ಹಾನಗಲ್ಲ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಪ್ರಸಕ್ತ ಸಾಲಿನ ಬೆಳೆ ವಿಮಾ ಕಂತು ಭರಿಸುವ ಕುರಿತು ರೈತರಲ್ಲಿನ ಸಮಸ್ಯೆ ನಿವಾರಣೆಗಾಗಿ ಆಯೋಜಿಸಲಾಗಿದ್ದ ಸಭೆ ಗೊಂದಲದ ಗೂಡಾಗಿ ಯಾವುದೇ ಪರಿಹಾರಗಳನ್ನು ಕಂಡುಕೊಳ್ಳದೆ ಮುಂದೂಡಲಾಯಿತು.
ಇಲ್ಲಿಯ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್ ವಿಠ್ಠಲ ಚೌಗಲಾ ಅಧ್ಯಕ್ಷತೆಯಲ್ಲಿ ರೈತ ಸಂಘದ ಪದಾಧಿಕಾರಿಗಳು, ನಾಗರಿಕ ಸೇವಾ ಕೇಂದ್ರ, ಗ್ರಾಮ ಒನ್ ಪ್ರತಿನಿಧಿಗಳು, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸೇರಿದಂತೆ ತಾಲೂಕಿನ ಎಲ್ಲ ಬ್ಯಾಂಕ್ ಪ್ರತಿನಿಧಿಗಳು, ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳನ್ನು ಒಳಗೊಂಡು ಸಭೆ ಇತ್ತೀಚೆಗೆ ಆಯೋಜಿಸಲಾಗಿತ್ತು. ಸಭೆ ಆರಂಭವಾಗಿ ಒಂದೂವರೆ ಗಂಟೆ ಕಳೆದರೂ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಸಭೆಗೆ ಬಾರದೆ ನಿರ್ಲಕ್ಷ್ಯ ತೋರಿದ್ದಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಪಾಲ್ಗೊಳ್ಳುವಂತೆ ಎಲ್ಲ ಬ್ಯಾಂಕ್ ಪ್ರತಿನಿಧಿಗಳಿಗೆ ಲಿಖಿತ ಮಾಹಿತಿ ನೀಡಿದ್ದರೂ ಕೇವಲ 13 ಬ್ಯಾಂಕ್‌ಗಳ ಪ್ರತಿನಿಧಿಗಳು ಮಾತ್ರ ಪಾಲ್ಗೊಂಡಿರುವುದು ಸಹ ಸಭೆಯಲ್ಲಿ ರೈತರ ಆಕ್ರೋಶಕ್ಕೆ ಕಾರಣವಾಯಿತು. ಇದರಿಂದಾಗಿ ಬೆಳೆವಿಮೆ ಕಂತು ಭರಿಸುವ ಕುರಿತಂತೆ ಯಾವುದೇ ಅಂತಿಮ ನಿರ್ಣಯ ಕೈಗೊಳ್ಳಲು ಸಾಧ್ಯವಾಗದೇ ಸಭೆ ಮೊಟಕುಗೊಂಡಿತು.ತಾಲೂಕು ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಬೆಳೆವಿಮೆ ಕಂತು ತುಂಬುವ ವೇಳೆ ರೈತರಿಂದ ಸ್ವಯಂ ದೃಢೀಕರಣ ಪತ್ರ ಪಡೆಯಲಾಗುತ್ತಿದ್ದು, ಇದರಿಂದ ರೈತರಿಗೆ ವಿಮಾ ಕಂತು ಭರಿಸಲು ತೊಂದರೆಯಾಗುತ್ತಿದೆ. ಬೆಳೆಸಾಲ ಪಡೆದು ಮರುಪಾವತಿ ಮಾಡಲಾರದ ರೈತರು ಹಾಗೂ ಮಿಶ್ರಬೆಳೆ ಬೆಳೆಯುವ ರೈತರು ವಿವಿಧ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ರೈತರು ಹವಾಮಾನ ವೈಪರೀತ್ಯದಿಂದಾಗಿ ಕಾಲ-ಕಾಲಕ್ಕೆ ಬೆಳೆಗಳನ್ನು ಬದಲಾಯಿಸುವುದರಿಂದ ಬೆಳೆವಿಮೆ ಯೋಜನೆಯಲ್ಲಿ ರೈತರಿಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಈ ಹಿಂದಿನಂತೆ ಬೆಳೆವಿಮೆ ಕಂತು ಪಾವತಿ ನಿಯಮಗಳನ್ನು ಮುಂದುವರಿಸಬೇಕು. ಸಾಲಗಾರರು ಹಾಗೂ ಸಾಲಗಾರರಲ್ಲದ ರೈತರೆಂದು ವಿಂಗಡಿಸದೇ ಒಂದೇ ರೀತಿಯಲ್ಲಿ ಪರಿಗಣಿಸಿ ವಿಮಾ ಕಂತು ಪಾವತಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಿ.ಟಿ. ಸುರೇಶ ಅವರು ನೀಡಿದ ಸಮಜಾಯಿಷಿಗೆ ತೃಪ್ತರಾಗದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ರೈತರ ಬೇಡಿಕೆಗಳನ್ನು ಸರ್ಕಾರಕ್ಕೆ ತಲುಪಿಸುವಂತೆ ಪಟ್ಟು ಹಿಡಿದರು.ತಹಸೀಲ್ದಾರ್ ವಿಠ್ಠಲ ಚೌಗಲಾ ಮಾತನಾಡಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಸಭೆಗೆ ಬಾರದೇ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ. ಸಭೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದ್ದರೂ ಬಾರದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್ ಅವರಿಗೆ ಸೂಚಿಸಿದರು.
