ಕುಂದಾಪುರ: ವಾರಾಹಿ ಯೋಜನೆ ಕಾರ್‍ಯಗತವಾಗಲು ಹಲವಾರು ನಾಯಕರ ಸಹಕಾರವಿದೆ. ಜನರ ಜೀವನಾಡಿಯಾದ ನೀರನ್ನು ಸದ್ಬಳಕೆ ಮಾಡಿಕೊಂಡು ರೈತರು, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂಬ ನಿಟ್ಟಿನಲ್ಲಿ ಬಲದಂಡೆ ಯೋಜನೆ ಶೀಘ್ರ ಅನುಷ್ಠಾನವಾಗಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು ಹೇಳಿದರು‌‌.ವಾರಾಹಿ ಬಲದಂಡೆ ಯೋಜನೆ ಶೀಘ್ರ ಅನುಷ್ಠಾನಕ್ಕೆ ಆಗ್ರಹಿಸಿ ವಂಡ್ಸೆ, ಬೈಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿ, ವಿವಿಧ ಸಂಘ ಸಂಸ್ಥೆಗಳು, ರೈತರು ಸಾರ್ವಜನಿಕರ ಸಹಯೋಗದಲ್ಲಿ ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ ಅವರ ನೇತೃತ್ವದಲ್ಲಿ ಮಾ. 3 ಮತ್ತು 4 ರಂದು ಕಂಡ್ಲೂರಿನಿಂದ ಸಿದ್ಧಾಪುರದವರೆಗೆ ‘ನೀರಿಗಾಗಿ ನಮ್ಮ ನಡಿಗೆ’ ಬೃಹತ್ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸಾವಿರಾರು ಹೆಕ್ಟೇರ್ ಭೂಮಿಗೆ ನೀರುಣಿಸಬೇಕೆಂಬ ದೂರದೃಷ್ಟಿಯಿಂದ ಬಜೆಟ್ ಅಧಿವೇಶನದ ಸಮಯದಲ್ಲಿ ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಮಾಜಿ ಶಾಸಕ ಗೋಪಾಲ ಪೂಜಾರಿ ಅವರು ನೀರಿಗಾಗಿ ಈ ಪಾದಯಾತ್ರೆ ಕೈಗೊಂಡಿದ್ದು, ಪಕ್ಷದ ಸಂಪೂರ್ಣ ಬೆಂಬಲವಿದೆ ಎಂದರು.

ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ಬೇರೆ ಬೇರೆ ಸರಕಾರಗಳು ಆಡಳಿತದಲ್ಲಿರುವಾಗಲೂ ಅನುದಾನಗಳ ಕೊರತೆಯಿಂದಾಗಿ ವಾರಾಹಿ ಯೋಜನೆ ನಾಲ್ಕಾರು ದಶಕಗಳಿಂದ ಅಪೂರ್ಣವಾಗಿದೆ. ಮಾಜಿ ಶಾಸಕರಾದ ಕಾಪು ಸಂಜೀವ ಶೆಟ್ಟಿ, ವಿ.ಎಸ್. ಆಚಾರ್ಯ, ವಿನ್ನಿಫ್ರೆಡ್ ಫೆರ್ನಾಂಡಿಸ್, ಪ್ರತಾಪಚಂದ್ರ ಶೆಟ್ಟಿ, ಲೋಕಸಭಾ ಸದಸ್ಯರಾಗಿದ್ದ ಆಸ್ಕರ್ ಫೆರ್ನಾಂಡಿಸ್ ಅವರು‌ ಅಂದಿನ ಸಿಎಂ ಗುಂಡೂರಾವ್ ಅವರ ಸರಕಾರದಲ್ಲಿ ಅನುದಾನಗಳನ್ನು ತರಲು ಕೈಜೋಡಿಸಿದ್ದರು. ಪ್ರಸ್ತುತವೂ ಯೋಜನೆ ನಿಧಾನಗತಿಯಲ್ಲಿ ಸಾಗುತ್ತಿದೆ. ಸದ್ಯದ ಬೇಡಿಕೆಯಾದ ಬಲದಂಡೆ ಯೋಜನೆಯಿಂದಾಗಿ ಬೈಂದೂರು ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರದ ಒಂದಷ್ಟು ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದರು.

ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ‌ ಮಾತನಾಡಿ, ವಾರಾಹಿ ಬಲದಂಡೆ ಯೋಜನೆ ಅನುಷ್ಠಾನ, ಸಿದ್ದಾಪುರ ಏತ ನೀರಾವರಿ ಯೋಜನೆಯಲ್ಲಿ ಬಿಟ್ಟುಹೋದ ಭಾಗಕ್ಕೆ ನೀರು ಕೊಡಿಸಬೇಕು ಹಾಗೂ ಜಲಜೀವನ್ ಮಿಷನ್ ಅಡಿಯಲ್ಲಿ ಪೈಪ್‌ಲೈನ್ ಆಗಿ ಮನೆ ಎದುರು ನಳ್ಳಿ ಅಳವಡಿಸಿದರೂ ಕೂಡ ನೀರು ಪೂರೈಕೆ ಆಗುತ್ತಿಲ್ಲ. ಈ ಸಮಸ್ಯೆ ಪರಿಹರಿಸಬೇಕು ಎಂಬ ಆಗ್ರಹದೊಂದಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ರೈತ ಶಕ್ತಿಯ ಬಗ್ಗೆ ಸಿದ್ದಾಪುರದಲ್ಲಿ ಉತ್ತರ ನೀಡುವೆ ಎಂದರು.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೈತ ಮುಂಬಾರು ದಿನಕರ ಶೆಟ್ಟಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ ನಾಡ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಂಪಿಗೇಡಿ ಸಂಜೀವ ಶೆಟ್ಟಿ, ಮದನ್ ಕುಮಾರ್, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ್ ಪೂಜಾರಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ದೇವಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ, ಸಂತೋಷ್ ಕುಮಾರ್ ಶೆಟ್ಟಿ ಹಕ್ಲಾಡಿ, ರಘುರಾಮ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ತೆಗ್ಗರ್ಸೆ, ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶನ್ ಹೆಗ್ಡೆ, ಪಶ್ಚಿಮ ವಾಹಿನಿ ಯೋಜನೆ ಸಂಘಟನೆಯ ಅಧ್ಯಕ್ಷ ಚಿಟ್ಟೆ ರಾಜಗೋಪಾಲ ಹೆಗ್ಡೆ, ವಾರಾಹಿ ನೀರಾವರಿ ಬಳಕೆದಾರರ ವೇದಿಕೆ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಸದಾಶಿವ ಶೆಟ್ಟಿ, ಉದಯ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡ ಮುನಾಫ್, ವಂಡ್ಸೆ ಬ್ಲಾಕ್ ಅಧ್ಯಕ್ಷ ಇರ್ಫಾನ್, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಜಯರಾಮ ನಾಯ್ಕ್, ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಸೂರಜ್ ಪೂಜಾರಿ, ಬ್ಲಾಕ್ ಅಧ್ಯಕ್ಷ ಅಕ್ಷಯ್ ಕುಮಾರ್ ಶೆಟ್ಟಿ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿಜಯ ಪುತ್ರನ್, ಮಾಜಿ ಜಿಪಂ ಸದಸ್ಯ ಗಣಪತಿ ಟಿ. ಶ್ರೀಯಾನ್, ಮಾಜಿ ತಾಪಂ ಸದಸ್ಯರಾದ ಕಿರಣ್ ಹೆಗ್ಡೆ ಅಂಪಾರು, ಜಗದೀಶ್ ದೇವಾಡಿಗ, ಪ್ರಮುಖರಾದ ವಂಡಬಳ್ಳಿ ಜಯರಾಮ ಶೆಟ್ಟಿ, ನಾಗಪ್ಪ ಕೊಠಾರಿ, ನರಸಿಂಹ ಹಳಗೇರಿ, ಸುಧೀಶ್ ಶೆಟ್ಟಿ ಗುಲ್ವಾಡಿ, ರೋಶನ್ ಶೆಟ್ಟಿ, ಹನೀಫ್ ಮೊದಲಾದವರಿದ್ದರು.