ನ ಮಧ್ಯಂತರ ಆದೇಶ ದೊರಕುವವರಿಗೆ ಹೋರಾಟವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ.
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಗೆಜ್ಜಲಗೆರೆ ಗ್ರಾಪಂ ಅನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿರುವುದನ್ನು ರದ್ದುಪಡಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಕ್ಷೇತ್ರದ ಶಾಸಕ ಕೆ.ಎಂ.ಉದಯ್ ವಿರುದ್ಧ ಸೋಮವಾರ ಬೃಹತ್ ಅಂಚೆ ಪತ್ರ ಚಳವಳಿ ನಡೆಸಿದರು.ಗ್ರಾಪಂ ಎದುರು ಕಳೆದ 15 ದಿನಗಳಿಂದ ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಧರಣಿಗೆ ಮಂಡ್ಯ ನಗರದ ಪ್ರಗತಿಪರ ಮಹಿಳಾ ಸಂಘಟನೆಗ ಮುಖಂಡರು ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಧರಣಿಯಲ್ಲಿ ಪಾಲ್ಗೊಂಡಿರುವ ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರೂ ಗ್ರಾಮವನ್ನು ನಗರಸಭೆ ವ್ಯಾಪ್ತಿಯಿಂದ ಕೈ ಬಿಡುವಂತೆ ಒತ್ತಾಯಿಸಿ ಸ್ವಯಂ ಪ್ರೇರಣೆಯಿಂದ ತಮ್ಮ ಹಸ್ತಾಕ್ಷರದೊಂದಿಗೆ ಅಂಚೆಪತ್ರ ಬರೆದು ಶಾಸಕರ ನಿಲುವನ್ನು ತೀವ್ರವಾಗಿ ವಿರೋಧಿಸಿದರು.ನಂತರ ಗ್ರಾಪಂ ಎದುರು ಪಂಚಾಯ್ತಿ ಜನಪ್ರತಿನಿಧಿಗಳು, ಸಂಘಟನೆಗಳ ಮುಖಂಡರು ಹಾಗೂ ಗ್ರಾಮಸ್ಥರು ಪತ್ರ ಪ್ರದರ್ಶನ ಮಾಡಿ ಕೆಲಕಾಲ ಪ್ರತಿಭಟನೆ ನಡೆಸಿದರು. ಗ್ರಾಪಂ ಜನಪ್ರತಿನಿಧಿಗಳು, ಸಂಘಟನೆಗಳ ಮುಖಂಡರು ಹಾಗೂ ಗ್ರಾಮಸ್ಥರು ಶಾಸಕದ್ವಯರಾದ ಉದಯ್ ಹಾಗೂ ದಿನೇಶ್ ಗೂಳಿಗೌಡ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಗ್ರಾಪಂ ಆವರಣದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಅಂಚೆ ಕಚೇರಿಗೆ ತೆರಳಿ ತಾವು ಬರೆದ ಪತ್ರಗಳನ್ನು ತಾಲೂಕು ಕಚೇರಿ ಆವರಣದಲ್ಲಿರುವ ಶಾಸಕರ ಕಚೇರಿಗೆ ರವಾನಿಸಿದರು.ನಂತರ ಧರಣಿ ಸ್ಥಳದಲ್ಲಿ ಮಾತನಾಡಿದ ರೈತಪರ ಹೋರಾಟಗಾರ್ತಿ ಸುನಂದ ಜಯರಾಮ್, ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಹಾಗೂ ಸೋಮನಹಳ್ಳಿ ಗ್ರಾಮಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬುಡಮೇಲು ಮಾಡುವ ಹುನ್ನಾರ ನಡೆಸಿದ್ದಾರೆ. ಈ ಸಂಬಂಧ ಹೈಕೋರ್ಟ್‌ನ ಮಧ್ಯಂತರ ಆದೇಶ ದೊರಕುವವರಿಗೆ ಹೋರಾಟವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದರು.
ಶಾಸಕದ್ವಯರಾದ ಉದಯ್ ಹಾಗೂ ದಿನೇಶ್ ಗೂಳಿಗೌಡ ಅವರು ಗೆಜ್ಜಲಗೆರೆ ಗ್ರಾಮಸ್ಥರ ಹೋರಾಟವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಚಳವಳಿ ಸ್ವರೂಪವನ್ನು ತೀವ್ರತೆಗೆ ತೆಗೆದುಕೊಂಡು ಹೋಗುವ ಮೂಲಕ ಗ್ರಾಮದಲ್ಲಿ ಕಳೆದ 1982ರಲ್ಲಿ ನಡೆದ ಹೋರಾಟದ ಮಾದರಿಯಲ್ಲಿ ನಡೆಸಲಾಗುವುದು ಎಂದು ಎಚ್ಚರಿಸಿದರು.ಗ್ರಾಪಂ ಅಧ್ಯಕ್ಷೆ ರಾಧಾ, ಮುಖಂಡ ಜಿ.ಟಿ.ಚಂದ್ರಶೇಖರ್ ಮಾತನಾಡಿ, ನಗರಸಭೆ ವ್ಯಾಪ್ತಿಗೆ ಗ್ರಾಪಂ ಅನ್ನು ಸೇರ್ಪಡೆ ಮಾಡಲು ಗ್ರಾಪಂ ಸದಸ್ಯರ ಸಭೆಯಲ್ಲಿ ಹಾಗೂ ಗ್ರಾಮ ಸಭೆಗಳಲ್ಲಿ ಮುಖಂಡರು ಮತ್ತು ಗ್ರಾಮಸ್ಥರ ವಿರೋಧವಿದ್ದರೂ ಸಹ ಕೆಲವು ಗ್ರಾಮ ಪಂಚಾಯ್ತಿ ಅಧ್ಯಕ್ಷರು ಶಾಸಕರ ಚೇಲಾಗಳಂತೆ ವರ್ತಿಸಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ನಗರಸಭೆ ಸೇರ್ಪಡೆಗೆ ಸದಸ್ಯರ ಅನುಮೋದನೆ ಪಡೆಯಲಾಗಿದೆ ಎಂದು ನಿರ್ಣಯ ಅಂಗೀಕರಿಸಿ ತಮ್ಮನ್ನು ಆಯ್ಕೆ ಮಾಡಿದ ಗ್ರಾಮದ ಜನರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಂಡ್ಯ ಪ್ರಗತಿಪರ ಮಹಿಳಾ ಸಂಘಟನೆಯ ಜ್ಯೋತಿ, ಪ್ರೇಮ, ಸುಶೀಲಮ್ಮ, ಪದ್ಮಾ, ಶ್ರೀಲತಾ, ಗೆಜ್ಜಲಗೆರೆ ಸಂಘಟನೆಯ ಕಮಲಮ್ಮ, ಸತ್ಯ ಪ್ರೇಮ ಕುಮಾರಿ, ರೈತ ಸಂಘದ ಜಿ.ಎ .ಶಂಕರ್, ಜಿಎಸ್ ರಾಮಲಿಂಗಯ್ಯ, ಜಿ. ಎಚ್.ವೀರಪ್ಪ, ಜಿ.ಕೆ.ಗುರುಮೂರ್ತಿ, ಮೋಹನ, ಡಾಬಾ ಕಿಟ್ಟಿ ಸೇರಿದಂತೆ ಗ್ರಾಮದ ನೂರಾರು ಮಹಿಳೆಯರು ಹಾಗೂ ಮುಖಂಡರುಗಳು ಭಾಗವಹಿಸಿದ್ದರು.