ಹೊಸಪೇಟೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ತಕ್ಷಣವೇ ನೋಂದಣಿ ಮಾಡಿಕೊಳ್ಳಬೇಕು. ತಪ್ಪಿದಲ್ಲಿ ಆರ್‌ಎಸ್‌ಎಸ್ ಸಂಘಟನೆ ನಿಷೇಧಿಸುವ ಕೆಲಸ ಆಗಬೇಕು ಎಂದು ಒತ್ತಾಯಿಸಿ ನಗರದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ಸೇರಿದಂತ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಯಿತು.
ನಗರದ ಗಾಂಧಿಚೌಕದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತಕ್ಕೆ ಬಂದು ತಲುಪಿ, ಬಹಿರಂಗ ಸಭೆ ನಡೆಸಿ ಆರ್‌ಎಸ್‌ಎಸ್ ನೋಂದಣಿಗೆ ಒತ್ತಾಯಿಸಿದರು.ಸೋಮಶೇಖರ್ ಬಣ್ಣದಮನೆ ಮಾತನಾಡಿ, ಆರ್‌ಎಸ್ಎಸ್ ನೋಂದಣಿ ಮಾಡಿಕೊಳ್ಳಬೇಕು ಎಂಬುದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಒತ್ತಾಯ. ದೇಶದ ಜನರೂ ಆರ್‌ಎಸ್ಎಸ್ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ದೇಶದ ವಿವಿಧ ರಾಜ್ಯಗಳಲ್ಲಿ ಒತ್ತಾಯಿಸುತ್ತಿದ್ದಾರೆ. ಇದೊಂದು ದೊಡ್ಡ ಮಟ್ಟದ ಚಳವಳಿಯಾಗಿ ದೇಶಾದ್ಯಂತ ನಡೆಯಲಿದೆ. ಆರ್‌ಎಸ್‌ಎಸ್‌ನವರು ಯಾವುದೇ ಕಾರಣಕ್ಕೂ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಮರಡಿ ಜಂಬಯ್ಯ ನಾಯಕ ಮಾತನಾಡಿ, ಸಂವಿಧಾನವನ್ನು ಆರ್‌ಎಸ್‌ಎಸ್ ಒಪ್ಪಿಕೊಳ್ಳುವುದಾದರೆ ಸಂಘವನ್ನು ನೋಂದಣಿ ಮಾಡಿಕೊಳ್ಳಲೇಬೇಕು. ಇಲ್ಲವಾದರೆ ಅನೇಕ ಅನುಮಾನಗಳಿಗೆ ಅವಕಾಶ ನೀಡಿದಂತಾಗುತ್ತದೆ. ಆರ್‌ಎಸ್‌ಎಸ್ ದೇಶದ ಒಳಗಿನಿಂದ ಮಾತ್ರವಲ್ಲ, ಹೊರದೇಶಗಳ ಕಾಣದ ವ್ಯಕ್ತಿ ಹಾಗೂ ಸಂಘಟನೆಗಳಿಂದಲೂ ಆಪಾರ ಪ್ರಮಾಣದ ಹಣವನ್ನು ಕ್ರೂಢೀಕರಿಸುತ್ತಿದೆ. ದೇಶ ಹಾಗೂ ವಿದೇಶಿ ಮೂಲಗಳಿಂದ ಹಣಕಾಸು ನೆರವು ಪಡೆಯುತ್ತಿರುವ ಸಂಘಟನೆಯ ದೇಶದ ಕಾನೂನಿನ ಅಡಿಯಲ್ಲಿ ತನ್ನ ಲೆಕ್ಕಪತ್ರವನ್ನು ಸಲ್ಲಿಸುವುದು ದೇಶದ ಭದ್ರತೆಯ ದೃಷ್ಟಿಯಿಂದ ಅವಶ್ಯಕವಾಗಿದೆ ಎಂದು ಹೇಳಿದರು.ವಕೀಲ ಎಂ. ಕರುಣಾನಿಧಿ ಮಾತನಾಡಿ, ಆರ್‌ಎಸ್‌ಎಸ್‌ನವರು ದೇಶ ಭಕ್ತಿ ಸಂಘಟನೆ ಎಂದು ಹೇಳಿಕೊಳ್ಳುತ್ತಿದ್ದಾರೆ ಹೊರತು, ದೇಶಕ್ಕಾಗಿ ಏನೂ ಮಾಡಿಲ್ಲ. ಜಾತಿ-ಜಾತಿಗಳ ನಡುವೆ ಕೋಮು ದ್ವೇಷ ಬಿತ್ತುವುದೇ ಆರ್‌ಎಸ್ಎಸ್‌ನವರ ಕೆಲಸವಾಗಿದೆ. ದೇಶ ದ್ರೋಹಿ ಸಂಘಟನೆಯಾಗಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ, ಮುಖಂಡರಾದ ಡಿ. ವೆಂಕಟರಮಣ, ಮಾರೆಣ್ಣ, ಸ್ಥಳೀಯ ಮುಖಂಡರಾದ
ಕೃಷ್ಣ ಮೊದಲಿಯಾರ್, ಸಣ್ಣ ಮಾರೆಪ್ಪ, ಆರ್. ಭಾಸ್ಕರ್ ರೆಡ್ಡಿ, ಬಿಸಾಟಿ ತಾಯಪ್ಪ ನಾಯಕ, ಕೆ.ಎಂ. ಸಂತೋಷ, ಎನ್. ಯಲ್ಲಾಲಿಂಗ, ವೈ.ರಾಮಚಂದ್ರ ಬಾಬು, ಮಹೇಶ್, ಕಲ್ಯಾಣಯ್ಯ, ವಸಂತ ಕಲಾಲ್, ಶಿವಕುಮಾರ್, ಸದ್ದಾಂ, ರಾಮ್ ಮೋಹನ್, ಪ್ರಮೋದ್ ಪುಣ್ಯಮೂರ್ತಿ, ಅಂಜನಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಶಿರಸ್ತೇದಾರ್ ನವೀನ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮತ್ತು ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.