ಸಾರಾಂಶ
ಮನುಷ್ಯ ನೂರು ವರ್ಷ ಬದುಕುತ್ತಾನೆ. ತಾಯಿಯ ಗರ್ಭದಿಂದ ಜನಿಸುವಾಗ ಅಳುತ್ತಲೇ ಜನ್ಮತಾಳಿ, ಕೊನೆಗೆ ಈ ಭೂಮಿ ಬಿಟ್ಟು ಹೋಗುವ ವೇಳೆಗೂ ಅಳುತ್ತಲೇ ಹೋಗುತ್ತಾನೆ.
ಕೊಪ್ಪಳ: ನೂರು ವರ್ಷ ಬದುಕುವ ಮನುಷ್ಯ ಜೀವನದಲ್ಲಿ ಸಂತಸದಿಂದ ಬದುಕುವುದನ್ನು ಕಲಿಯಬೇಕು. ಅದುವೇ ಜೀವನದ ಸಾರ್ಥಕತೆ ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ, ಸಣ್ಣ ಮಾರುತೇಶ್ವರ ಮೂರ್ತಿ, ಅನ್ನಪೂರ್ಣೇಶ್ವರಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಜಾನಪದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಓರ್ವ ತತ್ವಜ್ಞಾನಿಯ ಮಾತಿನಂತೆ, ಮನುಷ್ಯನ ಇಡೀ ಆಯುಷ್ಯದಲ್ಲಿ ಎರಡು ದಿನ ಮಹತ್ವತೆ ಪಡೆದಿವೆ. ಒಂದು ತಾಯಿಯ ಗರ್ಭದಿಂದ ಜನಿಸಿದ್ದು, ಮತ್ತೊಂದು ಆ ದೇವರು ಈ ಭೂಮಿಯ ಮೇಲೆ ನನ್ನನ್ನು ಯಾತಕ್ಕೆ ಜನ್ಮ ಕೊಟ್ಟ ಎನ್ನುವಂತ ಚಿಂತನೆ ಮಾಡುವುದು. ನಾನು ಭೂಮಿಯಲ್ಲಿ ಏಕೆ ಜನಿಸಿದೆ ಎನ್ನುವ ಚಿಂತನೆ ಮಾಡುವುದಾಗಿದೆ. ಮನುಷ್ಯ ನೂರು ವರ್ಷ ಬದುಕುತ್ತಾನೆ. ತಾಯಿಯ ಗರ್ಭದಿಂದ ಜನಿಸುವಾಗ ಅಳುತ್ತಲೇ ಜನ್ಮತಾಳಿ, ಕೊನೆಗೆ ಈ ಭೂಮಿ ಬಿಟ್ಟು ಹೋಗುವ ವೇಳೆಗೂ ಅಳುತ್ತಲೇ ಹೋಗುತ್ತಾನೆ. ನೂರು ವರ್ಷ ಬದುಕುವ ಮನುಷ್ಯ ಜೀವನದಲ್ಲಿ ಏನನ್ನು ಮಾಡಿದ ಎನ್ನುವುದು ಮುಖ್ಯವಾಗಿದೆ ಎಂದರು.ಒಂದು ಹೂವು ಬಚ್ಚಲ ನೀರಿನಲ್ಲಿ ಬೆಳೆದರೂ ಆ ದೇವರೇ ನಿರ್ಮಾಣ ಮಾಡಿದ ಹೂವು ಒಂದು ದಿನ ಅರಳಿ ದೇವರ ತಲೆಯ ಮೇಲೆ ಕುಳಿತು ತನ್ನ ಜೀವನ ಸಾರ್ಥಕ ಮಾಡಿಕೊಳ್ಳುತ್ತದೆ. ಹಾಗೆಯೇ ಜೀವನದಲ್ಲಿ ಅಳುವುದನ್ನು ಬಿಟ್ಟು ಸಂತಸದಿಂದ ಸಾರ್ಥಕತೆಯ ಜೀವನ ನಡೆಸುವುದನ್ನು ಕಲಿಯಬೇಕು ಎಂದರು.
