ಸಾರಾಂಶ
ಬಳ್ಳಾರಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಕನ್ನಡಪ್ರಭ ವಾರ್ತೆ ಬಳ್ಳಾರಿ
ಕಲ್ಯಾಣ ಕರ್ನಾಟಕ ಭಾಗವು ನಿಜಾಮರ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದು ಭಾರತದ ಒಕ್ಕೂಟಕ್ಕೆ ಸೇರ್ಪಡೆಗೊಳ್ಳಲು ಶ್ರಮಿಸಿದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳನ್ನು ಸದಾ ಸ್ಮರಿಸುವಂತಾಗಬೇಕು ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಹೇಳಿದರು.ಜಿಲ್ಲಾಡಳಿತ ವತಿಯಿಂದ ನಗರದ ಸರ್ಕಾರಿ ಪದವಿ ಪೂರ್ವ (ಮಾ.ಪು.) ಕಾಲೇಜು ಮೈದಾನದಲ್ಲಿ ಬುಧವಾರ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ಏಕೀಕರಣದ ರೂವಾರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಕಲ್ಯಾಣ ಕರ್ನಾಟಕ ಪ್ರದೇಶವು ನಿಜಾಮರ ಅಳ್ವಿಕೆಯಿಂದ ಸ್ವಾತಂತ್ರ್ಯಗೊಂಡು 77 ವರ್ಷಗಳಾಗಿವೆ. ಭವ್ಯ ಪರಂಪರೆ ಹೊಂದಿರುವ ಭಾರತವು ಹತ್ತಾರು ಕಾರಣಗಳಿಂದಾಗಿ ಪರಕೀಯರ ಆಡಳಿತಕ್ಕೆ ಒಳಗಾಗಿತ್ತು. ದೇಶಕ್ಕೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ದೊರೆತರೂ ಹೈದರಾಬಾದ್ ಸಂಸ್ಥಾನದ ಪ್ರಜೆಗಳಿಗೆ ಸ್ವಾತಂತ್ರ್ಯ ದೊರೆತಿರಲಿಲ್ಲ. ಬಳಿಕ ಒಂದು ವರ್ಷದಲ್ಲಿ ಕಲ್ಯಾಣ ಕರ್ನಾಟಕ ಜನರಿಗೆ ನಿಜಾಮರ ಆಡಳಿತದಿಂದ ಮುಕ್ತಗೊಂಡಿತು ಎಂದು ಹೇಳಿದರು.
2013ರ ನ. 6ರಂದು ಅಂದಿನ ನಮ್ಮ ಕಾಂಗ್ರೆಸ್ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯನ್ನು ಕಲಬುರಗಿಯಲ್ಲಿ ಸ್ಥಾಪಿಸಿ, ಈ ಭಾಗದ 40 ವಿಧಾನಸಭಾ ಕ್ಷೇತ್ರಗಳ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಿಗೂ ಸೇರಿದಂತೆ ಎಲ್ಲ ಭಾಗಗಳ ಮೂಲಭೂತ ಸೌಕರ್ಯ, ಆರೋಗ್ಯ, ಸಾಮಾಜಿಕ, ರಸ್ತೆ ಸಂಪರ್ಕ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಕ್ಕೆ ವಿಶೇಷ ಅನುದಾನ ಮೀಸಲಿರಿಸುವ ಕಾರ್ಯ ಮಾಡಿದೆ ಎಂದರು.ಸಂಸದ ಈ. ತುಕಾರಾಮ್ ಮಾತನಾಡಿದರು. ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸಿರಿಗೇರಿ ಪನ್ನರಾಜ್ ವಿಶೇಷ ಉಪನ್ಯಾಸ ನೀಡಿದರು.
ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಿದ್ದ ಪ್ರಬಂಧ, ಭಾಷಣ ಮತ್ತು ಚಿತ್ರಕಲೆ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಯಿತು.ಮೇಯರ್ ಮುಲ್ಲಂಗಿ ನಂದೀಶ್, ಉಪಮೇಯರ್ ಡಿ. ಸುಕುಂ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ, ಬಳ್ಳಾರಿ ವಲಯ ಪೊಲೀಸ್ ಮಹಾ ನಿರೀಕ್ಷಕರಾದ ವರ್ತಿಕಾ ಕಟಿಯಾರ್, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ., ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್, ಬಳ್ಳಾರಿ ವಲಯ ಉಪಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಎನ್. ಬಸವರಾಜ ಉಪಸ್ಥಿತರಿದ್ದರು. ದೊಡ್ಡಬಸವ ಗವಾಯಿ ಡಿ. ಕಗ್ಗಲ್ ನಾಡಗೀತೆ ಹಾಗೂ ಕನ್ನಡಗೀತೆಗಳನ್ನು ಪ್ರಸ್ತುತಪಡಿಸಿದರು. ಯೋಗೀಶ್ ಸಂಗನಕಲ್ಲು ತಬಲಾ ಸಾಥ್ ನೀಡಿದರು. ಶಾಸಕರು ಗೈರು:
ಕಲ್ಯಾಣ ಕರ್ನಾಟಕದ ಉತ್ಸವದ ಅಧ್ಯಕ್ಷತೆ ವಹಿಸಬೇಕಿದ್ದ ನಗರ ಶಾಸಕ ನಾರಾ ಭರತ್ ರೆಡ್ಡಿ ಸೇರಿದಂತೆ ಜಿಲ್ಲೆಯ ಶಾಸಕರು ಸಮಾರಂಭದಲ್ಲಿ ಗೈರಾಗಿದ್ದರು.ಜಿಲ್ಲಾ ಸಚಿವ ಜಮೀರ್ ಅಹಮದ್ ಖಾನ್, ಸಂಡೂರು, ಬಳ್ಳಾರಿ, ಕಂಪ್ಲಿ ಹಾಗೂ ಸಿರುಗುಪ್ಪ ಶಾಸಕರು, ವಿಧಾನಪರಿಷತ್ ಸದಸ್ಯರ ಹೆಸರು ಆಹ್ವಾನ ಪತ್ರಿಕೆಯಲ್ಲಿ ಕಂಡು ಬಂದವಾದರೂ ವೇದಿಕೆಯಲ್ಲಿ ಶಾಸಕರಾರೂ ಕಂಡು ಬರಲಿಲ್ಲ. ಪ್ರೇಕ್ಷಕರ ಕೊರತೆ ನೀಗಿಸಲು ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಕರೆತರಲಾಗಿತ್ತು. ಸಾರ್ವಜನಿಕರ ಪಾಲ್ಗೊಳ್ಳುವಿಕೆ ಬೆರಳೆಣಿಕೆಯಷ್ಟೂ ಕಂಡು ಬರಲಿಲ್ಲ.