ಅನಾಥೆಯ ಬಾಳಿಗೆ ಬೆಳಕಾದ ಮಾತೃಛಾಯ ಬಾಲಕಲ್ಯಾಣ ಕೇಂದ್ರ

| Published : Nov 22 2024, 01:16 AM IST

ಸಾರಾಂಶ

ತಂದೆ-ತಾಯಿಯಿಲ್ಲದಂತಹ ಮಕ್ಕಳ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿರುವ ಬಾಲ ಕಲ್ಯಾಣ ಕೇಂದ್ರ ಈಗಾಗಲೇ 6 ಯುವತಿಯರಿಗೆ ಕಲ್ಯಾಣ ಭಾಗ್ಯ ಕಲ್ಪಿಸಿ ಹೊಸ ಜೀವನ ನೀಡಿದೆ. ಇದೇ 7ನೇ ಮದುವೆ ಆಗಲಿದೆ.

ಹುಬ್ಬಳ್ಳಿ:

ಇಲ್ಲಿನ ಸೇವಾಭಾರತಿ ಟ್ರಸ್ಟ್‌ನ ಮಾತೃಛಾಯಾ ಬಾಲ ಕಲ್ಯಾಣ ಕೇಂದ್ರದ ಅನಾಥೆಯೋರ್ವಳಿಗೆ ಈಗ ಕಲ್ಯಾಣಭಾಗ್ಯ ಕಲ್ಪಿಸಲಾಗುತ್ತಿದೆ. ಕಳೆದ 12 ವರ್ಷಗಳಿಂದ ಬಾಲ ಕಲ್ಯಾಣ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಅನ್ನಪೂರ್ಣ ಎಂಬ ಯುವತಿಯು ನ. 23ಕ್ಕೆ ಹಸಮಣೆ ಏರಲು ಸಿದ್ಧಳಾಗಿದ್ದಾಳೆ. ವಿವಾಹ ಕಾರ್ಯವನ್ನು ಸಂಪೂರ್ಣ‍ವಾಗಿ ಬಾಲಕಲ್ಯಾಣ ಕೇಂದ್ರ ವಹಿಸಿಕೊಂಡಿರುವುದು ವಿಶೇಷ. ಈಗಾಗಲೇ 6 ಅನಾಥೆಯರಿಗೆ ವಿವಾಹ ಭಾಗ್ಯ ಕಲ್ಪಿಸಿದ್ದು, ಇದೀಗ 7ನೇ ವಿವಾಹ ಕಾರ್ಯಕ್ರಮವಾಗಿದೆ.

ಈ ಕುರಿತು ಮಾಹಿತಿ ನೀಡಿದ ಕೇಂದ್ರದ ಅಧ್ಯಕ್ಷೆ ಕಮಲಾ ಜೋಶಿ, ತಂದೆ-ತಾಯಿಯಿಲ್ಲದಂತಹ ಮಕ್ಕಳ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿರುವ ಬಾಲ ಕಲ್ಯಾಣ ಕೇಂದ್ರ ಈಗಾಗಲೇ 6 ಯುವತಿಯರಿಗೆ ಕಲ್ಯಾಣ ಭಾಗ್ಯ ಕಲ್ಪಿಸಿ ಹೊಸ ಜೀವನ ನೀಡಿದೆ. ಇದೀಗ ಕಳೆದ 12 ವರ್ಷಗಳಿಂದ ಕೇಂದ್ರದಲ್ಲಿ ಆಶ್ರಯ ಪಡೆದು ಬಿಎ ಪದವಿ ಪೂರೈಸಿರುವ ಅನ್ನಪೂರ್ಣ ಎಂಬ ಯುವತಿಯ ವಿವಾಹಕ್ಕೆ ಸಿದ್ಧತೆಗಳು ನಡೆದಿವೆ. ನ. 23 ರಂದು ಬೆಳಗ್ಗೆ 8.30ಕ್ಕೆ ಇಲ್ಲಿನ ಕೇಶ್ವಾಪುರ ಬನಶಂಕರಿ ಬಡಾವಣೆಯಲ್ಲಿರುವ ಸೇವಾ ಸದನದಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದರು.

ಅನ್ನಪೂರ್ಣ ಸದ್ಯಕ್ಕೆ ಹಿಂದೂ ಸೇವಾ ಪ್ರತಿಷ್ಠಾನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಯುವತಿಯ ಕೈಹಿಡಿಯಲಿರುವ ವಿನೋದಕುಮಾರ ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರು ಮೂಲದವರು. ಬಿ.ಟೆಕ್ ಪದವೀಧರರಾಗಿರುವ ವಿನೋದಕುಮಾರ ಹೈದರಬಾದ್‌ನಲ್ಲಿ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದಾರೆ. ಕೇಂದ್ರದ ಪ್ರಮುಖರೇ ತಂದೆ-ತಾಯಿ ಹಾಗೂ ಬಂಧುಗಳ ಸ್ಥಾನದಲ್ಲಿ ನಿಂತು ಮದುವೆ ಶಾಸ್ತ್ರಗಳನ್ನು ನೆರವೇರಿಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಕನ್ಯೆಗಾಗಿ ವರನ ಕುಟುಂಬದವರು ಕೇಂದ್ರಕ್ಕೆ ಬಂದಿದ್ದರು. ಅನ್ನಪೂರ್ಣಳ ತಂದೆ-ತಾಯಿ ಸ್ಥಾನದಲ್ಲಿ ನಿಂತು ವರನ ಕುಟುಂಬ ಅವರ ಹಿನ್ನೆಲೆಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರ ಇದಕ್ಕೆ ಒಪ್ಪಿಕೊಂಡಿದ್ದೇವೆ. ವರ ಹಾಗೂ ವಧುವಿಗೆ ಈ ಸಂಬಂಧ ಇಷ್ಟವಾಗಿದ್ದು, ಅವರ ಇಚ್ಛೆಯಂತೆ ನಾವೇ ಮದುವೆ ಮಾಡಿಕೊಡುತ್ತಿದ್ದೇವೆ. ಅನ್ನಪೂರ್ಣಳನ್ನು ಕಳೆದ 12 ವರ್ಷಗಳ ಹಿಂದೆ ನಮ್ಮ ಕೇಂದ್ರಕ್ಕೆ ಅವರ ಸಂಬಂಧಿಯೊಬ್ಬರು ಬಿಟ್ಟು ಹೋಗಿದ್ದರು. ಅವಳಿಗೆ ತಂದೆ-ತಾಯಿ ಇಲ್ಲದ ಕಾರಣ ನಾವೇ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಮದುವೆ ಮಾಡುತ್ತಿದ್ದೇವೆ ಎಂದರು.