ಶರಣರ ವಚನದಂತೆ, ಮನುಷ್ಯನಿಗೆ ಏಷ್ಟು ಸಂಪತ್ತು ಇದ್ದರೇನು ಸತ್ತ ಮೇಲೆ ನಮ್ಮ ಹಿಂದೆ ಏನೂ ಬರುವುದಿಲ್ಲ. ಮನೆಯಲ್ಲಿ ನೂರು ಕ್ವಿಂಟಲ್ ಅಕ್ಕಿಯಿದ್ದರೂ ಊಟ ಮಾಡುವುದು ಒಂದು ಮುಟಗಿ ಅಕ್ಕಿ ಮಾತ್ರ, ನೂರು ಲೀಟರ್ ಹಾಲು ಇದ್ದರೂ ಕುಡಿಯುವುದು ಒಂದು ಕಪ್ಪು ಮಾತ್ರ, ಎಂಟು ಬೆಡ್ ರೂಮ್ ಇರುವ ಮನೆ ಕಟ್ಟಿಸಿದರೂ ಮಲಗುವುದು ಅರ್ಧ ಮಂಚದಲ್ಲಿ ಮಾತ್ರ, ನಮ್ಮ ಪ್ರಾಣ ದೇಹ ಬಿಟ್ಟು ಹೋದ ಬಳಿಕ ಈ ದೇಹ ಭೂಮಿಯ ಸಂಗದಲ್ಲಿ ಲೀನವಾಗುತ್ತದೆ. ಸತ್ತ ಮೇಲೆ ನಮ್ಮ ಒಡವೆ ಹೆಂಡತಿ ಪಾಲಾದರೆ, ಕಟ್ಟಿದ ಮನೆ ಮಕ್ಕಳ ಪಾಲಾಗುತ್ತದೆ. ಸತ್ತ ಮೇಲೆ ನಿನ್ನ ಸಂಗಡ ಬರುವುದು ಪುಣ್ಯದ ಕಾರ್ಯಗಳು ಮಾತ್ರ, ಹಾಗಾಗಿ ಈ ಜೀವನದಲ್ಲಿ ಇರುವಾಗ ಪುಣ್ಯದ ಕಾರ್ಯಗಳನ್ನು ಮಾಡಬೇಕು. ನಮ್ಮ ಜೀವನದಲ್ಲಿ ಪುಣ್ಯ ಕಾರ್ಯಗಳೇ ನಮ್ಮ ಸ್ನೇಹಿತರು. ಯಾವುದು ಸಾವಿನಿಂದ ಕಸಿಯಲು ಆಗುವುದಿಲ್ಲವೋ ಅದುವೇ ಸ್ನೇಹ ಎಂದರು.ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ೧೫-೧೬ ಲಕ್ಷ ಭಕ್ತರು ಪಾಲ್ಗೊಳ್ಳುತ್ತಾರೆಂದರೆ ಅದು ಈ ಮುದ್ದಾಬಳ್ಳಿಯ ಗ್ರಾಮದಿಂದ ಅಜ್ಜನ ಮೂರ್ತಿಯ ಮೆರವಣಿಗೆಯು ಸಾಗುತ್ತದೆ. ಇದು ಮುದ್ದಾಬಳ್ಳಿಯ ಪುಣ್ಯವೇ ಸರಿ ಎಂದರು.
ಕಾರ್ಯಕ್ರಮದಲ್ಲಿ ಶೇಖರಯ್ಯ ಹಿರೇಮಠ, ಗುರುನಾಥಸ್ವಾಮಿ ಏಕದಂಡಿಗಮಠ, ಸುರೇಶರಡ್ಡಿ ಮಾದಿನೂರು, ಮಲ್ಲಿಕಾರ್ಜುನಗೌಡ ಪಾಟೀಲ್, ಶರಣಗೌಡ ಪಾಟೀಲ್, ಸಂಗಣ್ಣ ನಾಗರಹಳ್ಳಿ ಉಪಸ್ಥಿತರಿದ್ದರು.ಬಳಿಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶರಣಪ್ಪ ಅವರಿಂದ ಜಾನಪದ ಸಾಂಸ್ಕೃತಿಕ ವೈಭವ ಜನರ ಗಮನ ಸೆಳೆಯಿತು.