ನದಿ ತಿರುವು ಯೋಜನೆಯು ಜಿಲ್ಲೆಯ ಜನರಲ್ಲಿ ಆತಂಕ ಉಂಟು ಮಾಡುತ್ತಿದ್ದು, ಈ ಭಾಗದ ಅಳಿವು-ಉಳಿವಿನ ಸಂಗತಿಯಾಗಿದೆ.

ಕನ್ನಡಪ್ರಭ ವಾರ್ತೆ ಶಿರಸಿ

ನದಿ ತಿರುವು ಯೋಜನೆಯು ಜಿಲ್ಲೆಯ ಜನರಲ್ಲಿ ಆತಂಕ ಉಂಟು ಮಾಡುತ್ತಿದ್ದು, ಈ ಭಾಗದ ಅಳಿವು-ಉಳಿವಿನ ಸಂಗತಿಯಾಗಿದೆ. ಈ ಹಿನ್ನೆಲೆ ಪ್ರಸ್ತಾಪಿತ ಬೇಡ್ತಿ-ವರದಾ ಮತ್ತು ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಗಳನ್ನು ಕೈಬಿಡುವಂತೆ ಆಗ್ರಹಿಸಿ, ಜ.11ರಂದು ಮಧ್ಯಾಹ್ನ 2 ಗಂಟೆಯಿಂದ ನಗರದ ಎಂಇಎಸ್ ಕಾಲೇಜಿನ ಮೈದಾನದಲ್ಲಿ ಬೃಹತ್ ಜನ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕು ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಕರೆ ನೀಡಿದರು.

ಸೋಮವಾರ ನಗರದ ಟಿಎಂಎಸ್‌ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬೃಹತ್ ಜನ ಸಮಾವೇಶದ ಕುರಿತು ಮಾಹಿತಿ ನೀಡಿದರು. ಬೇಡ್ತಿ-ವರದಾ ನದಿ ಜೋಡಣೆಯ ವಿಸ್ತೃತ ವರದಿ ಸರ್ಕಾರದ ಮಟ್ಟದಲ್ಲಿ ತಯಾರಿ ಹಂತದಲ್ಲಿದೆ. ಅಘನಾಶಿನಿ-ವೇದಾವತಿ ನದಿ ಜೋಡಣೆಯ ಪ್ರಸ್ತಾವನೆ ಇದೆ. ಇವುಗಳನ್ನು ವಿರೋಧಿಸಿ ಸಭೆ, ಪ್ರತಿಭಟನೆ ನಡೆಯುತ್ತಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರುವ ಬಗ್ಗೆ ವರದಿ ಸಿದ್ಧಪಡಿಸಿದ್ದಾರೆ. ನಾವು ಎದ್ದು ನಿಲ್ಲುವುದು ಅನಿವಾರ್ಯವಾಗಿದೆ.‌ ‌ಹಾವೇರಿ, ರಾಯಚೂರು, ಗದಗ ಜಿಲ್ಲೆಗಳಿಗೆ ಕೃಷಿ ಭೂಮಿಗೆ ನೀರಾವರಿ, ಕುಡಿಯುವ ನೀರು, ಕೈಗಾರಿಕೆ ಎಂದು ಹೇಳುತ್ತಿದ್ದಾರೆ. 3 ಕಡೆಗಳಲ್ಲಿ ಜಲಾಶಯ ನಿರ್ಮಾಣವಾಗಲಿದ್ದು, ಬೇಡ್ತಿ ಸೇತುವೆ ಬಳಿಯ ಸುರೆಮನೆ, ಪಟ್ಟಣಹೊಳೆ ಮತ್ತು ಸಹಸ್ರಲಿಂಗ ಬಳಿ ಡ್ಯಾಂ ನಿರ್ಮಾಣವಾಗಲಿದ್ದು, ಅರಣ್ಯ ಹಾಗೂ ಕೃಷಿ ಜಮೀನಿನಲ್ಲಿ ಸುರಂಗ, ಕಾಲುವೆ ನಿರ್ಮಾಣ ಮಾಡಲಾಗುತ್ತದೆ. ಇದರಿಂದ ಬಹಳ ದೊಡ್ಡ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾಲುವೆ, ಜಲಾಶಯ ನಿರ್ಮಾಣವಾಗವುದರಿಂದ ಅನೇಕ ವಿನಾಶ ಆಗಲಿದೆ. ಈ ಯೋಜನೆಯನ್ನು ತಪ್ಪಿಸಬೇಕಾಗಿರುವುದು ಅನಿವಾರ್ಯ. ದುಷ್ಪರಿಣಾಮಗಳ ಬಗ್ಗೆ ಶಿರಸಿ ಹಾಗೂ ಬೆಂಗಳೂರಿನಲ್ಲಿ ವಿಜ್ಞಾನಿಗಳ ವಿಚಾರ ಸಂಕಿರಣ ನಡೆದಿದೆ. ಯೋಜನೆ ಜಾರಿಗೆ ಬಂದರೆ ನಮ್ಮ ಜಿಲ್ಲೆಯು ನೀರಿನ ಕೊರತೆಯಿಂದ ಬಳಲಿದೆ. ಅಂತರ್ಜಲ ಮಟ್ಟ ಕುಸಿಯಲಿದೆ. ಶಿರಸಿ, ಯಲ್ಲಾಪುರ ಹಾಗೂ ಅಂಕೋಲಾ ತಾಲೂಕಿನಲ್ಲಿ ಕೃಷಿ ಚಟುವಟಿಕೆ ಮೇಲೆ ಪ್ರಭಾವ ಬೀರಲಿದೆ. ಲಕ್ಷಾಂತರ ಜನ ಕುಡಿಯುವ ನೀರಿಗೆ ಸಮಸ್ಯೆಯಾಗಲಿದೆ. ಜನಾಂದೋಲನ ಮೂಲಕ ಹೋರಾಟ ಮಾಡಬೇಕಿದೆ ಎಂದರು.

