ಮೌಲ್ಯಗಳ ಅವನತಿಯ ಕಾಲದಲ್ಲಿ ವಿಶ್ವೇಶ್ವರಯ್ಯನವರ ಮಹತ್ವ ಹೆಚ್ಚು

| Published : Sep 18 2025, 01:10 AM IST

ಮೌಲ್ಯಗಳ ಅವನತಿಯ ಕಾಲದಲ್ಲಿ ವಿಶ್ವೇಶ್ವರಯ್ಯನವರ ಮಹತ್ವ ಹೆಚ್ಚು
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವೇಶ್ವರಯ್ಯನವರ ಸಾಧನೆಯ ವ್ಯಾಪ್ತಿ ನೋಡಿದರೆ ಅವರನ್ನು ಕೇವಲ ಎಂಜಿನಿಯರ್ ಎನ್ನದೇ, ಅವರೊಬ್ಬ ಮತ್ಸದ್ಧಿ. ಅದರ ಪರಿಣಾಮವೇ ಶಿಕ್ಷಣ, ಉದ್ಯಮ, ಉದ್ಯೋಗ, ಕೃಷಿ, ನೀರಾವರಿ, ಕಲೆ, ಸಾಹಿತ್ಯ, ನಾಡು-ನುಡಿ, ಇತ್ಯಾದಿಗಳ ಬಗ್ಗೆ ಕಳಕಳಿ ಹೊಂದಿದ್ದರು

ಧಾರವಾಡ:

ಸರ್.ಎಂ. ವಿಶ್ವೇಶ್ವರಯ್ಯನವರು ಕೇವಲ ವ್ಯಕ್ತಿಯಲ್ಲ, ಸಾಮಾಜಿಕ ಬದ್ಧತೆಯ ಸಂಸ್ಥೆಯಂತೆ ಇದ್ದವರು. ಶಿಸ್ತು ಮತ್ತು ಮೌಲ್ಯಯುತ ಬದುಕು ಕಟ್ಟಿಕೊಂಡಿದ್ದರು. ಸಮಾಜಕ್ಕಾಗಿ ಜೀವನ ನಡೆಸುವ ಮೂಲಕ ಸಾರ್ವಕಾಲಿಕ ಪ್ರಸ್ತುತತೆ ಪಡೆದವರು ಎಂದು ಐಐಟಿಯ ಡೀನ ಎಸ್.ಎಂ. ಶಿವಪ್ರಸಾದ ಹೇಳಿದರು.

ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ವತಿಯಿಂದ ಇಲ್ಲಿಯ ರಂಗಾಯಣದ ಸಾಂಸ್ಕೃತಿಕ ಸಮುಚ್ಚಯದಲ್ಲಿ ನಡೆದ 58ನೇ ಅಭಿಯಂತರರ ದಿನದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.

ಅವರ ಸಾಧನೆಯ ವ್ಯಾಪ್ತಿ ನೋಡಿದರೆ ಅವರನ್ನು ಕೇವಲ ಎಂಜಿನಿಯರ್ ಎನ್ನದೇ, ಅವರೊಬ್ಬ ಮತ್ಸದ್ಧಿ. ಅದರ ಪರಿಣಾಮವೇ ಶಿಕ್ಷಣ, ಉದ್ಯಮ, ಉದ್ಯೋಗ, ಕೃಷಿ, ನೀರಾವರಿ, ಕಲೆ, ಸಾಹಿತ್ಯ, ನಾಡು-ನುಡಿ, ಇತ್ಯಾದಿಗಳ ಬಗ್ಗೆ ಕಳಕಳಿ ಹೊಂದಿದ್ದರು ಎಂದರು.

