ನಕ್ಸಲರಿಂದ ಪ್ರತ್ಯುತ್ತರ?: ಎಎನ್‌ಎಫ್‌ ಕಟ್ಟೆಚ್ಚರ

| Published : Nov 22 2024, 01:16 AM IST

ಸಾರಾಂಶ

ಚಿಕ್ಕಮಗಳೂರು, ನಕ್ಸಲ್‌ ನಾಯಕ ವಿಕ್ರಂಗೌಡ ಎನ್‌ಕೌಂಟರ್‌ ಹಿನ್ನೆಲೆಯಲ್ಲಿ ನಕ್ಸಲರು ಪ್ರತಿಕಾರ ತೀರಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ನಕ್ಸಲ್‌ ನಿಗ್ರಹ ಪಡೆ (ಎಎನ್‌ಎಫ್‌) ಸಂಪೂರ್ಣ ಎಚ್ಚರ ವಹಿಸಿದೆ.

ನಾಯಕನ ಹತ್ಯೆಯಾದಾಗ ಮಾತ್ರ ನಕ್ಸಲರಿಂದ ಪ್ರತಿಕಾರ ।

ಮಾಹಿತಿದಾರರನ್ನು ಗುರಿ ಮಾಡುವ ಪ್ರವೃತ್ತಿ ಈ ಹಿಂದೆ ಸಾಬೀತುಆರ್‌. ತಾರಾನಾಥ್‌

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನಕ್ಸಲ್‌ ನಾಯಕ ವಿಕ್ರಂಗೌಡ ಎನ್‌ಕೌಂಟರ್‌ ಹಿನ್ನೆಲೆಯಲ್ಲಿ ನಕ್ಸಲರು ಪ್ರತಿಕಾರ ತೀರಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ನಕ್ಸಲ್‌ ನಿಗ್ರಹ ಪಡೆ (ಎಎನ್‌ಎಫ್‌) ಸಂಪೂರ್ಣ ಎಚ್ಚರ ವಹಿಸಿದೆ.

ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿರುವ ಎಲ್ಲಾ 17 ನಕ್ಸಲ್‌ ನಿಗ್ರಹ ಪಡೆಯ ತಂಡ ಗಳು ಕಾರ್ಯಾಚರಣೆ ಚುರುಕುಗೊಳಿಸಿವೆ. ಈ ಭಾಗದ ಪೊಲೀಸ್‌ ಠಾಣೆ ಸಿಬ್ಬಂದಿ ಮಫ್ತಿಯಲ್ಲಿ ಗ್ರಾಮೀಣ ಭಾಗದಲ್ಲಿ ತಿರುಗಾಡುತ್ತಿದ್ದಾರೆ.