ಜ.11ರ ಸಮಾವೇಶದಲ್ಲಿ ಮಠಾಧೀಶರು, ನ್ಯಾಯಾಧೀಶರು, ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. 20 ಸಾವಿರ ಜನರು ಸೇರುವ ನಿರೀಕ್ಷೆಯಿದೆ. ಸಮಾವೇಶದ ನಂತರ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಿದ್ದೇವೆ. ವೈಜ್ಞಾನಿಕ ಚಿಂತನೆ, ಜನಪ್ರತಿನಿಧಿಗಳ ಮನವೋಲಿಕೆ, ಜನಾಂದೋಲ, ನ್ಯಾಯಾಲಯದಲ್ಲಿ ಹೋರಾಟ ಬರಲಿದೆ.‌ ಅದಕ್ಕೂ ಸಿದ್ಧತೆ ನಡೆಸಿದ್ದೇವೆ ಎಂದು ಮಾಹಿತಿ ನೀಡಿದರು.

ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ನದಿ ಜೋಡಣೆ ಯೋಜನೆ ವಿರೋಧಿಸಿ ಕೇಂದ್ರ ಸರ್ಕಾರದ ಬಳಿ ನಿಯೋಗ ತೆರಳಲಿದೆ. ಮುಖ್ಯಮಂತ್ರಿಯನ್ನು ಜನಪ್ರತನಿಧಿಗಳ ಜತೆಗೂಡಿ ಬೇಡ್ತಿ ಸಮಿತಿ ಪ್ರಮುಖರು ಭೇಟಿ ಮಾಡಿದ್ದಾರೆ. ಕೇಂದ್ರ ಸಚಿವರಾದ ಎಚ್‌.ಡಿ. ಕುಮಾರಸ್ವಾಮಿ, ವಿ.ಸೋಮಣ್ಣ ಅವರನ್ನೂ ಭೇಟಿ ಮಾಡಲಾಗಿದೆ. ರಾಜಕೀಯ ಪಕ್ಷದ ಮುಖಂಡರು ನಮ್ಮ ಆಂದೋಲನದಲ್ಲಿ ಒಗ್ಗಟ್ಟಿನಿಂದ ಪಾಲ್ಗೊಳ್ಳುತ್ತಿದ್ದಾರೆ. ಜ. 11ರಂದು ನಡೆಯಲಿರುವ ಸಮಾವೇಶ ಬಹುದೊಡ್ಡ ಸಂದೇಶವನ್ನು ನಾಡಿಗೆ ನೀಡಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಟಿಎಂಎಸ್ ಅಧ್ಯಕ್ಷ ಜಿ.ಟಿ. ಹೆಗಡೆ ತಟ್ಟೀಸರ, ಜಿ.ಎಂ. ಹೆಗಡೆ ಮುಳಖಂಡ, ಶ್ರೀಮಠದ ಅಧ್ಯಕ್ಷ ವಿ.ಎನ್‌. ಹೆಗಡೆ ಬೊಮ್ನಳ್ಳಿ ಮತ್ತಿತರರು ಇದ್ದರು.