ಪಾಲಿಕೆ ಮೇಯರ್‌ ಜ್ಯೋತಿ ಪಾಟೀಲ್ ಮಾತನಾಡಿ, ಸಮಾಜದ ಬಗ್ಗೆ ತುಂಬ ಕಳಕಳಿ ಇದ್ದದ್ದರಿಂದ ವಿಶ್ವೇಶ್ವರಯ್ಯನವರು ಕಂಡ ಪ್ರತಿಯೊಂದು ಕನಸುಗಳು ನಾಡಿನ ಕನಸಾಗಿದ್ದವು. ಆ ಕನಸುಗಳನ್ನು ನನಸು ಮಾಡುವುದಕ್ಕೆ ಅವಿರತವಾಗಿ ಪ್ರಯತ್ನಿಸಿದವರು ಎಂದರು.

ಅಧ್ಯಕ್ಷತೆ ವಹಿಸಿದ್ದ ಎಂಜಿನಿಯರ್ಸ್‌ ಸಂಘದ ಅಧ್ಯಕ್ಷ ಸುನಿಲ್ ಬಾಗೇವಾಡಿ, ಸಮಯ ಪ್ರಜ್ಞೆಯ ಸಾಕಾರ ಮೂರ್ತಿಯಾಗಿದ್ದ ಸರ್‌ ಎಂ. ವಿಶ್ವೇಶ್ವರಯ್ಯನವರ ಬದುಕು ಬರೀ ಎಂಜಿನಿಯರ್‌ಗಳಲ್ಲ ಇಡೀ ಸಮಾಜಕ್ಕೆ ಮಾರ್ಗದರ್ಶಿ. ನಿಷ್ಠುರ ವ್ಯಕ್ತಿತ್ವದ ಅವರು ಕೆಲವು ವಿಷಯಗಳ ಬಗ್ಗೆ ಸ್ಪಷ್ಟತೆ, ಗಟ್ಟಿತನ ಹೊಂದಿದ್ದರು. ನಾಡಿನ ಬಗೆಗಿನ ಕಾಳಜಿ ಮತ್ತು ದೂರದೃಷ್ಟಿತ್ವ ಹೊಂದಿದ್ದರು ಎಂದರು.

ಕಾರ್ಯದರ್ಶಿ ಸಿದ್ದನಗೌಡ ಪಾಟೀಲ ಮತ್ತು ಖಜಾಂಚಿ ಕಬೀರ್ ನದಾಫ್ ವೇದಿಕೆ ಮೇಲಿದ್ದರು. ಇದೇ ಸಂದರ್ಭದಲ್ಲಿ ಹುಬ್ಬಳ್ಳಿ ಸ್ಮಾರ್ಟ್ ಸಿಟಿಯ ಮುಖ್ಯ ಅಭಿಯಂತರ ಎಂ, ನಾರಾಯಣ್, ನೀರು ಮತ್ತು ಭೂಮಿ ನಿರ್ವಹಣಾ ಸಂಸ್ಥೆಯ ಪ್ರಾಧ್ಯಾಪಕ ಬಸವರಾಜ ಬಂಡಿವಡ್ಡರ, ಪಿಡಬ್ಲೂಡಿ ವೃತ್ತದ ಅಧೀಕ್ಷಕ ಅಭಿಯಂತರ ಅರುಣಕುಮಾರ ಪಾಟೀಲ್, ಪಾಲಿಕೆಯ ನಿವೃತ್ತ ಕಾರ್ಯಪಾಲಕ ಅಭಿಯಂತರ ಜಿ.ಜಿ. ಹಿರೇಮಠ, ಪಿಡಬ್ಲ್ಯೂಡಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮುಸ್ತಫಾ ಫರಾಸ್ ಅವರನ್ನು ಸನ್ಮಾನಿಸಲಾಯಿತು.

ಅಜಿತ ಕರೋಗಲ್ಲ ನಿರೂಪಿಸಿದರು. ಉಪಾಧ್ಯಕ್ಷ ಅರುಣಕುಮಾರ ಶೀಲವಂತ ಸ್ವಾಗತಿಸಿದರು. ಕಾರ್ಯದರ್ಶಿ ಸಿದ್ದನಗೌಡ ಪಾಟೀಲ ವಂದಿಸಿದರು. ಅಶ್ವಿನಿ ದೇಸಾಯಿ ತಂಡದವರು ಪ್ರಾರ್ಥಿಸಿದರು.