ಯಾವ ಸಂದರ್ಭದಲ್ಲಿ ಎಲ್ಲಿ ಏನು ಬೇಕಾದರೂ ಆಗಬಹುದು ಎಂಬ ಸಂಶಯ ಪೊಲೀಸ್‌ ಇಲಾಖೆಯಲ್ಲಿ ಹರಿದಾಡುತ್ತಿದೆ. ಹಿರಿಯ ಪೊಲೀಸ್‌ ಅಧಿಕಾರಿಗಳು ಸಹ ಈ ಮಾತನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಸಂಘಟನೆ ನಾಯಕರನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದರೆ, ಅದಕ್ಕೆ ನಕ್ಸಲರು ಪ್ರತೀಕಾರ ತೀರಿಸಿ ಕೊಳ್ಳುವ ಸಾಧ್ಯತೆ ಇರುತ್ತದೆ. ಇದು, ಮಲೆನಾಡಿನಲ್ಲಿ ಸಾಬೀತಾಗಿದೆ. ಆರಂಭದಲ್ಲಿ ನಕ್ಸಲ್‌ ತಂಡದ ನಾಯಕರಾಗಿದ್ದ ಸಾಕೇತ್‌ರಾಜ್‌ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿನ ನಾಲ್ಕು ತಂಡಗಳನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದರು. 2005ರ ಫೆ. 6ರಂದು ಬಲಿಗೆ ಗ್ರಾಮದ ಬಳಿ ಸಾಕೇತ್‌ರಾಜ್ ಹಾಗೂ ಶಿವಲಿಂಗು ಎನ್‌ಕೌಂಟರ್‌ಗೆ ಬಲಿಯಾದರು. ಸಾಕೇತ್‌ರಾಜ್‌ ಇರುವಿಕೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರೆಂಬ ಕಾರಣಕ್ಕಾಗಿ ಮೆಣಸಿನಹಾಡ್ಯದಲ್ಲಿ 2005ರ ಮೇ 26 ರಂದು ಶೇಷಯ್ಯ ಅವರನ್ನು ಅಮಾನವೀಯ ರೀತಿಯಲ್ಲಿ ಅವರ ಮನೆ ಮುಂಭಾಗದಲ್ಲಿ ನಕ್ಸಲರು ಹತ್ಯೆ ಮಾಡಿದರು. ಗೋಡೆ ಬರಹಗಳ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಸಹ ನೀಡಿದ್ದರು. ನಂತರದ ವರ್ಷಗಳಲ್ಲಿ 10 ಮಂದಿ ಸಹಚರರು ಹತ್ಯೆಯಾದರು. ಆಗ ನಕ್ಸಲೀಯರು ಪ್ರತೀಕಾರ ತೀರಿಸಿಕೊಳ್ಳಲಿಲ್ಲ. ಅಂದರೆ, ನಾಯಕನನ್ನು ಹತ್ಯೆ ಮಾಡಿದಾಗ ಮಾತ್ರ ಪ್ರತಿಕಾರ ತೀರಿಸಿಕೊಳ್ಳುವ ಮನಸ್ಥಿತಿ ಅವರದು, ಈಗ ನಾಯಕ ವಿಕ್ರಂಗೌಡರನ್ನು ಪೊಲೀಸರು ಎನ್‌ಕೌಂಟರ್‌ ಮಾಡಿದ್ದಾರೆ. ಆತನ ಬಗ್ಗೆ ಮಾಹಿತಿ ಕೊಟ್ಟಿರುವವರ ಅಥವಾ ಕೂಂಬಿಂಗ್‌ ನಡೆಸುವವರ ಮೇಲೆ ನಕ್ಸಲರು ತಿರುಗಿಬೀಳುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಹೀಗಾಗಿ ಎಎನ್‌ಎಫ್‌ ಕಾರ್ಯಪಡೆ ಸಂಪೂರ್ಣ ಸನ್ನದ್ಧ ಸ್ಥಿತಿಯಲ್ಲಿದೆ.

ಎರಡು ತಂಡಗಳು:

ಪೊಲೀಸ್‌ ಇಲಾಖೆ ಮಾಹಿತಿ ಪ್ರಕಾರ ಸದ್ಯ ತಲಾ 4 ಮಂದಿಯಂತೆ 2 ತಂಡಗಳಲ್ಲಿ ನಕ್ಸಲರು ಚಟುವಟಿಕೆಯಲ್ಲಿ ತೊಡಗಿದ್ದಾರೆ. ಒಂದು ತಂಡ ವಿಕ್ರಂಗೌಡನ ನೇತೃತ್ವದಲ್ಲಿ ಕರಾವಳಿಯಲ್ಲಿ ಇತ್ತು. ಮುಂಡಗಾರು ಲತಾ ನೇತೃತ್ವದ ತಂಡ ಮಲೆನಾಡಿನಲ್ಲಿತ್ತು. ನ.10 ರಂದು ಮುಂಡಗಾರು ಲತಾ, ಜಯಣ್ಣ ಹಾಗೂ ಇನ್ನಿಬ್ಬರು ಕೊಪ್ಪ ತಾಲೂಕಿನ ಕಡೆಗುಂದಿ ಗ್ರಾಮದ ಸುಬ್ಬೆಗೌಡರ ಮನೆಗೆ ಬಂದಿದ್ದರು. ನ. 17 ರಂದು ವಿಕ್ರಂಗೌಡ ಅವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಬ್ಬಿನಾಲೆ ಗ್ರಾಮಕ್ಕೆ ಬಂದು ಹೋಗಿದ್ದರು. ಅಂದರೆ, ಈ ಎರಡು ಸಂದರ್ಭ ನೋಡಿದರೆ ವಿಕ್ರಂಗೌಡ, ಮುಂಡಗಾರು ಲತಾ ಅವರು ಒಟ್ಟಿಗೆ ಇರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಮಲೆನಾಡಿನಲ್ಲಿ ಮುಂಡಗಾರು ಲತಾ ಹಾಗೂ ಅವರ ತಂಡ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದರಿಂದ ಈ ಭಾಗದಲ್ಲೇ ಪ್ರತಿಕಾರ ತೀರಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಪೊಲೀಸ್‌ ಇಲಾಖೆ ಅಂದಾಜು. ಹಾಗೆಯೇ ದಟ್ಟ ಕಾಡಿನಲ್ಲಿ ಒಂಟಿ ಮನೆಯಲ್ಲಿ ವಾಸವಾಗಿರುವ ಜನರಲ್ಲೂ ಕೂಡ ಆತಂಕ ಕಾಡುತ್ತಿದೆ.