ತೋಟಗಾರಿಕೆ ಸಹಾಯಕ ನಿರ್ದೇಶಕ ಜಿ.ಆರ್. ವೀರಭದ್ರಸ್ವಾಮಿ, ವಿಮಾ ಕಂಪನಿಯ ಪ್ರತಿನಿಧಿಗಳಾದ ವೀರೇಶ ಬಡಿಗೇರ, ಬಸವರಾಜ ಹಿರೇಮಠ, ಸಹಕಾರ ಇಲಾಖೆ ಉಪನಿಬಂಧಕಿ ಪುಷ್ಪಾವತಿ, ಕೃಷಿ ಅಧಿಕಾರಿ ಸಂಗಮೇಶ ಹಕ್ಲಪ್ಪನವರ, ರೈತಸಂಘದ ಪದಾಧಿಕಾರಿಗಳಾದ ರುದ್ರಪ್ಪ ಹಣ್ಣಿ, ಅಡಿವೆಪ್ಪ ಆಲದಕಟ್ಟಿ, ಮಹೇಶ ವಿರೂಪಣ್ಣನವರ, ಮಾಲತೇಶ ಪರಪ್ಪನವರ, ಶ್ರೀಕಾಂತ ದುಂಡಣ್ಣನವರ, ಶ್ರೀಧರ ಮಲಗುಂದ, ಅಜ್ಜನಗೌಡ ಕರೇಗೌಡ್ರ, ಉಮೇಶ ಮೂಡಿ, ಮಲ್ಲನಗೌಡ ಮತ್ತಿಗಟ್ಟಿ, ಪಿ.ವಿ. ಪಾಟೀಲ ಉಪಸ್ಥಿತರಿದ್ದರು.ನೆರವಿಗೆ ಬರಬೇಕು: ಕಳೆದ ಸಾಲಿನ ಹವಾಮಾನ ಆಧರಿತ ಶುಂಠಿ, ಹಸಿಮೆಣಸು, ಮಾವು ಮತ್ತು ಅಡಕೆ ಟರ್ಮ್ ಶೀಟ್ ಅವಧಿ ಈಗಾಗಲೇ ಮುಗಿದು ಒಂಭತ್ತು ತಿಂಗಳು ಕಳೆದರೂ ವಿಮಾ ಪರಿಹಾರ ಮೊತ್ತ ರೈತರ ಖಾತೆಗೆ ಜಮಾ ಆಗಿಲ್ಲ. ಅಧಿಕಾರಿಗಳು ಇನ್ನೂ ಲೆಕ್ಕಾಚಾರದ ಹಂತದಲ್ಲಿದೆ ಎಂದು ಹೇಳುತ್ತಿದ್ದಾರೆ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಮಾ ಕಂಪನಿಗೆ ತಮ್ಮ ಪಾಲಿನ ವಂತಿಗೆ ಹಣ ಭರಣ ಮಾಡದಿರುವುದರಿಂದ ಜಮಾ ಆಗಿಲ್ಲ. ಈ ಕೂಡಲೇ ಸಂಬಂಧಿಸಿದ ಜನಪ್ರತಿನಿಧಿಗಳು ರೈತರ ನೆರವಿಗೆ ಬರಬೇಕು ಎಂದು ಹಾನಗಲ್ಲ ತಾಲೂಕು ರೈತಸಂಘದ ಅಧ್ಯಕ್ಷ ಮರಿಗೌಡ ಪಾಟೀಲ ಹೇಳಿದರು.