ಸೇವಾ ಭಾರತಿ ಟ್ರಸ್ಟ್‌ನ ವಿಶ್ವಸ್ಥ ಮಂಡಳಿಯ ಸದಸ್ಯರಾಗಿರುವ ಗದಗ ಮೂಲದ ಚನ್ನವೀರಪ್ಪ ಚನ್ನಪ್ಪನವರ ದಂಪತಿ ಕನ್ಯಾದಾನ ಮಾಡಲಿದ್ದಾರೆ. ಈಗಾಗಲೇ 6 ಹೆಣ್ಣುಮಕ್ಕಳನ್ನು ಕೇಂದ್ರದಲ್ಲಿ ಬೆಳೆಸಿ ಮದುವೆ ಮಾಡಿಕೊಡಲಾಗಿದೆ. ಅವರು ಒಳ್ಳೆಯ ಜೀವನ ಮಾಡುತ್ತಿದ್ದಾರೆ. ಇದೀಗ ಕೇಂದ್ರದಿಂದ 7ನೇ ಮದುವೆ ನಡೆಯಲಿದೆ. ಇದಕ್ಕಾಗಿ ಎಲ್ಲ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ನಮ್ಮ ಸ್ವಂತ ಮಕ್ಕಳಿಗೆ ಮಾಡುವ ಮದುವೆಯಂತೆಯೇ ಆಮಂತ್ರಣ ಪತ್ರಿಕೆಯಿಂದ ಹಿಡಿದು ಎಲ್ಲ ಶಾಸ್ತ್ರಗಳನ್ನು ಮಾಡಲಾಗುತ್ತದೆ ಎಂದರು.

ವಿದ್ಯಾವಿಕಾಸ ಪ್ರಕಲ್ಪದ ಅಧ್ಯಕ್ಷೆ ಭಾರತಿ ನಂದಕುಮಾರ ಮಾತನಾಡಿ, ಬಹಳಷ್ಟು ಜನ ಕನ್ಯೆಗಾಗಿ ಬೇಡಿಕೆ ಸಲ್ಲಿಸುತ್ತಾರೆ. ಆದರೆ, ನಾವು ಹುಡುಗನ ಹಿನ್ನೆಲೆಯ, ವಯಸ್ಸು ಹಾಗೂ ಕುಟುಂಬದ ಬಗ್ಗೆ ಸಂಪೂರ್ಣವಾಗಿ ಪರಿಶೀಲಿಸಿಯೇ ಮುಂದುರೆಯುತ್ತೇವೆ. ಸಣ್ಣ ನ್ಯೂನ್ಯತೆ ಕಂಡು ಬಂದರೂ ಸಂಬಂಧವನ್ನು ತಿರಸ್ಕರಿಸಿದ ಉದಹಾರಣೆಗಳಿವೆ. ನಮ್ಮ ಮಕ್ಕಳು ತವರು ಮನೆಗಿಂತ (ಬಾಲ ಕಲ್ಯಾಣ ಕೇಂದ್ರ) ಪತಿಯ ಮನೆಯಲ್ಲಿ ಸುಖವಾಗಿ ಇರಬೇಕು ಎಂಬುದು ನಮ್ಮೆಲ್ಲರ ಆಸೆ. ಮದುವೆ ಸಂದರ್ಭದಲ್ಲಿ ತವರು ಮನೆಯಿಂದ ನೀಡುವ ಎಲ್ಲ ಸಾಮಾಗ್ರಿಗಳನ್ನು ನೀಡಲಾಗುತ್ತಿದೆ. ಇದಕ್ಕೆ ಸಾಕಷ್ಟು ದಾನಿಗಳ ನೆರವಿರುತ್ತದೆ. ಈ ಮದುವೆಗೆ ಯಾವುದೇ ಜಾತಿ, ಜಾತಕ ಇರುವುದಿಲ್ಲ ಎಂದರು.

ಈ ವೇಳೆ ಕೇಂದ್ರದ ಕಾರ್ಯದರ್ಶಿ ಮಂಜುಳಾ ಕೃಷ್ಣನ್, ಸದಸ್ಯೆಯರಾದ ವೀಣಾ ಮಳಗೆ, ನಂದಾ ಸವಡಿ ಸೇರಿದಂತೆ ಹಲವರಿದ್ದರು.