ದಾಬಸ್‍ಪೇಟೆ: ಕಂಪನಿಯಲ್ಲಿ ಕೆಲಸ ಮಾಡುವಾಗ ಹೃದಯಾಘಾತದಿಂದ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ದಾಬಸ್‍ಪೇಟೆ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಂಪನಿಯಲ್ಲಿ ನಡೆದಿದೆ.
ದಾಬಸ್‍ಪೇಟೆ: ಕಂಪನಿಯಲ್ಲಿ ಕೆಲಸ ಮಾಡುವಾಗ ಹೃದಯಾಘಾತದಿಂದ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ದಾಬಸ್‍ಪೇಟೆ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಂಪನಿಯಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕೊಳಾಲ ಹೋಬಳಿಯ ನರಸೀಪುರದ ವಿನಯಕುಮಾರ್ (23) ಮೃತಪಟ್ಟ ಕಾರ್ಮಿಕ. ಈತ ದಾಬಸ್‍ಪೇಟೆ ಕೈಗಾರಿಕಾ ಪ್ರದೇಶದಲ್ಲಿರುವ ಮೆಡಿಕರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು.ಪ್ರತಿನಿತ್ಯದಂತೆ ಜ.27ರಂದು ಸಹ ಬೆಳಿಗ್ಗೆ 6 ಗಂಟೆಗೆ ವಿನಯಕುಮಾರ್ ಕೆಲಸಕ್ಕೆಂದು ಕಂಪನಿಗೆ ಬಂದಿದ್ದು, ಬೆಳಿಗ್ಗೆ 7 ಗಂಟೆ ವೇಳೆಯಲ್ಲಿ ಕೆಲಸದ ನಿಮಿತ್ತ ಕಂಪನಿಗೆ ಸೇರಿದ ವಾಹನದಲ್ಲಿ ಕಂಪನಿಗೆ ಸೇರಿದ ಮೆಡಿಕಲ್ ವೇಸ್ಟ್ ತುಂಬಿಕೊಂಡು ಬರಲು ಕುದೂರು ಕಡೆಗೆ ಹೋಗುವಾಗ ಬರಗೇನಹಳ್ಳಿ ಬಳಿ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಚಾಲಕ ದಾಬಸ್‍ಪೇಟೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ತಪಾಸಣೆ ಮಾಡಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮಾನವೀಯತೆ ತೋರದ ಕಂಪನಿ:ಇನ್ನೂ ಕಾರ್ಮಿಕ ವಿನಯಕುಮಾರ್ ಮೃತಪಟ್ಟಿರುವ ಬಗ್ಗೆ ಮಾಹಿತಿ ಪಡೆದ ಕಂಪನಿಯ ಸಿಬ್ಬಂದಿ ವರ್ಗ ಆಸ್ಪತ್ರೆಗೆ ಭೇಟಿ ನೀಡಿಲ್ಲ, ಸಂಬಂಧಿಕರಿಗೆ ಕನಿಷ್ಠ ಸಾಂತ್ವನದ ಮಾಡದೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಮೃತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.
ಕಂಪನಿಯ ವಿರುದ್ಧ ಪ್ರತಿಭಟನೆ:ಮೃತಪಟ್ಟ ಯುವಕನ ಕುಟುಂಬಸ್ಥರು ಹಾಗೂ ಕಂಪನಿ ಕಾರ್ಮಿಕರು ಕೆಲಸ ಬಹಿಷ್ಕರಿಸಿ ಕಂಪನಿ ಮುಂದೆ ಪ್ರತಿಭಟನೆ ನಡೆಸಿ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಈ ವೇಳೆ ಕಂಪನಿಯವರು ಗುತ್ತಿಗೆದಾರರಿಗೆ ನೀಡುವ 20 ಸಾವಿರ ರು.ಗಳನ್ನು ಮಾತ್ರ ಪರಿಹಾರ ನೀಡುತ್ತೇವೆ ಎಂದಾಗ ಕಾರ್ಮಿಕರು ಪ್ರತಿಭಟನೆ ತೀವ್ರಗೊಳಿಸಿದರು. ಈ ವೇಳೆ ಪೊಲೀಸ್ ಇನ್ಸ್‌ಪೆಕ್ಟರ್ ರಾಜು ಮಧ್ಯಪ್ರವೇಶಿಸಿ ಕಂಪನಿಯ ಆಡಳಿತ ಮಂಡಳಿ ಜೊತೆ ಚರ್ಚೆ ಮಾತನಾಡಿ ಮೃತನ ಕುಟುಂಬಕ್ಕೆ 7.5 ಲಕ್ಷ ರು.ಪರಿಹಾರ ಹಾಗೂ ಮೃತನ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ನಿರ್ಮಿಸಿಕೊಟ್ಟು, ಅದರಲ್ಲಿ ಬರುವ ಹಣದಲ್ಲಿ ಮೃತನ ಕುಟುಂಬದ ನಿರ್ವಹಣೆ ಮಾಡಲು ಸಹಕಾರ ನೀಡುತ್ತೇವೆ ಎಂದು ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿದ ಬಳಿಕ ಕಾರ್ಮಿಕರು ಪ್ರತಿಭಟನೆ ಹಿಂಪಡೆದರು.ಕಾರ್ಮಿಕರ ಹಿತ ಬಯಸದ ಕಂಪನಿ:
ಈ ಕಂಪನಿ ವೈದ್ಯಕೀಯ ತ್ಯಾಜ್ಯ ಸಂಗ್ರಹಿಸಿ ನಾಶಗೊಳಿಸುವ ಕೆಲಸ ಮಾಡುತ್ತಿದ್ದು, ದುರ್ವಾಸನೆಯಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರೂ ಯಾವುದೇ ಸುರಕ್ಷತಾ ಕಿಟ್‌ಗಳಾಗಲಿ, ಪಿಎಫ್, ಇನ್ಸೂರೆನ್ಸ್ ಯಾವುದೇ ಸೌಲಭ್ಯಗಳು ನೀಡಿಲ್ಲ, ಏನೇ ಅವಘಡಗಳು ಸಂಭವಿಸಿದರೆ ಕಂಪನಿ ಎಚ್ಚೆತ್ತುಕೊಳ್ಳುತ್ತಿಲ್ಲ. ಕಾರ್ಮಿಕರ ಹಿತಕ್ಕಿಂತ ಕೆಲಸವೇ ಮುಖ್ಯವಾಗಿದೆ ಎಂದು ಕಾರ್ಮಿಕರೊಬ್ಬರು ಕಂಪನಿಯ ಕಾರ್ಯವೈಖರಿ ವಿರುದ್ಧ ಅಸಮಾಧಾನ ಹೊರಹಾಕಿದರು. ಘಟನೆಗೆ ಸಂಬಂಧಿಸಿದಂತೆ ದಾಬಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೋಟೋ 3 : ಮೃತಪಟ್ಟ ಕಾರ್ಮಿಕ ವಿನಯಕುಮಾರ್
ಪೋಟೋ 4: ಕಂಪನಿಯ ಮುಂದೆ ಕಾರ್ಮಿಕರು ಹಾಗೂ ಕುಟುಂಬಸ್ಥರು ಬೀಗ ಜಡೆದು ಪ್ರತಿಭಟನೆ ನಡೆಸಿದರು.ಪೋಟೋ 5 : ಸೋಂಪುರ ಕೈಗಾರಿಕಾ ಪ್ರದೇಶದಲ್ಲಿರುವ ಮೆಡಿಕೇರ್ ಕಂಪನಿ