ಹೂವಿನಹಡಗಲಿ: ಪಟ್ಟಣದ ರಂಗಭಾರತಿ ರಂಗ ಮಂದಿರದಲ್ಲಿನ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ ಅವರ ಕಂಚಿನ ಪುತ್ಥಳಿಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ ಎಂದು, ಎಂ.ಪಿ. ಪ್ರಕಾಶ ಪ್ರತಿಷ್ಠಾನ ಕಾರ್ಯದರ್ಶಿ ಶಾಂತಮೂರ್ತಿ ಬಿ. ಕುಲಕರ್ಣಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಎಂ.ಪಿ. ಪ್ರಕಾಶ ಪ್ರತಿಷ್ಠಾನ, ರಂಗಭಾರತಿ ಮತ್ತು ಎಂ.ಪಿ. ಪ್ರಕಾಶ ಸಮಾಜಮುಖಿ ಟ್ರಸ್ಟ್ ಸಹಯೋಗದಲ್ಲಿ, ಎಂ.ಪಿ. ಪ್ರಕಾಶರ 86ನೇ ಜನ್ಮ ದಿನೋತ್ಸವದ ಅಂಗವಾಗಿ, ಸಂಗೀತ, ನೃತ್ಯ, ನಾಟಕೋತ್ಸವ ಸೇರಿ ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದರು.ಜು. 11ರಂದು ಸುತ್ತೂರು ಸುಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಜಂಗಮ ಕ್ಷೇತ್ರ ಲಿಂಗನಾಯಕನಹಳ್ಳಿ ಚನ್ನವೀರ ಶಿವಯೋಗಿ, ಗವಿಮಠದ ಡಾ. ಹಿರಿಶಾಂತ ವೀರ ಸ್ವಾಮೀಜಿ, ಹಿರೇಮಲ್ಲನಕೆರೆ ಮಠದ ಅಭಿನವ ಚನ್ನಬಸವ ಸ್ಲಾಮೀಜಿ ನೇತೃತ್ವ ವಹಿಸಲಿದ್ದಾರೆ.
ಮಾಜಿ ಸಿಎಂ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಮಾಜಿ ಸಚಿವ ಅಮರೇಗೌಡ ಬಯ್ಯಾಪುರ, ಶಾಸಕ ಸಂತೋಷ ಲಾಡ್, ಸಂಸದ ಈ. ತುಕಾರಾಮ, ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಶಾಸಕರಾದ ಮಧು ಬಂಗಾರಪ್ಪ, ಕೃಷ್ಣನಾಯ್ಕ, ಗಣೇಶ ಪ್ರಸಾದ್, ಲತಾ ಮಲ್ಲಿಕಾರ್ಜುನ, ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ಮಾಜಿ ಸಚಿವೆ ಡಾ. ಲೀಲಾದೇವಿ ಆರ್.ಪ್ರಸಾದ್ ಇರಲಿದ್ದಾರೆ.ರಂಗಭಾರತಿ ಸ್ಥಳ ದಾನಿ ಹಣ್ಣಿ ಸರ್ವಮಂಗಳಮ್ಮ ವೀರಭದ್ರಪ್ಪ, ಕಂಚಿನ ಪುತ್ಥಳಿ ಶಿಲ್ಪಿ ಶಿವಕುಮಾರ ಬಿ.ಸಿ., ವ್ಯವಸ್ಥಾಪಕ ನಿರ್ದೇಶಕ ಚಂದ್ರಕಾಂತ್ ಪಾಟೀಲ್, ಗುತ್ತಿಗೆದಾರ ಮುರುಗೇಶ ಎಸ್. ತುರುಕಾಣಿ ಅವರನ್ನು ಸನ್ಮಾನಿಸಲಾಗುವುದು. ಕರ್ನಾಟಕ ನಾಟಕ ಅಕಾಡೆಮಿಯಿಂದ ರಂಗ ದಿಗ್ಗಜ ಎಂ.ಪಿ. ಪ್ರಕಾಶ ಹವ್ಯಾಸಿ ನಾಟಕೋತ್ಸವ ಇದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಜಿ ನಿರ್ದೇಶಕ ಐ.ಎಂ. ವಿಠ್ಠಲಮೂರ್ತಿ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ಲ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯ ಕುಲಪತಿ ಕೆ. ರಾಮಕೃಷ್ಣಯ್ಯ, ಮಾಜಿ ಸಚಿವರಾದ ಎಸ್.ಎಸ್. ಪಾಟೀಲ್, ಪಿ.ಜಿ.ಆರ್. ಸಿಂಧ್ಯ, ರಾಜ್ಯಸಭಾ ಮಾಜಿ ಸದಸ್ಯ ಅನಿಲ್ ಹೆಗ್ಡೆ, ಸಂಗೀತ ಮತ್ತು ನೃತ್ಯ ಕಲಾ ಅಕಾಡೆಮಿ ಅಧ್ಯಕ್ಷ ಶುಭ ಧನಂಜಯ್, ತಹಸೀಲ್ದಾರ್ ಕೆ.ಎಂ. ಗುರುಬಸವರಾಜ, ಮಾಜಿ ಶಾಸಕರಾದ ನಂದಿಹಳ್ಳಿ ಹಾಲಪ್ಪ, ಬಿ. ಚಂದ್ರನಾಯ್ಕ ಭಾಗವಹಿಸಲಿದ್ದಾರೆ.
ಎಂ.ಡಿ. ಪಲ್ಲವಿ ಮತ್ತು ತಂಡದಿಂದ ಗಾನ ವೈಭವ, ಎಂ.ಪಿ. ಪ್ರಕಾಶ ಕಲಾನಿಕೇತನ ವಿದ್ಯಾರ್ಥಿಗಳಿಂದ ನೃತ್ಯ ವೈಭವ, ಹುಲುಗಪ್ಪ ಕಟ್ಟಿಮನಿ ನಿರ್ದೇಶನದ ಸೂರ್ಯ ಶಿಕಾರಿ ನಾಟಕ ರಂಗಭಾರತಿ ಕಲಾವಿದರಿಂದ ಪ್ರದರ್ಶನವಾಗಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಾನಪದ ಕಲಾ ಪ್ರದರ್ಶನ ಜರುಗಲಿದೆ.
ಸಮಾರೋಪದಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತು ಅಧ್ಯಕ್ಷ ಡಾ. ಬಿ.ಎಲ್. ಶಂಕರ್, ಹಂಪಿ ಕನ್ನಡ ವಿವಿ ಸಹಾಯಕ ಕುಲಸಚಿವ ಎಂ.ಎಂ. ಶಿವಪ್ರಕಾಶ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಶಿವನಾಯಕ ದೊರೆ ಭಾಗವಹಿಸಲಿದ್ದಾರೆ. ಈ ವೇಳೆ ರಂಗಭಾರತಿ ಕಾರ್ಯಾಧ್ಯಕ್ಷೆ ಎಂ.ಪಿ. ಸುಮಾ ವಿಜಯ್ ಉಪಸ್ಥಿತರಿದ್ದರು.